ಭಾರತ್‌ ಜೋಡೋ ಯಾತ್ರೆಯು ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ ಹರಡುವ ಪಾದಯಾತ್ರೆಯಾಗಿದ್ದು, ಸರ್ಕಾರವು ಇದರಲ್ಲಿ ದ್ವೇಷ ರಾಜಕಾರಣ ಮಾಡಬಾರದು ಎಂದು ಕಾಂಗ್ರೆಸ್‌  ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಹೇಳಿದ್ದಾರೆ. 

ನವದೆಹಲಿ: ರಾಹುಲ್‌ ಗಾಂಧಿ ಹಮ್ಮಿಕೊಂಡಿರುವ ಭಾರತ್‌ ಜೋಡೋ ಯಾತ್ರೆಯಲ್ಲಿ ಹಲವು ಬಾರಿ ಭದ್ರತಾ ಲೋಪ ಸಂಭವಿಸಿದೆ. ರಾಹುಲ್‌ಗೆ ನೀಡಿರುವ ಝಡ್‌ಪ್ಲಸ್‌ ಭದ್ರತೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ದೆಹಲಿ ಪೊಲೀಸರು ವಿಫಲವಾಗಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಪತ್ರ ಬರೆದಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ‘ಭಾರತ್‌ ಜೋಡೋ ಯಾತ್ರೆಯು ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ ಹರಡುವ ಪಾದಯಾತ್ರೆಯಾಗಿದ್ದು, ಸರ್ಕಾರವು ಇದರಲ್ಲಿ ದ್ವೇಷ ರಾಜಕಾರಣ ಮಾಡಬಾರದು. ಸೂಕ್ಷ್ಮ ಪ್ರದೇಶಗಳಾದ ಪಂಜಾಬ್‌ ಮತ್ತು ಹರ್ಯಾಣ ರಾಜ್ಯಗಳಲ್ಲಿ ಯಾತ್ರೆ ಹಾಗೂ ರಾಹುಲ್‌ ಗಾಂಧಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು’ ಎಂದು ಕೋರಿದ್ದಾರೆ.

ಪಪ್ಪು ಎಂದರೆ ನಾನು ಚಿಂತಿಸಲ್ಲ: ರಾಹುಲ್‌ ಗಾಂಧಿ
ಕೆಲವರು ತಮ್ಮನ್ನು ಅಪಹಾಸ್ಯವಾಗಿ ಪಪ್ಪು ಎಂದು ಕರೆಯುವುದರ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್‌ ಗಾಂಧಿ, ‘ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅದೆಲ್ಲ ರಾಜಕೀಯದ ಭಾಗವಾಗಿದೆ. ನನ್ನ ಅಜ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಮೊದಲು ‘ಗೂಂಗಿ ಗುಡಿಯಾ’ ಎಂದು ಕರೆಯುತ್ತಿದ್ದ ಜನ ಬಳಿಕ ‘ಉಕ್ಕಿನ ಮಹಿಳೆ’ ಎಂದು ಕರೆದರು’ ಎಂದಿದ್ದಾರೆ. 
ಸಂದರ್ಶನವೊಂದರಲ್ಲಿ ಮಾತನಾಡಿದ ರಾಹುಲ್‌, ನನ್ನನ್ನು ಯಾರು ಹೇಗೆ ಕರೆದರೂ ನಾನು ಚಿಂತಿಸುವುದಿಲ್ಲ, ಬದಲಾಗಿ ಅದನ್ನು ಇಷ್ಟಪಟ್ಟು ಸ್ವೀಕರಿಸುತ್ತೇನೆ. ಹಾಗೆ ಕರೆಯುವವರ ಹೃದಯದಲ್ಲಿ ಏನಿದೆ ಎಂಬುದನ್ನು ಅದು ತೋರಿಸುತ್ತದೆ. ನಾನು ತಮ್ಮ ತಾಯಿ ಹಾಗೂ ಅಜ್ಜಿ ಇಬ್ಬರ ಗುಣಗಳನ್ನು ಹೊಂದಲು ಬಯಸುತ್ತೇನೆ ಎಂದರು.

