Asianet Suvarna News Asianet Suvarna News

RIP Rahul Bajaj: ಉದ್ಯಮಕ್ಕೆ ಹೊಸ ಸ್ವರೂಪ ಕೊಟ್ಟ ರಾಹುಲ್‌ ಬಜಾಜ್‌

ಸ್ವಾತಂತ್ರ್ಯಾನಂತರದಲ್ಲಿ ಭಾರತ ಕಂಡ ಅಪರೂಪದ, ದೇಶದ ಉದ್ಯಮ ಲೋಕಕ್ಕೆ ಹೊಸ ಸ್ವರೂಪ ಕೊಟ್ಟ ಕೆಲವೇ ಕೆಲವು ಉದ್ಯಮಗಳಲ್ಲಿ ರಾಹುಲ್‌ ಬಜಾಜ್‌ ಕೂಡಾ ಒಬ್ಬರು. ತಮ್ಮ ಅಜ್ಜ ಜಮ್ನಾಲಾಲ್‌ ಬಜಾಜ್‌ ಅವರು 1926ರಲ್ಲಿ ಕಟ್ಟಿದ ಪುಟ್ಟಬಜಾಜ್‌ ಕಂಪನಿಯನ್ನು ದೇಶದ ಅತಿದೊಡ್ಡ ಉದ್ಯಮ ಸಮೂಹವಾಗಿ ಬೆಳೆಸಿದ ಖ್ಯಾತಿ ರಾಹುಲ್‌ರದ್ದು.

Rahul Bajaj was a titan whose success transcended business gvd
Author
Bangalore, First Published Feb 13, 2022, 1:37 AM IST | Last Updated Feb 13, 2022, 7:56 AM IST

ನವದೆಹಲಿ (ಫೆ.13): ಸ್ವಾತಂತ್ರ್ಯಾನಂತರದಲ್ಲಿ ಭಾರತ ಕಂಡ ಅಪರೂಪದ, ದೇಶದ ಉದ್ಯಮ ಲೋಕಕ್ಕೆ ಹೊಸ ಸ್ವರೂಪ ಕೊಟ್ಟ ಕೆಲವೇ ಕೆಲವು ಉದ್ಯಮಗಳಲ್ಲಿ ರಾಹುಲ್‌ ಬಜಾಜ್‌ (Rahul Bajaj) ಕೂಡಾ ಒಬ್ಬರು. ತಮ್ಮ ಅಜ್ಜ ಜಮ್ನಾಲಾಲ್‌ ಬಜಾಜ್‌ ಅವರು 1926ರಲ್ಲಿ ಕಟ್ಟಿದ ಪುಟ್ಟ ಬಜಾಜ್‌ ಕಂಪನಿಯನ್ನು ದೇಶದ ಅತಿದೊಡ್ಡ ಉದ್ಯಮ ಸಮೂಹವಾಗಿ ಬೆಳೆಸಿದ ಖ್ಯಾತಿ ರಾಹುಲ್‌ರದ್ದು. 4 ದಶಕಗಳ ಕಾಲ ಬಜಾಜ್‌ ಉದ್ಯಮವನ್ನು ಮುನ್ನಡೆಸಿ, ನಂತರದ ಒಂದು ದಶಕಗಳ ಕಾಲ ಅದಕ್ಕೆ ಬೆನ್ನೆಲುವಾಗಿ ನಿಂತು, ಇತರೆ ಉದ್ಯಮ ಸಮೂಹಕ್ಕೆ ದಾರಿದೀಪವಾಗಿಯೂ ರಾಹುಲ್‌ ಪರಿಚಿತರು.

ಬಜಾಜ್‌ ಕಂಪನಿ ಕಂಪೆನಿ ತಂದೆಯ ನೇತೃತ್ವದಲ್ಲಿರುವಾಗಲೇ ರಾಹುಲ್‌ ಅವರು ಡೆಪ್ಯೂಟಿ ಮ್ಯಾನೇಜರ್‌ ಆಗಿ ಸೇರಿಕೊಂಡರು. ಈ ಸಮಯದಲ್ಲಿ ರಾಹುಲ್‌ ಕಂಪನಿಯ ಮಾರ್ಕೆಟಿಂಗ್‌, ಅಕೌಂಟ್ಸ್‌, ಖರೀದಿ ಮತ್ತು ಆಡಿಟ್‌ ವಿಭಾಗಗಳ ಮುಖ್ಯಸ್ಥರಾಗಿ ಕೆಲಸ ಮಾಡಿ ಅಪಾರ ಅನುಭವವನ್ನು ಪಡೆದುಕೊಂಡರು. ಆ ಸಮಯದಲ್ಲಿ ಕಂಪನಿಯ ಸಿಇಒ ಆಗಿದ್ದ ನಾವಲ್‌.ಕೆ.ಫಿರೋಡಿಯಾ ಅವರಿಂದ ಕಲಿತದ್ದು, ಕಂಪನಿಯನ್ನು ಬಹು ಎತ್ತರಕ್ಕೆ ಕೊಂಡೊಯ್ಯಲು ಇವರಿಗೆ ಸಹಾಯ ಮಾಡಿತು. ತಂದೆಯ ನಿಧನದ ನಂತರ 1972ರಲ್ಲಿ ಬಜಾಜ್‌ ಆಟೋ ನೇತೃತ್ವ ವಹಿಸಿಕೊಂಡರು. ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕಂಪನಿಯ ಅಭಿವೃದ್ಧಿಗೆ ಶ್ರಮಿಸಿದರು.

