ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ವಿಯೆಟ್ನಾಂಗೆ ಖಾಸಗಿ ಪ್ರವಾಸ ಕೈಗೊಂಡಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ, ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ ಅವರ ನಿಶ್ಚಿತಾರ್ಥವು ಗೆಳತಿ ಅವಿವಾ ಬೇಗ್ ಅವರೊಂದಿಗೆ ರಣಥಂಬೋರ್‌ನಲ್ಲಿ ನಡೆದಿದೆ.

ನವದೆಹಲಿ: ಇತ್ತೀಚೆಗೆ ಜರ್ಮನಿ ಪ್ರವಾಸವನ್ನು ಮುಗಿಸಿ ಹಿಂತಿರುಗಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಕಳೆದ ಬಾರಿ ಹೊಸ ವರ್ಷದ ಸಮಯದಲ್ಲಿ ಅವರು ವಿಯೆಟ್ನಾಂನಲ್ಲಿ ಸುಮಾರು 22 ದಿನಗಳ ಕಾಲ ಕಳೆದಿದ್ದು, ನಂತರ ಕೆಲ ದಿನಗಳ ಅಂತರದಲ್ಲಿ ಮತ್ತೆ ಅಲ್ಲಿಗೆ ಭೇಟಿ ನೀಡಿದ್ದರು. ಇದೀಗ, ಶುಕ್ರವಾರ ಜನವರಿ 2, 2026ರಂದು ರಾಹುಲ್ ಗಾಂಧಿ ಮತ್ತೊಮ್ಮೆ ವಿಯೆಟ್ನಾಂಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಈ ವರ್ಷ ಎಷ್ಟು ದಿನ ಅಲ್ಲಿ ತಂಗಲಿದ್ದಾರೆ ಎಂಬುದು ಸ್ಪಷ್ಟವಿಲ್ಲ. ರಾಹುಲ್ ಗಾಂಧಿಯ ನಿರಂತರ ವಿದೇಶ ಪ್ರವಾಸಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.

ಅವರ ಪ್ರವಾಸದ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಇದು ಬಹಳ ಖಾಸಗಿ ಪ್ರವಾಸ ಎಂದು ಹೇಳಲಾಗುತ್ತಿದೆ. ಸಹೋದರಿಯ ಪುತ್ರ, ತನ್ನ ಅಳಿಯನ ವಿವಾಹ ಮಾತುಕತೆ ಹಿನ್ನೆಲೆಯಲ್ಲಿ ಕ್ಯಾನ್ಸಲ್ ಆಗಿದ್ದ ವಿದೇಶ ಪ್ರವಾಸ ಮತ್ತೆ ಮುಂದುವರೆದಿದೆ. ಕಳೆದ ವರ್ಷ 22 ದಿನ ವಿಯೆಟ್ನಾಂ ನಲ್ಲಿ ಇದ್ದ ಅವರು ಈ ಬಾರಿ ಎಷ್ಟು ದಿನಗಳ ಕಾಲ ತಂಗಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಸೋಷಿಯಲ್‌ ಮೀಡಿಯಾದಲ್ಲಿ ತರಹೇವಾರಿ ಕಮೆಂಟ್‌ಗಳು ಬರುತ್ತಿದೆ. ರಾಹುಲ್ ಗಾಂಧಿಯ ವಿದೇಶ ಪ್ರವಾಸದ ಮೋಹದ ಬಗ್ಗೆ ಪ್ರಶ್ನಿಸಲಾಗುತ್ತಿದೆ. ಜೊತೆಗೆ ಜನಪ್ರತಿನಿಧಿಗಳೆಂದರೆ ಕೇಳುವವರೇ ಇಲ್ವಾ ಎಂದು ಪ್ರಶ್ನೆಸಲಾಗುತ್ತಿದೆ.

ಗಾಂಧಿ - ವಾದ್ರಾ ಮಗನ ನಿಶ್ಚಿತಾರ್ಥ

ಇದರ ನಡುವೆಯೇ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ ಅವರ ನಿಶ್ಚಿತಾರ್ಥದ ಸುದ್ದಿ ಗಮನ ಸೆಳೆದಿದೆ. 25 ವರ್ಷದ ರೈಹಾನ್ ವಾದ್ರಾ ತಮ್ಮ ಏಳು ವರ್ಷಗಳ ದೀರ್ಘಕಾಲದ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ನಿಶ್ಚಿತಾರ್ಥ ಸಮಾರಂಭ ರಾಜಸ್ಥಾನದ ರಣಥಂಬೋರ್‌ನಲ್ಲಿ ಅದ್ದೂರಿಯಾಗಿ ನೆರವೇರಿತು ಎಂದು ತಿಳಿದುಬಂದಿದೆ.

ಅವಿವಾ ಬೇಗ್ ಮತ್ತು ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿದ್ದು, ಅವರ ತಂದೆ ಇಮ್ರಾನ್ ಬೇಗ್ ಒಬ್ಬ ಉದ್ಯಮಿ ಹಾಗೂ ತಾಯಿ ನಂದಿತಾ ಬೇಗ್ ಪ್ರಸಿದ್ಧ ಒಳಾಂಗಣ ವಿನ್ಯಾಸಕಿಯಾಗಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ನಂದಿತಾ ಬೇಗ್ ನಡುವೆ ದೀರ್ಘಕಾಲದ ಸ್ನೇಹವಿದ್ದು, ಕಾಂಗ್ರೆಸ್ ಪ್ರಧಾನ ಕಚೇರಿಯಾದ ಇಂದಿರಾ ಭವನದ ಒಳಾಂಗಣ ವಿನ್ಯಾಸ ಕಾರ್ಯದಲ್ಲಿ ನಂದಿತಾ ಬೇಗ್ ಅವರು ಪ್ರಿಯಾಂಕಾ ಗಾಂಧಿಗೆ ಸಹಾಯ ಮಾಡಿದ್ದರು ಎನ್ನಲಾಗುತ್ತದೆ.

ರಾಹುಲ್‌ ಅಳಿಯನ ವಿವಾಹ ಯಾವಾಗ?

ಡಿಸೆಂಬರ್ 29ರಂದು ರಣಥಂಬೋರ್‌ನಲ್ಲಿ ಎರಡೂ ಕುಟುಂಬಗಳ ಸದಸ್ಯರ ಸಮ್ಮುಖದಲ್ಲಿ ರೈಹಾನ್–ಅವಿವಾ ಮದುವೆ ಸಂಬಂಧಿತ ಮಾತುಕತೆಗಳು ನಡೆದಿದ್ದು, ಈ ಮೂಲಕ ಇಬ್ಬರ ಕುಟುಂಬಗಳ ಒಪ್ಪಿಗೆಯೊಂದಿಗೆ ನಿಶ್ಚಿತಾರ್ಥಕ್ಕೆ ಅಧಿಕೃತ ಮುದ್ರೆ ಬಿದ್ದಿದೆ. ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಈ ಬೆಳವಣಿಗೆಗಳು ವ್ಯಾಪಕ ಗಮನ ಸೆಳೆಯುತ್ತಿವೆ. ಈ ವರ್ಷದ ಜೂನ್‌ನಲ್ಲಿ ಮದುವೆ ಎಂದು ಹೇಳಲಾಗುತ್ತಿದೆ.