ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಉದ್ಯಮಿ ರಾಹುಲ್ ಬಜಾಜ್| ಮೋದಿ ಸರ್ಕಾರವನ್ನು ಟೀಕೆ ಮಾಡಲು ಭಯವಾಗುತ್ತದೆ ಎಂದ ಬಜಾಜ್ ಗ್ರೂಪ್ ಮಾಲೀಕ| ‘ಯುಪಿಎ ಅವಧಿಯಲ್ಲಿ ಯಾರನ್ನಾದರೂ ಟೀಕಿಸಬಹುದಿತ್ತು’| ದೇಶದಲ್ಲಿ ಭಯದ ವಾತಾವರಣ ಇದೆ ಎಂದ ರಾಹುಲ್ ಬಜಾಜ್| ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದೆಯೇ ಮೋದಿ ಸರ್ಕಾರವನ್ನು ಟೀಕಿಸಿದ ಬಜಾಜ್| ರಾಹುಲ್ ಬಜಾಜ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ| ಭಯದ ವಾತಾವರಣದ ಆರೋಪ ನಿರಾಕರಿಸಿದ ಕೇಂದ್ರ ಸರ್ಕಾರ|
ಮುಂಬೈ(ಡಿ.02): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಟೀಕಿಸಲು ಜನ ಹೆದರುತ್ತಾರೆ ಎಂಬ ಪ್ರಖ್ಯಾತ ಉದ್ಯಮಿ ಹಾಗೂ ಬಜಾಜ್ ಗ್ರೂಪ್ ಮಾಲೀಕ ರಾಹುಲ್ ಬಜಾಜ್ ಹೇಳಿಕೆ ತೀವ್ರ ವಿರೋಧ ಸೃಷ್ಟಿಸಿದೆ.
ಮೋದಿ ಸರ್ಕಾರವನ್ನು ಟೀಕಿಸಲು ಜನ ಭಯ ಪಡುತ್ತಿದ್ದು, ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ರಾಹುಲ್ ಬಜಾಜ್ ಟೀಕಿಸಿದ್ದಾರೆ.
ಮುಂಬೈನಲ್ಲಿ ಎಕನಾಮಿನ್ ಟೈಮ್ಸ್ ಆಯೋಜಿಸಿದ್ದ ‘ಇಟಿ ಅವಾರ್ಡ್ಸ್‘ ಕಾರ್ಯಕ್ರಮದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದೆಯೇ ರಾಹುಲ್ ಬಜಾಜ್ ಈ ರೀತಿ ಹೇಳಿಕೆ ನೀಡಿದ್ದು ವಿಶೇಷ.
ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರ್ಕಾರ ಅವಧಿಯಲ್ಲಿ ನಾವು ಯಾರನ್ನು ಬೇಕಾದರೂ ಟೀಕಿಸಬಹುದಿತ್ತು. ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಟೀಕೆ ಮಾಡಲು ಭಯವಾಗುತ್ತಿದೆ ಎಂದು ಬಜಾಜ್ ಹೇಳಿದರು.
ಪ್ರಧಾನಿ ಮೋದಿ ಸರ್ಕಾರ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದು, ಕೆಲವು ಆತಂಕಕಾರಿ ಘಟನೆಗಳೂ ನಡೆಯುತ್ತಿವೆ. ಆದರೆ ಈ ಕುರಿತು ಧ್ವನಿ ಎತ್ತಲು ಉದ್ಯಮ ರಂಗದ ಯಾರೊಬ್ಬರು ಮುಂದಾಗುತ್ತಿಲ್ಲ ಎಂದು ರಾಹುಲ್ ಬಜಾಜ್ ಹೇಳಿದರು. ಗುಂಪು ಹತ್ಯೆಗಳ ಕುರಿತು ರಾಹುಲ್ ಬಜಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಶಾ ಎದುರೇ ಉದ್ಯಮಿ ಖಡಕ್ ಮಾತು : ಹೆದರಬೇಡಿ ಎಂದ ವಿಡಿಯೋ ವೈರಲ್
ಇನ್ನು ಬಜಾಜ್ ಆರೋಪಗಳಿಗೆ ಉತ್ತರಿಸಿದ ಅಮಿತ್ ಶಾ, ದೇಶದಲ್ಲಿ ಭಯದ ವಾತಾವರಣ ಇದೆ ಎಂಬುದು ಸುಳ್ಳು ಎಂದು ಹೇಳಿದರು. ಅದಾಗ್ಯೂ ಬಜಾಜ್ ಪ್ರಸ್ತಾಪಿಸಿದ ಅಂಶಗಳ ಕುರಿತು ಗಮನಹರಿಸಲಾಗುವುದು ಎಂದು ಶಾ ಭರವಸೆ ನೀಡಿದರು.
ಇನ್ನು ಮೋದಿ ಸರ್ಕಾರವನ್ನು ಟೀಕಸಿದ ರಾಹುಲ್ ಬಜಾಜ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತೊವಾಗಿದ್ದು, ಯುಪಿಎ ಅವಧಿಯಲ್ಲಿ ಲಾಭ ಮಾಡಿಕೊಂಡ ಬಜಾಜ್ ಸೋನಿಯಾ ಗಾಂಧಿ ಅವರನ್ನು ಹೊಗಳುವುದು ಅನಿವಾರ್ಯ ಎಂದು ನೆಟ್ಟಿಗರು ಹರಿಹಾಯ್ದಿದ್ದಾರೆ.
ಕೇಂದ್ರ ಸರ್ಕಾರದ ಸ್ಪಷ್ಟನೆ:
ಇನ್ನು ಉದ್ಯಮಿ ರಾಹುಲ್ ಬಜಾಜ್ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, ದೇಶದಲ್ಲಿ ಭಯದ ವಾತಾವರಣ ಇದೆ ಎಂಬುದು ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ, ದೇಶದಲ್ಲಿ ಭಯದ ವಾತಾವರಣ ಇದೆ ಎಂಬುದು ನಿಜವಾದರೆ ಗೃಹ ಸಚಿವರ ಮುಂದೆ ಬಜಾಜ್ ಇಷ್ಟು ಧೈರ್ಯವಾಗಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