1970-80ರ ದಶಕದಲ್ಲಿ ಇವರ ಕಾರ್ಯಕ್ಷಮತೆಯಿಂದ ಕಂಪನಿ ಬಿಲಿಯನ್‌ ಡಾಲರ್‌ ಕಂಪನಿಯಾಗಿ ರೂಪುಗೊಂಡಿತು. ಇವರು ವೆಸ್ಪಾ ಮಾದರಿಯನ್ನು ಇಟ್ಟುಕೊಂಡು ಬಿಡುಗಡೆ ಮಾಡಿದ ಬಜಾಜ್‌ ಚೇತಕ್‌ ಸ್ಕೂಟರ್‌ ಭಾರತೀಯರ ಮನಸ್ಸನ್ನು ಸೂರೆಗೊಂಡಿತು. ಭಾರತದ ಹಲವಾರು ಕುಟುಂಬಗಳಿಗೆ ಇದು ಚಕ್ರ ನೀಡಿತು. ಕಂಪನಿಗೆ ಬೃಹತ್‌ ಮಟ್ಟದ ಲಾಭವನ್ನೂ ತಂದುಕೊಟ್ಟಿತು.

RIP Rahul Bajaj: ಬಜಾಜ್ ಆಟೋ ಮಾಜಿ ಅಧ್ಯಕ್ಷ, ಭಾರತದ ಅಗ್ರಗಣ್ಯ ಉದ್ಯಮಿ ರಾಹುಲ್ ಬಜಾಜ್ ನಿಧನ!

2001ರಲ್ಲಿ ಭಾರತದ ಮಾರುಕಟ್ಟೆಗೆ ಹೊಸ ಮಾದರಿಯ ಬೈಕುಗಳನ್ನು ಬಿಡುಗಡೆ ಮಾಡಿದ ಹೋಂಡಾ, ಯಮಹಾ ಮತ್ತು ಸುಝುಕಿ ಕಂಪನಿಗಳಿಂದ ಬಜಾಜ್‌ನ ಮಾರುಕಟ್ಟೆಮೌಲ್ಯ ಕುಸಿಯಿತು. ಆದರೆ ಸ್ವಲ್ಪ ಸಮಯದಲ್ಲೇ ಈ ಹಿನ್ನಡೆಯನ್ನು ಮೆಟ್ಟಿನಿಲ್ಲುವಲ್ಲಿ ರಾಹುಲ್‌ ಯಶಸ್ವಿಯಾದರು. ಬಜಾಜ್‌ನಿಂದ ಪಲ್ಸರ್‌ ಬೈಕ್‌ ಬಿಡುಗಡೆ ಮಾಡುವ ಮೂಲಕ ಮತ್ತೆ ಆಟೋಮೊಬೈಲ್‌ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿದರು. 2008ರಲ್ಲಿ ಬಜಾಜ್‌ ಆಟೋ ಕಂಪನಿಯನ್ನು 3 ವಿಭಾಗಗಳಾಗಿ ಮಾಡಿದರು. ಇವುಗಳನ್ನು ಇವರ ಇಬ್ಬರು ಮಕ್ಕಳು ನಿರ್ವಹಿಸುತ್ತಿದ್ದಾರೆ.

ಸಾರ್ಥಕ ಬದುಕು: 1938ರಲ್ಲಿ ಕೋಲ್ಕತಾದಲ್ಲಿ ಜನಿಸಿದ ರಾಹುಲ್‌ ಬಜಾಜ್‌, ತಮ್ಮ ಅಜ್ಜ ಜಮ್ನಾಲಾಲ್‌ ಬಜಾಜ್‌ ಸ್ಥಾಪಿಸಿದ್ದ ಬಜಾಜ್‌ ಕಂಪನಿಗೆ 1965ರಲ್ಲಿ ಸಿಇಒ ಆಗಿ ನೇಮಕವಾದರು. ಆಗ ಕೇವಲ 7.2 ಕೋಟಿ ರು.ವಹಿವಾಟು ಹೊಂದಿದ್ದ ಕಂಪನಿಯನ್ನು ಮುಂದಿನ 5 ದಶಕದಲ್ಲಿ 12000 ಕೋಟಿ ರು.ವರೆಗೆ ವಿಸ್ತರಿಸಿದ್ದು ಇವರ ಹಿರಿಮೆ. 

