ವಿಶ್ವದ ನಾಯಕರನ್ನು ಭೇಟಿಯಾಗುವುದು ಸಾಮಾನ್ಯವಾಗಿ ದೊಡ್ಡ ದೊಡ್ಡ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಗಣ್ಯರಿಗೆ ಸಿಗುವ ಅವಕಾಶ. ಆದರೆ, ಕೇವಲ 16 ವರ್ಷದ ಬಾಲಕನೊಬ್ಬ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ.
ವಿಶ್ವದ ನಾಯಕರನ್ನು ಭೇಟಿಯಾಗುವುದು ಸಾಮಾನ್ಯವಾಗಿ ದೊಡ್ಡ ದೊಡ್ಡ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಗಣ್ಯರಿಗೆ ಸಿಗುವ ಅವಕಾಶ. ಆದರೆ, ಕೇವಲ 16 ವರ್ಷದ ಬಾಲಕನೊಬ್ಬ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ಭಾರತದ 'AI ಕಿಡ್' ಎಂದೇ ಖ್ಯಾತಿ ಪಡೆದಿರುವ ರೌಲ್ ಜಾನ್ ಅಜು (Raul John Aju) ಈ ಅಪರೂಪದ ಸಾಧನೆ ಮಾಡಿರುವ ಬಾಲಕ.
ರಷ್ಯಾದ ಮಾಸ್ಕೋದಲ್ಲಿ ನಡೆದ 'AI Journey 2026' ಸಮ್ಮೇಳನದಲ್ಲಿ ಭಾಗವಹಿಸಿದ್ದ ರೌಲ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ. ಈ ಭೇಟಿಯ ಫೋಟೋವನ್ನು ಆತ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ತನ್ನ ಜೀವನದ ಈ ಮಹತ್ವದ ಕ್ಷಣದ ಕುರಿತು ಬರೆದುಕೊಂಡಿರುವ ರೌಲ್, ಒಂಬತ್ತು ವರ್ಷದವನಿದ್ದಾಗ ಬಾತ್ರೂಮ್ನಲ್ಲಿ ಮೊದಲ ವಿಡಿಯೋ ಮಾಡಿದ್ದರಿಂದ ಹಿಡಿದು ಇಂದು ಪುಟಿನ್ ಜೊತೆ ಸೆಲ್ಫಿ ತೆಗೆದುಕೊಳ್ಳುವವರೆಗೆ ಬೆಳೆದು ಬಂದ ಹಾದಿಯನ್ನು ನೆನಪಿಸಿಕೊಂಡಿದ್ದಾನೆ.
"9ನೇ ವಯಸ್ಸಿನಲ್ಲಿ ಬಾತ್ರೂಮ್ನಲ್ಲಿ ನನ್ನ ಮೊದಲ ವಿಡಿಯೋ ಮಾಡಿದ್ದೆ. ಒಂದು ದಿನ ಅಧ್ಯಕ್ಷ ಪುಟಿನ್ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತೇನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಜೀವನ ನನ್ನನ್ನು ಇಷ್ಟು ದೂರ ಕರೆದುಕೊಂಡು ಬರುತ್ತದೆ ಎಂದು ಊಹಿಸಿರಲಿಲ್ಲ" ಎಂದು ಬರೆದುಕೊಂಡಿದ್ದಾನೆ. ಅಷ್ಟೇ ಅಲ್ಲ, ಸಮ್ಮೇಳನದಲ್ಲಿ ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಮುಖ ಸಂಶೋಧಕರು ಹಾಗೂ ತಜ್ಞರನ್ನು ಭೇಟಿಯಾಗಿದ್ದು, ಇನ್ನೂ ಸಾಕಷ್ಟು ಕಲಿಯುವುದು ಬಾಕಿ ಇದೆ ಎಂಬ ಅರಿವಾಗಿದೆ ಎಂದು ಹೇಳಿದ್ದಾನೆ. ಈ ಸಾಧನೆಯ ಹಿಂದೆ ಕುಟುಂಬದವರು, ಸ್ನೇಹಿತರು ಮತ್ತು ತನಗೆ ಬೆಂಬಲ ನೀಡಿದ ಪ್ರತಿಯೊಬ್ಬರ ಕೊಡುಗೆಯನ್ನೂ ಸ್ಮರಿಸಿದ್ದಾನೆ.
"ಈ ಪ್ರಯಾಣದ ಭಾಗವಾಗಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ಒಬ್ಬ ಪುಟ್ಟ ಬಾಲಕನ ಕನಸುಗಳನ್ನು ನನಸಾಗಿಸಿದ್ದೀರಿ" ಎಂದು ಕೃತಜ್ಞತೆ ಸಲ್ಲಿಸಿದ್ದಾನೆ. ಕೊನೆಯಲ್ಲಿ, "ನಾನು ಈಗಲೂ ಕುತೂಹಲದ ಹುಡುಗನೇ, ಆದರೆ ಹೇಳಲು ಕೆಲವು ಹೊಸ ಕಥೆಗಳಿವೆ" ಎಂದು ಬರೆದುಕೊಂಡಿದ್ದಾನೆ.
