*   ಹಿಂದೂ ರಾಜಾ ನಿರ್ಮಾತೃ: ಪುರಾತತ್ವ ಇಲಾಖೆ ಮಾಜಿ ಅಧಿಕಾರಿ*   ಸೂರ್ಯನ ದಿಕ್ಕು ಅಧ್ಯಯನಕ್ಕೆ ರಾಜಾ ವಿಕ್ರಮಾದಿತ್ಯ ನಿರ್ಮಿಸಿದ್ದ*   ಇದಕ್ಕೆ ಸಾಕ್ಷ್ಯ ಇವೆ: ಧರಮ್‌ವೀರ್‌ ಶರ್ಮಾ 

ನವದೆಹಲಿ(ಮೇ.19):ಕುತುಬ್‌ ಮಿನಾರ್‌ ಮುಸ್ಲಿಂ ಸ್ಮಾರಕವಲ್ಲ. ಹಿಂದೂಗಳ ಸ್ಮಾರಕ. ಅದನ್ನು ರಾಜಾ ವಿಕ್ರಮಾದಿತ್ಯ ಕಟ್ಟಿಸಿದ್ದ. ಅದೊಂದು ಸೂರ್ಯ ಗೋಪುರ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಯ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಾಬ್ರಿ ಮಸೀದಿ, ಗ್ಯಾನವಾಪಿ ಮಸೀದಿ, ಶ್ರೀಕೃಷ್ಣ ಜನ್ಮಭೂಮಿಯ ಬಳಿಯ ಶಾಹಿ ಈದ್ಗಾ ಮಸೀದಿ ವಿವಾದದ ಬೆನ್ನಲ್ಲೇ ಹೊರಬಿದ್ದ ಈ ಹೇಳಿಕೆ ಸಾಕಷ್ಟು ಕುತೂಹಲ ಕೆರಳಿಸಿದೆ.

ಇತ್ತೀಚೆಗೆ ಕೆಲವು ಹಿಂದೂ ಸಂಘಟನೆಗಳು ಕುತುಬ್‌ ಮಿನಾರ್‌ ಮುಂದೆ ಪ್ರತಿಭಟನೆ ನಡೆಸಿ, ‘ಕುತುಬ್‌ ಮಿನಾರ್‌ ಅನ್ನು ಹಿಂದೂ ರಾಜರು ನಿರ್ಮಿಸಿದ್ದು, ಅದರ ಹೆಸರು ವಿಷ್ಣುಸ್ತಂಭ. ಹೀಗಾಗಿ ಕುತುಬ್‌ ಮಿನಾರ್‌ ಹೆಸರನ್ನು ಮರಳಿ ವಿಷ್ಣುಸ್ತಂಭ ಎಂದು ಘೋಷಿಸಬೇಕು. ಇಡೀ ಪ್ರದೇಶವನ್ನು ಹಿಂದೂಗಳ ವಶಕ್ಕೆ ಒಪ್ಪಿಸಬೇಕು’ ಎಂದು ಒತ್ತಾಯಿಸಿದ್ದರು.

