RIP Rahul Bajaj: ಬಜಾಜ್ ಆಟೋ ಮಾಜಿ ಅಧ್ಯಕ್ಷ, ಭಾರತದ ಅಗ್ರಗಣ್ಯ ಉದ್ಯಮಿ ರಾಹುಲ್ ಬಜಾಜ್ ನಿಧನ!

ರಾಹುಲ್ ಬಜಾಜ್ ಅವರಿಗೆ ನ್ಯುಮೋನಿಯಾ ಮತ್ತು ಹೃದಯ ಸಮಸ್ಯೆಯೂ ಇತ್ತು. ಕಳೆದ ಒಂದು ತಿಂಗಳಿನಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ರೂಬಿ ಹಾಲ್ ಕ್ಲಿನಿಕ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಪುರವೇಜ್ ಗ್ರಾಂಟ್ ಹೇಳಿದ್ದಾರೆ

Industrialist Rahul Bajaj former chairman of Bajaj Group passes away at 83 mnj

ಪುಣೆ (ಫೆ. 12): ದೇಶದ ಖ್ಯಾತನಾಮ ಉದ್ಯಮಿ, ಬಜಾಜ್‌ ಸಮೂಹದ ಮಾಜಿ ಅಧ್ಯಕ್ಷ, ‘ಹಮಾರಾ ಬಜಾಜ್‌ ಸ್ಕೂಟರ್‌’ ಖ್ಯಾತಿಯ ರಾಹುಲ್‌ ಬಜಾಜ್‌ (83) ಅಲ್ಪ ಕಾಲದ ಅನಾರೋಗ್ಯದ ಬಳಿಕ ಶನಿವಾರ ಪುಣೆಯಲ್ಲಿ ನಿಧನರಾದರು. ಅವರು ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಭಾನುವಾರ ಪುಣೆಯಲ್ಲಿ ಅಂತ್ಯಸಂಸ್ಕಾರ ಪ್ರಕ್ರಿಯೆಗಳು ನಡೆಯಲಿವೆ. ಇದರೊಂದಿಗೆ ಸ್ವಾತಂತ್ರೋತ್ತರ ಸಮಯದಲ್ಲಿ ದೇಶ ಕಂಡ ಮಹಾನ್‌ ಉದ್ಯಮಿ, ಕನಸುಗಾರ, ದಾನಿ, ನಿಷ್ಠುರವಾದಿಯೊಬ್ಬರನ್ನು ದೇಶ ಕಳೆದುಕೊಂಡಂತಾಗಿದೆ.

ರಾಹುಲ್‌ ಬಜಾಜ್‌ರ ನಿಧನಕ್ಕೆ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ್‌ ರಾಹುಲ್‌ ಗಾಂಧಿ, ಉದ್ಯಮ ವಲಯದ ಎಲ್ಲಾ ಪ್ರಮುಖರು ಕಂಬನಿ ಮಿಡಿದಿದ್ದಾರೆ. ಜೊತೆಗೆ ದೇಶದ ಉದ್ಯಮ ವಲಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದರ ಜೊತೆಗೆ, ಜಾಗತಿಕ ಮಟ್ಟದಲ್ಲೂ ಭಾರತೀಯ ಉದ್ಯಮದ ಛಾಪು ಮೂಡಿಸಿ, ಇತರೆ ಉದ್ಯಮಗಳಿಗೆ ದಾರಿದೀಪವಾಗಿದ್ದ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ: RIP Rahul Bajaj: ಮಧ್ಯಮ ವರ್ಗದ ಸ್ಕೂಟರ್‌ ಕನಸಿಗೆ ಜೀವಕೊಟ್ಟ ಉದ್ಯಮಿ

ಸಾರ್ಥಕ ಬದುಕು:1938ರಲ್ಲಿ ಕೋಲ್ಕತಾದಲ್ಲಿ ಜನಿಸಿದ ರಾಹುಲ್‌ ಬಜಾಜ್‌, ತಮ್ಮ ಅಜ್ಜ ಜಮ್ನಾಲಾಲ್‌ ಬಜಾಜ್‌ ಸ್ಥಾಪಿಸಿದ್ದ ಬಜಾಜ್‌ ಕಂಪನಿಗೆ 1965ರಲ್ಲಿ ಸಿಇಒ ಆಗಿ ನೇಮಕವಾದರು. ಆಗ ಕೇವಲ 7.2 ಕೋಟಿ ರು.ವಹಿವಾಟು ಹೊಂದಿದ್ದ ಕಂಪನಿಯನ್ನು ಮುಂದಿನ 5 ದಶಕದಲ್ಲಿ 12000 ಕೋಟಿ ರು.ವರೆಗೆ ವಿಸ್ತರಿಸಿದ್ದು ಇವರ ಹಿರಿಮೆ. ಜೊತೆಗೆ ಲೈಸೆನ್ಸ್‌ ರಾಜ್‌ ಯುಗದಿಂದ ಮುಕ್ತ ಆರ್ಥಿಕತೆಗೆ ದೇಶ ತೆರೆದುಕೊಂಡ ಅವಧಿಯಲ್ಲಿ ಕಂಪನಿಯ ವ್ಯಾಪ್ತಿಯನ್ನು ಆಟೋಮೊಬೈಲ್‌, ವಿಮೆ, ಹೂಡಿಕೆ, ಗ್ರಾಹಕ ಹಣಕಾಸು ವ್ಯವಹಾರ, ಗೃಹ ಬಳಕೆ ಉತ್ಪನ್ನಗಳು, ಎಲೆಕ್ಟ್ರಿಕ್‌ ಲ್ಯಾಂಪ್‌, ಪವನ ಶಕ್ತಿ, ಉಕ್ಕು, ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಿಗೆ ವಿಸ್ತರಿಸಿ, ಭಾರತೀಯ ಉದ್ಯಮ ವಲಯವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದು ರಾಹುಲ್‌ ಅವರ ಹೆಗ್ಗಳಿಕೆ.