ಯಾರು ಈ ರೌಲ್ ಜಾನ್ ಅಜು? 16ನೇ ವಯಸ್ಸಿನಲ್ಲೇ ಸ್ವಂತ AI ಕಂಪನಿ
ಕೇರಳ ಮೂಲದ ರೌಲ್ ಜಾನ್ ಅಜು ಬಾಲ್ಯದಿಂದಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾನೆ. ಆತನ ತಂದೆಗೆ ಅಡೋಬ್ (Adobe) ಕಂಪನಿಯಲ್ಲಿ ಕೆಲಸ ಸಿಕ್ಕ ಬಳಿಕ ವೃತ್ತಿಪರ ವಿಡಿಯೋ ಎಡಿಟಿಂಗ್ ಸಾಫ್ಟ್ವೇರ್ಗಳನ್ನು ಬಳಸುವ ಅವಕಾಶ ರೌಲ್ಗೆ ಸಿಕ್ಕಿತ್ತು. ಅಲ್ಲಿಂದಲೇ ತಂತ್ರಜ್ಞಾನದ ಬಗ್ಗೆ ಆತನ ಕುತೂಹಲ ಹೆಚ್ಚಾಯಿತು.
ಗಂಟೆಗಟ್ಟಲೆ ವಿಡಿಯೋ ಎಡಿಟಿಂಗ್ ಕಲಿಯುತ್ತಿದ್ದ ರೌಲ್, ಕ್ರಮೇಣ ತಂತ್ರಜ್ಞಾನದ ವಿವಿಧ ಆಯಾಮಗಳನ್ನು ಅನ್ವೇಷಿಸಲು ಆರಂಭಿಸಿದ. ಕೇವಲ 12ನೇ ವಯಸ್ಸಿನಲ್ಲೇ ತನ್ನ ಮೊದಲ ರೋಬೋಟ್ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಇಲ್ಲಿಯವರೆಗೆ 10ಕ್ಕೂ ಹೆಚ್ಚು AI ಆಧಾರಿತ ಟೂಲ್ಗಳನ್ನು ಅಭಿವೃದ್ಧಿಪಡಿಸಿರುವ ರೌಲ್, 'AI Realm Technologies' ಎಂಬ ಸ್ವಂತ ಕಂಪನಿಯನ್ನೂ ಆರಂಭಿಸಿದ್ದಾನೆ.
ವಿಶೇಷವೆಂದರೆ, ಆತನ ಪ್ರತಿಭೆ ಕೇವಲ ತಂತ್ರಜ್ಞಾನ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಸರ್ಕಾರಿ ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಹೇಗೆ ಬಳಸಬಹುದು ಎಂಬ ವಿಚಾರದಲ್ಲಿ ಕೇರಳ ಮತ್ತು ದುಬೈ ಸರ್ಕಾರಗಳು ಆತನ ಸಲಹೆ ಪಡೆದಿವೆ ಎಂದು UN News ವರದಿ ಮಾಡಿದೆ.
ಕೋಡಿಂಗ್ನಿಂದಲ್ಲ, ವಿಡಿಯೋ ಎಡಿಟಿಂಗ್ನಿಂದ ಶುರುವಾದ ಪಯಣ
ರೌಲ್ನ ಸಾಧನೆಯ ಹಿಂದಿನ ಆಸಕ್ತಿದಾಯಕ ಸಂಗತಿಯೆಂದರೆ, ಆತ ತನ್ನ ತಂತ್ರಜ್ಞಾನದ ಪ್ರಯಾಣವನ್ನು ಮುಂದುವರಿದ ಕೋಡಿಂಗ್ ಕಲಿಯುವುದರ ಮೂಲಕ ಆರಂಭಿಸಿಲ್ಲ. ವಿಡಿಯೋ ಎಡಿಟಿಂಗ್ನಲ್ಲಿ ಬೆಳೆದ ಆಸಕ್ತಿಯೇ ಆತನನ್ನು ಹೊಸ ಹೊಸ ತಂತ್ರಜ್ಞಾನಗಳನ್ನು ಕಲಿಯುವಂತೆ ಮಾಡಿತು.