ಇದನ್ನು ಓದಿ: ಈ 2 ಗುಣವಿದ್ದ ಹುಡುಗಿ ಒಕೆ, ಬಾಳ ಸಂಗಾತಿ ಕುರಿತು ಮನಬಿಚ್ಚಿ ಮಾತನಾಡಿದ ರಾಹುಲ್ ಗಾಂಧಿ!

ಅಜ್ಜಿ, ತಾಯಿಯ ಗುಣಗಳ ಮಿಶ್ರಣ ಹೊಂದಿರುವವಳು ಜೀವನ ಸಂಗಾತಿ: ರಾಹುಲ್‌ ಗಾಂಧಿ
ಇನ್ನು, ಜೀವನ ಸಂಗಾತಿ ಹೇಗಿರಬೇಕು ಎಂಬ ಕುರಿತು ಮೊದಲ ಬಾರಿಗೆ ಮೌನ ಮುರಿದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (52), ತಾಯಿ ಸೋನಿಯಾ ಗಾಂಧಿ ಹಾಗೂ ಅಜ್ಜಿ ಇಂದಿರಾ ಗಾಂಧಿಯವರ ಗುಣಗಳ ಮಿಶ್ರಣ ಹೊಂದಿರುವ ಮಹಿಳೆಗೆ ಜೀವನ ಸಂಗಾತಿಯಾಗಿ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ಯುಟ್ಯೂಬ್‌ ಚಾನಲ್‌ವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು ಇಂದಿರಾ ಗಾಂಧಿಯನ್ನು ‘ನನ್ನ ಜೀವನದ ಪ್ರೀತಿ ಹಾಗೂ ಎರಡನೇ ತಾಯಿ’ ಎಂದಿದ್ದಾರೆ.

ರಾಹುಲ್ ಇದೇ ಮೊದಲ ಬಾರಿಗೆ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಈ ವಿಡಿಯೋ ಸಂದರ್ಶನವನ್ನು ರಾಹುಲ್ ಗಾಂಧಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ರಾಹುಲ್ ಗಾಂಧಿ ಬಾಳ ಸಂಗಾತಿ ಕುರಿತು ನೀಡಿರುವ ಹೇಳಿಕೆ ವೈರಲ್ ಆಗಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ ಬಹಳ ಕಡೆ ಓಡಾಡಬೇಕು; ಅವರು ಓಡಾಡಿದಷ್ಟು ಬಿಜೆಪಿಗೆ ಲಾಭ: ಪ್ರಲ್ಹಾದ್ ಜೋಶಿ

ಭಾರತ್‌ ಜೋಡೋ ಯಾತ್ರೆಗೆ ಹಲವರಿಗೆ ಆಹ್ವಾನ
ಉತ್ತರಪ್ರದೇಶದಲ್ಲಿ ನಡೆಯುವ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗಿಯಾಗುವಂತೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌, ಬಿಎಸ್‌ಪಿಯ ಮಾಯಾವತಿ, ಆರ್‌ಎಲ್‌ಡಿಯ ಜಯಂತ್‌ ಸಿಂಗ್‌ಗೆ ರಾಹುಲ್‌ ಗಾಂಧಿ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಆಹ್ವಾನವನ್ನು ಮೂವರು ನಾಯಕರು ಒಪ್ಪಿರುವ ಅಥವಾ ತಿರಸ್ಕರಿಸಿರುವ ಮಾಹಿತಿ ಹೊರಬಿದ್ದಿಲ್ಲ. ಡಿಸೆಂಬರ್‌ 25 ರಿಂದ ಜನವರಿ 2 ರವರೆಗಿನ ವಿರಾಮದ ಬಳಿಕ ಜನವರಿ 3ರಂದು ಉತ್ತರಪ್ರದೇಶದ ಘಾಜಿಯಾಬಾದ್‌ನಿಂದ ಯಾತ್ರೆ ಪುನಾರಂಭಗೊಳ್ಳುತ್ತಿದೆ. ಈ ಆಹ್ವಾನದ ಮೂಲಕ ಸಮಾನಮನಸ್ಕ ಪಕ್ಷಗಳನ್ನು 2024ರ ಲೋಕಸಭಾ ಚುನಾವಣೆ ವೇಳೆಗೆ ಒಂದುಗೂಡಿಸುವ ಉದ್ದೇಶವನ್ನು ರಾಹುಲ್‌ ಗಾಂಧಿ ಹೊಂದಿದ್ದಾರೆ.