2018 ರಲ್ಲಿ ಬಿಜೆಪಿ ವಿರುದ್ಧ ಮಾಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಚೈಬಾಸಾದ ವಿಶೇಷ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದೆ. ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಕೋರಿದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಜೂನ್ 26 ರಂದು ಹಾಜರಾಗುವಂತೆ ಸೂಚಿಸಿದೆ.
ಮಾನನಷ್ಟ ಮೊಕದ್ದಮೆಯಲ್ಲಿ ಜಾರ್ಖಂಡ್‌ನ ಚೈಬಾಸಾದ ವಿಶೇಷ ಸಂಸದ-ಶಾಸಕ ನ್ಯಾಯಾಲಯವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್, ಜೂನ್ 26 ರಂದು ಖುದ್ದಾಗಿ ಹಾಜರಾಗುವಂತೆ ರಾಹುಲ್ ಗಾಂಧಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
2018 ರಲ್ಲಿ, ಕಾಂಗ್ರೆಸ್ ಅಧಿವೇಶನದ ವೇಳೆ, ರಾಹುಲ್ ಗಾಂಧಿ ಅವರು ಬಿಜೆಪಿಯ ಕೊಲೆ ಆರೋಪ ಹೊತ್ತಿರುವ ಯಾರಾದರೂ ಸಹ ಬಿಜೆಪಿ ಅಧ್ಯಕ್ಷರಾಗಬಹುದು ಎಂದು ಹೇಳಿಕೆ ನೀಡಿದ್ದರು. ಆ ಸಮಯದಲ್ಲಿ ಅಮಿತ್ ಶಾ ಬಿಜೆಪಿ ಅಧ್ಯಕ್ಷರಾಗಿದ್ದರು. ಹೀಗಾಗಿ ರಾಹುಲ್ ಗಾಂಧಿ ಅವರ ಈ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ನಾಯಕ ಪ್ರತಾಪ್ ಕಟಿಯಾರ್ ಜುಲೈ 9, 2018 ರಂದು ದೂರು ದಾಖಲಿಸಿದ್ದರು.
ಪ್ರಾರಂಭದಲ್ಲಿ ಈ ಪ್ರಕರಣವನ್ನು ಚೈಬಾಸಾದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ಬಳಿಕ 2020 ರಲ್ಲಿ ಜಾರ್ಖಂಡ್ ಹೈಕೋರ್ಟ್ ಆದೇಶದ ನಂತರ ರಾಂಚಿಯ ಸಂಸದ-ಶಾಸಕ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಯ್ತು. ನಂತರ ಚೈಬಾಸಾದ ಸಂಸದ-ಶಾಸಕ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ನ್ಯಾಯಾಲಯವು ಪದೇ ಪದೇ ಸಮನ್ಸ್ ಜಾರಿ ಮಾಡಿದರೂ, ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಲಿಲ್ಲ. ಹೀಗಾಗಿ ನ್ಯಾಯಾಲಯವು ಮೊದಲು ಜಾಮೀನು ಸಹಿತ ವಾರಂಟ್ ಹೊರಡಿಸಿತು.
ಮಾರ್ಚ್ 2024 ರಲ್ಲಿ ಜಾರ್ಖಂಡ್ ಹೈಕೋರ್ಟ್ ಅವರ ತಡೆಯಾಜ್ಞೆ ಅರ್ಜಿಯನ್ನು ವಜಾಗೊಳಿಸಿದ ಬಳಿಕ ಖುದ್ದಾಗಿ ಹಾಜರಾಗಲು ವಿನಾಯಿತಿ ನೀಡಬೇಕೆಂದು ರಾಹುಲ್ ಗಾಂಧಿಯವರು ಮನವಿ ಮಾಡಿಕೊಂಡರು. ಆದರೆ ಚೈಬಾಸಾ ನ್ಯಾಯಾಲಯವು ಈ ಮನವಿಯನ್ನು ನಿರಾಕರಿಸಿತು. ಈ ಬಗ್ಗೆ ಕಠಿಣ ನಿಲುವು ತೆಗೆದುಕೊಂಡ ನ್ಯಾಯಾಲಯವು ಈಗ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಈ ಮೂಲಕ ರಾಹುಲ್ ಗಾಂಧಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ.