ಜೊತೆಗೆ ಲೈಸೆನ್ಸ್‌ ರಾಜ್‌ ಯುಗದಿಂದ ಮುಕ್ತ ಆರ್ಥಿಕತೆಗೆ ದೇಶ ತೆರೆದುಕೊಂಡ ಅವಧಿಯಲ್ಲಿ ಕಂಪನಿಯ ವ್ಯಾಪ್ತಿಯನ್ನು ಆಟೋಮೊಬೈಲ್‌, ವಿಮೆ, ಹೂಡಿಕೆ, ಗ್ರಾಹಕ ಹಣಕಾಸು ವ್ಯವಹಾರ, ಗೃಹ ಬಳಕೆ ಉತ್ಪನ್ನಗಳು, ಎಲೆಕ್ಟ್ರಿಕ್‌ ಲ್ಯಾಂಪ್‌, ಪವನ ಶಕ್ತಿ, ಉಕ್ಕು, ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಿಗೆ ವಿಸ್ತರಿಸಿ, ಭಾರತೀಯ ಉದ್ಯಮ ವಲಯವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದು ರಾಹುಲ್‌ ಅವರ ಹೆಗ್ಗಳಿಕೆ.

ಅದರಲ್ಲೂ ಸವಾಲುಗಳನ್ನು ಎದುರಿಸಿ ಬಜಾಜ್‌ ಸ್ಕೂಟರ್‌ ಬ್ರ್ಯಾಂಡ್‌ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿ, ದೇಶದ ಮಧ್ಯಮ ವರ್ಗದ ಬೈಕ್‌ ಕನಸನ್ನು ದಶಕಗಳ ಕಾಲ ಈಡೇರಿಸಿದ್ದು ಅವರ ಬಹುದೊಡ್ಡ ಸಾಧನೆಗಳಲ್ಲಿ ಒಂದು. 5 ದಶಕಗಳ ಹಿಂದಿನ ಚೇತಕ್‌ ಸ್ಕೂಟರ್‌ನ ಜಾಹೀರಾತು ಘೋಷಣೆ ‘ಹಮಾರಾ ಬಜಾಜ್‌’ ಇಂದಿಗೂ ಜನಮಾನಸದಲ್ಲಿ ಉಳಿದಿರುವುದು ಇದಕ್ಕೆ ಸಾಕ್ಷಿ.

ಭಯ ಇದೆ ಎಂದಿದ್ದರು ಬಜಾಜ್: ಮತ್ತೆ ಶಾ ಎದುರು ಹೇಗೆ ಹಾಕಿದರು ಆವಾಜ್?

2005ರಲ್ಲಿ ಉದ್ಯಮವನ್ನು ತಮ್ಮ ಪುತ್ರ ರಾಜೀವ್‌ ಬಜಾಜ್‌ಗೆ ಹಸ್ತಾಂತರಿಸುವ ಮೂಲಕ ನಿಧಾನವಾಗಿ ಮುಖ್ಯ ಭೂಮಿಕೆಯಿಂದ ಹಿಂದೆ ಸರಿಯಲು ಆರಂಭಿಸಿದ ರಾಹುಲ್‌, 2006ರಲ್ಲಿ ರಾಜ್ಯಸಭಾ ಸದಸ್ಯರಾಗಿಯೂ ನೇಮಕಗೊಂಡಿದ್ದರು. ಮಾತು ಕಡಿಮೆಯಾದರೂ, ಅಧಿಕಾರಶಾಹಿಯ ವಿರುದ್ಧ ನೇರಾನೇರಾ ನಿಷ್ಠುರ ಮಾತುಗಳಿಗಾಗಿ ರಾಹುಲ್‌ ಬಜಾಜ್‌ ಅವರನ್ನು ಉದ್ಯಮ ವಲಯ ಸದಾ ನೆನಪಿಸಿಕೊಳ್ಳುತ್ತದೆ. ಏರ್‌ ಇಂಡಿಯಾ, ಐಐಟಿ ಬಾಂಬೆ, ಭಾರತೀಯ ಕೈಗಾರಿಕಾ ಒಕ್ಕೂಟ, ವಿಶ್ವ ಆರ್ಥಿಕ ವೇದಿಕೆ, ಐಬಿಸಿ ಸೇರಿದಂತೆ ಹಲವು ಉನ್ನತ ಸಂಸ್ಥೆಗಳಲ್ಲಿ ಅಧ್ಯಕ್ಷ ಹುದ್ದೆಗಳನ್ನೂ ನಿರ್ವಹಿಸಿದ್ದ ಇವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಿ ಗೌರವಿಸಿತ್ತು.

Latest Videos
Follow Us:
Download App:
  • android
  • ios