ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಪರೇಷನ್ ಸಿಂದೂರದ ಕದನವಿರಾಮದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ತೀವ್ರವಾಗಿ ಟೀಕಿಸಿದ್ದಾರೆ. 

ಭೋಪಾಲ್ (ಜೂ.4): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಪರೇಷನ್ ಸಿಂದೂರದ ಕದನವಿರಾಮದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒಂದು ಫೋನ್ ಕರೆಗೆ ಮೋದಿಯವರು ಭಯದಿಂದ ಕದನವಿರಾಮಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

'ಟ್ರಂಪ್ ಒಂದು ಫೋನ್ ಕರೆ ಮಾಡಿ ಗದರಿಸಿದ್ದಕ್ಕೆ ಬೆದರಿದ ಮೋದಿಯವರು ಕದನ ವಿರಾಮ ಘೋಷಿಸಿದ್ದಾರೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು. 1971ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭವನ್ನು ಉಲ್ಲೇಖಿಸಿದ ಅವರು, ಆಗ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ, ಅಮೆರಿಕದ ಸೆವೆಂತ್ ಫ್ಲೀಟ್ ಬಂದರೂ, ಯಾವುದೇ ಬೆದರಿಕೆಗೆ ಒಳಗಾಗದೆ ಪಾಕಿಸ್ತಾನವನ್ನು ಇಬ್ಭಾಗ ಮಾಡಿದ್ದರು. ಆದರೆ ಮೋದಿಯವರಿಗೆ ಈ ಧೈರ್ಯವಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಆರೆಸ್ಸೆಸ್ ವೀಕ್ನೆಸ್ ಗೊತ್ತಾ ಎಂದ ರಾಗಾ

ನಾನು ಈಗ ಬಿಜೆಪಿ-ಆರ್‌ಎಸ್‌ಎಸ್ ಜನರನ್ನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ಸ್ವಲ್ಪ ಒತ್ತಡ ಹಾಕಿದರೂ ಭಯದಿಂದ ಓಡಿಹೋಗುತ್ತಾರೆ. ಇತಿಹಾಸವೇ ಸಾಕ್ಷಿ, ಇದು ಬಿಜೆಪಿ-ಆರ್‌ಎಸ್‌ಎಸ್‌ನ ಸ್ವಭಾವ. ಇವರು ಯಾವಾಗಲೂ ಒತ್ತಡಕ್ಕೆ ಮಣಿಯುತ್ತಾರೆ ಎಂದು ಆರೋಪಿಸಿದರು. ಆದರೆ ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ಪಟೇಲ್ ಅವರು ಸರ್ವಶಕ್ತರ ವಿರುದ್ಧ ಹೋರಾಡುತ್ತಿದ್ದರು, ಎಂದಿಗೂ ಯಾರಿಗೂ ಮಂಡಿಯೂರಲಿಲ್ಲ. ಕಾಂಗ್ರೆಸ್‌ನ ಬಬ್ಬರ್ ಶೇರ್‌ಗಳು ಸೂಪರ್‌ಪವರ್‌ಗಳ ಜೊತೆಗೆ ಹೋರಾಡುತ್ತಾರೆ, ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು.

ಈ ಟೀಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರರು, ರಾಹುಲ್ ಗಾಂಧಿಯವರ ಈ ಹೇಳಿಕೆಗಳು ಪಾಕಿಸ್ತಾನದ ಐಎಸ್‌ಐಗೆ ಪರೋಕ್ಷವಾಗಿ ಬೆಂಬಲ ನೀಡುವಂತಿವೆ ಎಂದು ಆರೋಪಿಸಿದ್ದಾರೆ. ಭಾರತ ಸರ್ಕಾರವು ಕದನ ವಿರಾಮವು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಒಪ್ಪಂದವಾಗಿದ್ದು, ಯಾವುದೇ ಮೂರನೇ ದೇಶದ ಮಧ್ಯಸ್ಥಿಕೆ ಇಲ್ಲ ಎಂದು ಸ್ಪಷ್ಟಪಡಿಸಿದೆ.