ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಎರಡನೇ ಚರಣ ಆರಂಭಗೊಳ್ಳುತ್ತಿದೆ. ಜನವರಿ ತಿಂಗಳಲ್ಲಿ ಯಾತ್ರೆ ಆರಂಭಗೊಳ್ಳುತ್ತಿದ್ದು, ಅರುಣಾಚಲ ಪ್ರದೇಶದಿಂದ ಗುಜರಾತ್ ವರೆಗೆ ಯಾತ್ರೆ ನಡೆಯಲಿದೆ.  

ನವದೆಹಲಿ(ಡಿ.21) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಆರಂಭಿಸಿದ ಭಾರತ್ ಜೋಡೋ ಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯಗೊಂಡಿತ್ತು. ದಕ್ಷಿಣದಿಂದ ಉತ್ತರದ ಕಡೆಗೆ ಯಾತ್ರೆ ಮಾಡಿದ ರಾಹುಲ್ ಗಾಂಧಿ ಇದೀಗ ಪಶ್ಚಿಮದಿಂದ ಪೂರ್ವದತ್ತ ಯಾತ್ರೆಗೆ ಸಜ್ಜಾಗಿದ್ದಾರೆ. ಭಾರತ್ ಜೋಡೋ ಎರಡನೇ ಚರಣ ಹೊಸ ವರ್ಷದಲ್ಲಿ ಆರಂಭಗೊಳ್ಳುತ್ತಿದೆ. ಮುಂದಿನ ತಿಂಗಳ ಅರುಣಾಚಲ ಪ್ರದೇಶದಿಂದ ಆರಂಭಗೊಳ್ಳಲಿರುವ ಭಾರತ್ ಜೋಡೋ ಯಾತ್ರೆ ಗುಜರಾತ್‌ನಲ್ಲಿ ಅಂತ್ಯಗೊಳ್ಳಲಿದೆ. ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ರಾಹುಲ್ ಗಾಂಧಿ ಎರಡನೇ ಚರಣದ ಯಾತ್ರೆ ಆಯೋಜಿಸಿದ್ದಾರೆ.

ಲೋಕಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ತೊಡಗಿರುವ ರಾಹುಲ್ ಗಾಂಧಿ ಕಾರ್ಯಕರ್ತರು ಹಾಗೂ ನಾಯಕರಲ್ಲಿ ಹೊಸ ಹುರುಪು ತುಂಬಲು ನಿರ್ಧರಿಸಿದ್ದಾರೆ. ಹಿಮಾಚಲ ಪ್ರದೇಶ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್ ಇದೀಗ ಲೋಕಸಭೆ ಮೇಲೆ ಕಣ್ಣಿಟ್ಟಿದೆ. ಇಂಡಿ ಮೈತ್ರಿ ಕೂಟ ಮಾಡಿಕೊಂಡಿರುವ ಕಾಂಗ್ರೆಸ್ ವಿಪಕ್ಷಗಳು ಸಂಘಟಿತರಾಗಿ ಹೋರಾಟಕ್ಕೆ ಸಜ್ಜಾಗಿದೆ. ಇದಕ್ಕೆ ಭಾರತ್ ಜೋಡೋ ಯಾತ್ರೆ ನೆರವಾಗಲಿದೆ ಅನ್ನೋದು ಕಾಂಗ್ರೆಸ್ ನಾಯಕರ ಅಭಿಪ್ರಾಯ.

ಇನ್ನೂ ಒಂದು ವಾರ ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ವಿಳಂಬ: ಡಿಕೆಶಿ ಒತ್ತಡಕ್ಕೆ ಮಣಿದು ರಾಹುಲ್ ಈ ಸೂಚನೆ ನೀಡಿದ್ರಾ..!

ಮೊದಲ ಚರಣದಲ್ಲಿ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದರು. ಸೆಪ್ಟೆಂಬರ್ 7, 2022ರಲ್ಲಿ ಆರಂಭಿಸಿದ ಈ ಯಾತ್ರೆ 12 ರಾಜ್ಯಗಳ ಮೂಲಕ ಹಾದು ಹೋಗಿತ್ತು. 4,000 ಕಿಲೋಮೀಟರ್ ಸಾಗಿದ ಈ ಯಾತ್ರೆ 136 ದಿನಗಳ ಕಾಲ ನಡೆದಿತ್ತು. 

ಮೊದಲ ಚರಣದ ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶ ಸೇರಿದಂತೆ ಇತ್ತೀಚೆಗೆ ಚುನಾವಣೆ ನಡೆದ ಕೆಲ ರಾಜ್ಯಗಳ ಮೂಲಕ ಹಾದು ಹೋಗಿತ್ತು. ಆದರೆ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಘಡ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ವಿಶೇಷ ಅಂದರೆ ಮಧ್ಯಪ್ರದೇಶದಲ್ಲಿ ಯಾತ್ರೆ ನಡೆದ 21 ಕ್ಷೇತ್ರಗಳ ಪೈಕಿ 17ರಲ್ಲಿ ಬಿಜೆಪಿ ಜಯಗಳಿಸಿದೆ. ಕಳೆದ ವರ್ಷ ನ.23ರಿಂದ ಡಿ.4ರವರೆಗೆ ಮಧ್ಯಪ್ರದೇಶದ 6 ಜಿಲ್ಲೆಗಳ 21 ಕ್ಷೇತ್ರಗಳಲ್ಲಿ ಸುಮಾರು 380 ಕಿ.ಮೀ. ದೂರ ರಾಹುಲ್‌ ಗಾಂಧಿ ಪಾದಯಾತ್ರೆ ಕೈಗೊಂಡಿದ್ದರು. 2018ರಲ್ಲಿ ಈ ಕ್ಷೇತ್ರಗಳಲ್ಲಿ ಬಿಜೆಪಿ 14ರಲ್ಲಷ್ಟೇ ಜಯಗಳಿಸಿತ್ತು.

ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಪ್ರಸ್ತಾಪ, ಇಂಡಿ ಮೈತ್ರಿ ಒಕ್ಕೂಟದಲ್ಲಿ ಅಪಸ್ವರ?

ಸೆಪ್ಟೆಂಬರ್ 2, 2023ಕ್ಕೆ ದೇಶಾದ್ಯಂತ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯ ವರ್ಷಾಚರಣೆ ಆಚರಿಸಿತ್ತು. ಜಿಲ್ಲೆ ಜಿಲ್ಲೆಗಳಲ್ಲಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುವ ಮೂಲಕ ವರ್ಷಾಚರಣೆ ನಡೆಸಿತ್ತು.