ಅದರಲ್ಲೂ ಸವಾಲುಗಳನ್ನು ಎದುರಿಸಿ ಬಜಾಜ್‌ ಸ್ಕೂಟರ್‌ ಬ್ರ್ಯಾಂಡ್‌ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿ, ದೇಶದ ಮಧ್ಯಮ ವರ್ಗದ ಬೈಕ್‌ ಕನಸನ್ನು ದಶಕಗಳ ಕಾಲ ಈಡೇರಿಸಿದ್ದು ಅವರ ಬಹುದೊಡ್ಡ ಸಾಧನೆಗಳಲ್ಲಿ ಒಂದು. 5 ದಶಕಗಳ ಹಿಂದಿನ ಚೇತಕ್‌ ಸ್ಕೂಟರ್‌ನ ಜಾಹೀರಾತು ಘೋಷಣೆ ‘ಹಮಾರಾ ಬಜಾಜ್‌’ ಇಂದಿಗೂ ಜನಮಾನಸದಲ್ಲಿ ಉಳಿದಿರುವುದು ಇದಕ್ಕೆ ಸಾಕ್ಷಿ.

ಇದನ್ನೂ ಓದಿ: RIP Rahul Bajaj: ಉದ್ಯಮಕ್ಕೆ ಹೊಸ ಸ್ವರೂಪ ಕೊಟ್ಟ ರಾಹುಲ್‌ ಬಜಾಜ್‌

2005ರಲ್ಲಿ ಉದ್ಯಮವನ್ನು ತಮ್ಮ ಪುತ್ರ ರಾಜೀವ್‌ ಬಜಾಜ್‌ಗೆ ಹಸ್ತಾಂತರಿಸುವ ಮೂಲಕ ನಿಧಾನವಾಗಿ ಮುಖ್ಯ ಭೂಮಿಕೆಯಿಂದ ಹಿಂದೆ ಸರಿಯಲು ಆರಂಭಿಸಿದ ರಾಹುಲ್‌, 2006ರಲ್ಲಿ ರಾಜ್ಯಸಭಾ ಸದಸ್ಯರಾಗಿಯೂ ನೇಮಕಗೊಂಡಿದ್ದರು. ಮಾತು ಕಡಿಮೆಯಾದರೂ, ಅಧಿಕಾರಶಾಹಿಯ ವಿರುದ್ಧ ನೇರಾನೇರಾ ನಿಷ್ಠುರ ಮಾತುಗಳಿಗಾಗಿ ರಾಹುಲ್‌ ಬಜಾಜ್‌ ಅವರನ್ನು ಉದ್ಯಮ ವಲಯ ಸದಾ ನೆನಪಿಸಿಕೊಳ್ಳುತ್ತದೆ.

ಏರ್‌ ಇಂಡಿಯಾ, ಐಐಟಿ ಬಾಂಬೆ, ಭಾರತೀಯ ಕೈಗಾರಿಕಾ ಒಕ್ಕೂಟ, ವಿಶ್ವ ಆರ್ಥಿಕ ವೇದಿಕೆ, ಐಬಿಸಿ ಸೇರಿದಂತೆ ಹಲವು ಉನ್ನತ ಸಂಸ್ಥೆಗಳಲ್ಲಿ ಅಧ್ಯಕ್ಷ ಹುದ್ದೆಗಳನ್ನೂ ನಿರ್ವಹಿಸಿದ್ದ ಇವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಿ ಗೌರವಿಸಿತ್ತು.