ಶಾಲೆಯ ವಿಜ್ಞಾನ ಮೇಳಕ್ಕಾಗಿ 'MeBot' ಎಂಬ ಪ್ರಾಜೆಕ್ಟ್ ಅಭಿವೃದ್ಧಿಪಡಿಸಿದ್ದು ಆತನ ಆರಂಭಿಕ ಪ್ರಯತ್ನಗಳಲ್ಲಿ ಒಂದು. ನಂತರ ತನ್ನ ವಿಭಿನ್ನ ತಂತ್ರಜ್ಞಾನ ಯೋಜನೆಗಳನ್ನು ಒಂದೇ ವೇದಿಕೆಯಲ್ಲಿ ತರಲು AI Realm Technologies ಕಂಪನಿಯನ್ನು ಆರಂಭಿಸಿದ. ಸಾಮಾನ್ಯ ಜನರ ದಿನನಿತ್ಯದ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವುದು ಆತನ ಕಂಪನಿಯ ಪ್ರಮುಖ ಉದ್ದೇಶವಾಗಿದೆ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಇಲ್ಲದವರಿಗೂ ಡಿಜಿಟಲ್ ಪಾವತಿ ಸುಲಭವಾಗಬೇಕು ಎಂಬ ಉದ್ದೇಶದಿಂದ ಕೇವಲ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪಾವತಿ ಮಾಡಲು ಸಾಧ್ಯವಾಗುವ ವ್ಯವಸ್ಥೆಯ ಬಗ್ಗೆಯೂ ಆತ ಕೆಲಸ ಮಾಡಿದ್ದಾನೆ.
16ನೇ ವಯಸ್ಸಿನಲ್ಲೇ ಉದ್ಯಮ ನಿರ್ವಹಣೆ, ತಂದೆಯೇ ಬೆನ್ನೆಲುಬು
ಇಷ್ಟು ಚಿಕ್ಕ ವಯಸ್ಸಿನಲ್ಲಿ ಸ್ವಂತ ಕಂಪನಿ ನಡೆಸುವುದು ಸುಲಭದ ಕೆಲಸವಲ್ಲ. ಹೀಗಾಗಿ ಕಂಪನಿಯ ನಿರ್ವಹಣೆ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲಿ ನೆರವಾಗಲು ರೌಲ್ ತನ್ನ ತಂದೆಯನ್ನೇ ತಂಡಕ್ಕೆ ಸೇರಿಸಿಕೊಂಡಿದ್ದಾನೆ.
ಅಮೆಜಾನ್, ಅಡೋಬ್, ವಿಪ್ರೋ ಮತ್ತು ಐಬಿಎಂನಂತಹ ಪ್ರಮುಖ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಆತನ ತಂದೆಗಿದೆ. ಈ ಅನುಭವವು ಕಂಪನಿಯ ನಿರ್ವಹಣೆ ಮತ್ತು ವ್ಯವಹಾರ ನಿರ್ಧಾರಗಳಲ್ಲಿ ರೌಲ್ಗೆ ನೆರವಾಗುತ್ತಿದೆ. ಸ್ಮಾರ್ಟ್ಫೋನ್ಗಳು ಅಪಾರ ಪ್ರಮಾಣದ ಮಾಹಿತಿಯನ್ನು ನೀಡಬಹುದು. ಆದರೆ, ನೈಜ ಜಗತ್ತಿನಲ್ಲಿ ಕೆಲಸ ಮಾಡುವುದರಿಂದ ಸಿಗುವ ಅನುಭವವನ್ನು ಅವು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ ಎಂಬುದು ರೌಲ್ನ ಅಭಿಪ್ರಾಯ.
ತಂದೆಯ ಅನುಭವ ಕಂಪನಿಗೆ ಸಾಕಷ್ಟು ನೆರವಾಗುತ್ತಿದೆ ಎಂದು ಹೇಳುವ ರೌಲ್, ಮಾರ್ಕೆಟಿಂಗ್ ವಿಚಾರದಲ್ಲಿಯೂ ತಂದೆ ತಂಡದಲ್ಲಿರುವುದು ಅನುಕೂಲವಾಗಿದೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾನೆ. ಒಂಬತ್ತು ವರ್ಷದ ಬಾಲಕನೊಬ್ಬನ ವಿಡಿಯೋ ಎಡಿಟಿಂಗ್ ಆಸಕ್ತಿ ಇಂದು AI ಉದ್ಯಮದವರೆಗೆ ಬೆಳೆದು ನಿಂತಿದೆ. ಈಗ 16ನೇ ವಯಸ್ಸಿನಲ್ಲೇ ರಷ್ಯಾ ಅಧ್ಯಕ್ಷರನ್ನು ಭೇಟಿಯಾಗಿರುವ 'AI ಕಿಡ್' ರೌಲ್ ಜಾನ್ ಅಜು ಅವರ ಸಾಧನೆ ಯುವಜನತೆಗೆ ಸ್ಫೂರ್ತಿಯಾಗಿದೆ.