Qutub Minar ಕುತುಬ್‌ ಮಿನಾರ್‌ ಹೆಸರನ್ನು ವಿಷ್ಣು ಸ್ತಂಭವೆಂದು ಬದಲಾಯಿಸಲು ಪ್ರತಿಭಟನೆ

ಅದರ ಬೆನ್ನಲ್ಲೇ ಹೇಳಿಕೆ ನೀಡಿರುವ ಭಾರತೀಯ ಪುರಾತತ್ವ ಇಲಾಖೆಯ ಮಾಜಿ ಅಧಿಕಾರಿ ಧರಮ್‌ವೀರ್‌ ಶರ್ಮಾ ‘ರಾಜಾ ವಿಕ್ರಮಾದಿತ್ಯನೇ ಕುತುಬ್‌ ಮಿನಾರ್‌ ಅನ್ನು ಕಟ್ಟಿಸಿದ್ದ. ನಾವು ಈಗ ಓದುವಂತೆ ಕುತ್ಬುದ್ದೀನ್‌ ಐಬಕ್‌ ಅಲ್ಲ. ಅದು ಕುತುಬ್‌ ಮಿನಾರ್‌ ಅಲ್ಲ. ಅದೊಂದು ಸೂರ್ಯ ಗೋಪುರ. 5ನೇ ಶತಮಾನದಲ್ಲಿ ರಾಜಾ ವಿಕ್ರಮಾದಿತ್ಯ ಸೂರ್ಯನ ದಿಕ್ಕನ್ನು ಅಧ್ಯಯನ ಮಾಡಲು ಈ ಎತ್ತರದ ಗೋಪುರ ನಿರ್ಮಿಸಿದ್ದ ಎಂಬುದಕ್ಕೆ ನನ್ನ ಬಳಿ ಸಾಕಷ್ಟು ಪುರಾವೆಗಳಿವೆ’ ಎಂದು ಹೇಳಿದ್ದಾರೆ.

ಕುತುಬ್ ಮಿನಾರ್ ಸಂಕೀರ್ಣದಲ್ಲಿರುವ ಗಣೇಶ ಮೂರ್ತಿ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳಿ: ಕೋರ್ಟ್‌

‘ಕುತುಬ್‌ ಮಿನಾರ್‌ ನೇರವಾಗಿಲ್ಲ. 25 ಇಂಚು ವಾಲಿದೆ. ಏಕೆಂದರೆ ಸೂರ್ಯನ ಅಧ್ಯಯನಕ್ಕೆ ಹೀಗೆ ನಿರ್ಮಿಸಲಾಗಿತ್ತು. ಜೂನ್‌ 21ರಂದು ನೇಸರ ಪಥ ಬದಲಿಸುವ ದಿನವಾಗಿದ್ದು, ಅಂದು ಅರ್ಧ ತಾಸು ಕಾಲ ಮಿನಾರ್‌ನ ನೆರಳು ನೆಲದ ಮೇಲೆ ಬೀಳಲ್ಲ. ಇದು ವೈಜ್ಞಾನಿಕ ಹಾಗೂ ಐತಿಹಾಸಿಕ ಸತ್ಯ’ ಎಂದಿದ್ದಾರೆ. ಅಲ್ಲದೆ, ‘ಮಿನಾರ್‌ ದ್ವಾರ ಉತ್ತರಕ್ಕೆ ಮುಖ ಮಾಡುತ್ತದೆ. ರಾತ್ರಿ ಧ್ರುವ ನಕ್ಷತ್ರ ನೋಡಲು ಹೀಗೆ ಮಾಡಲಾಗಿದೆ’ ಎಂದೂ ಅವರು ಹೇಳಿದ್ದಾರೆ.

ಸುಪ್ರೀಂನಿಂದ ನಾಳೆ ಗ್ಯಾನವಾಪಿ ಮಸೀದಿ ಅರ್ಜಿ ವಿಚಾರಣೆ

ನವದೆಹಲಿ: ಗ್ಯಾನವಾಪಿ ಮಸೀದಿಯ ವಿಡಿಯೋ ಚಿತ್ರೀಕರಣಕ್ಕೆ ತಡೆ ಕೋರಿ ಮಸೀದಿ ಆಡಳಿತ ಮಂಡಳಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಚ್‌ ಗುರುವಾರ ಮುಂದುವರೆಸಲಿದೆ. ಮಂಗಳವಾರ ನಡೆದ ವಿಚಾರಣೆ ವೇಳೆ ಗ್ಯಾನವಾಪಿ ಮಸೀದಿಯೊಳಗೆ ಪತ್ತೆಯಾಗಿದೆ ಎನ್ನಲಾದ ಶಿವಲಿಂಗವನ್ನು ರಕ್ಷಿಸುವಂತೆ ಕೋರ್ಚ್‌ ಆದೇಶ ಹೊರಡಿಸಿತ್ತು. ಅಲ್ಲದೆ ಸಮೀಕ್ಷೆ ಕುರಿತ ಆದೇಶ ಮತ್ತು ಇಡೀ ಪ್ರಕ್ರಿಯೆಗೆ ತಡೆ ನೀಡಲು ನಿರಾಕರಿಸಿತ್ತು.