ರಾಹುಲ್‌ ಹಾದಿ

- ಅಜ್ಜ ಜಮ್ನಾಲಾಲ್‌ ಸ್ಥಾಪಿಸಿದ್ದ ಬಜಾಜ್‌ ಕಂಪನಿಗೆ 1965ರಲ್ಲಿ ಉತ್ತರಾಧಿಕಾರಿ

- ಕಂಪನಿಯ ವಹಿವಾಟು .7.2 ಕೋಟಿ ಇದ್ದಲ್ಲಿಂದ .12000 ಕೋಟಿಗೆ ಏರಿಕೆ

- ಆಟೋಮೊಬೈಲ್‌, ವಿಮೆ, ಹೂಡಿಕೆ, ಗೃಹ ಬಳಕೆ ಉತ್ಪನ್ನ, ಪವನ ಶಕ್ತಿ, ಉಕ್ಕು, ಪ್ರವಾಸೋದ್ಯಮ ಸೇರಿ ಅನೇಕ ಕ್ಷೇತ್ರಗಳಿಗೆ ತಮ್ಮ ಉದ್ಯಮವನ್ನು ವಿಸ್ತರಿಸಿದ್ದ ಸಾಧಕ

- ಇವರ ಶ್ರಮದಿಂದ ದೇಶದ ಉದ್ದಿಮೆಗಳಲ್ಲಿ ಪ್ರಮುಖ ಹೆಸರಾಗಿದ್ದ ಬಜಾಜ್‌

- 2005ರಲ್ಲಿ ಪುತ್ರನಿಗೆ ಉದ್ದಿಮೆ ಹಸ್ತಾಂತರ, 2006ರಲ್ಲಿ ರಾಜ್ಯಸಭಾ ಸದಸ್ಯ

ಫೆಬ್ರವರಿ 2021 ರ ಪ್ರಕಾರ,  ನಿವ್ವಳ ಮೌಲ್ಯ USD 8.2 ಶತಕೋಟಿ ಹೊಂದಿರುವ ರಾಹುಲ್ ಬಜಾಜ್  ಫೋರ್ಬ್ಸ್ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ  421 ನೇ ಸ್ಥಾನದಲ್ಲಿದ್ದಾರೆ. ರಾಹುಲ್‌ ಬಜಾಜ್‌ ಅಗಲಿಕೆಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಂತಾಪ ಸೂಚಿಸಿದ್ದಾರೆ.  

"ರಾಹುಲ್ ಬಜಾಜ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಭಾರತೀಯ ಉದ್ಯಮದ ಡೊಯೆನ್, ಅವರು ಉದ್ಯಮದ ಆದ್ಯತೆಗಳ ಬಗ್ಗೆ ಭಾವೋದ್ರಿಕ್ತರಾಗಿದ್ದರು. ಅವರ ವೃತ್ತಿಜೀವನವು ರಾಷ್ಟ್ರದ ಕಾರ್ಪೊರೇಟ್ ವಲಯದ ಏರಿಕೆ ಮತ್ತು ಸಹಜ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಅವರ ಅಗಲಿಕೆಯಿಂದ ಉದ್ಯಮ ಜಗತ್ತಿನಲ್ಲಿ ಖಾಲಿತನ ಉಂಟಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು" ಎಂದು ರಾಮನಾಥ್‌ ಕೋವಿಂದ್‌ ಟ್ವೀಟ್‌ ಮಾಡಿದ್ದಾರೆ. 

 

 

ಇನ್ನು ಉದ್ಯಮಿ ರಾಹುಲ್‌ ಬಜಾಜ್‌ ನಿಧನಕ್ಕೆ ಕೇಂದ್ರ ಸಚಿವ ನೀತಿನ್‌ ಗಡ್ಕರಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. "ಯಶಸ್ವಿ ಉದ್ಯಮಿ, ಲೋಕೋಪಕಾರಿ ಮತ್ತು ಬಜಾಜ್‌ನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ಜಿ ಅವರಿಗೆ ನನ್ನ ಹೃತ್ಪೂರ್ವಕ ನಮನಗಳು. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ರಾಹುಲ್ ಜಿ ಅವರೊಂದಿಗೆ ಹಲವು ವರ್ಷಗಳಿಂದ ವೈಯಕ್ತಿಕ ಸಂಬಂಧ ಹೊಂದಿದ್ದೇನೆ. ಕಳೆದ ಐದು ದಶಕಗಳಿಂದ ಬಜಾಜ್ ಗ್ರೂಪ್ ಅನ್ನು ಮುನ್ನಡೆಸಿರುವ ರಾಹುಲ್ ಜಿ, ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ದೇವರು ಅಗಲಿದ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಕುಟುಂಬ ಸದಸ್ಯರಿಗೆ ಶಕ್ತಿ ನೀಡಲಿ. ಶಾಂತಿ" ಎಂದು ನೀತಿ ಗಡ್ಕರಿ ಟ್ವೀಟ್‌ ಮಾಡಿದ್ದಾರೆ. 

 

 

Latest Videos
Follow Us:
Download App:
  • android
  • ios