ದಿಲ್ಲಿ ಚುನಾವಣೆ ಸೋಲಿನ ಬಳಿಕ ಪಂಜಾಬ್‌ನಲ್ಲಿ ಆಪ್ ಸರ್ಕಾರದಲ್ಲಿ ಬಂಡಾಯದ ವರದಿಗಳ ಹಿನ್ನೆಲೆಯಲ್ಲಿ, ಅರವಿಂದ್ ಕೇಜ್ರಿವಾಲ್ ಪಂಜಾಬ್‌ನ ಆಪ್ ಶಾಸಕರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ದೆಹಲಿ ಸೋಲಿನ ಕಾರಣಗಳು ಮತ್ತು ಪಂಜಾಬ್‌ನಲ್ಲಿ ಆಪ್ ಸರ್ಕಾರದಲ್ಲಿ ಕಂಡುಬಂದಿರುವ ಭಿನ್ನಮತದ ಬಗ್ಗೆ ಚರ್ಚಿಸಲಾಯಿತು.
ನವದೆಹಲಿ: ದಿಲ್ಲಿ ಚುನಾವಣೆ ಸೋಲಿನ ಬಳಿಕ ಆಪ್‌ನ ಏಕೈಕ ನೆಲೆಯಾಗಿರುವ ಪಂಜಾಬ್ ಸರ್ಕಾರದಲ್ಲಿ ಬಂಡಾಯದ ಅಲೆ ಬೀಸಿದೆ ಎಂಬ ವರದಿಗಳ ಬೆನ್ನಲ್ಲೇ, ಪಂಜಾಬ್‌ನ ಆಪ್ ಶಾಸಕರ ಜೊತೆ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಸೋಮವಾರ ಇಲ್ಲಿ ಸಭೆ ನಡೆಸಿದರು.
ಸಭೆಯಲ್ಲಿ ದೆಹಲಿ ಸೋಲಿನ ಕಾರಣಗಳ ಬಗ್ಗೆ ಸಣ್ಣ ಚರ್ಚೆಯ ಜೊತೆಗೆ, ಪಂಜಾಬ್‌ನಲ್ಲಿ ಆಪ್ ಸರ್ಕಾರದಲ್ಲಿ ಕಂಡುಬಂದಿರುವ ಭಿನ್ನಮತ, ಅದಕ್ಕೆ ಕಾರಣಗಳು, ಪಕ್ಷ ಮತ್ತು ಸರ್ಕಾರವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಬಗ್ಗೆ ಕೇಜ್ರಿವಾಲ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕೇಜ್ರಿವಾಲ್ ಅವರ ಹಲಿಯ ಕಪುರ್ತಲಾ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್, ಸಂಸದ ರಾಘವ್ ಛಡ್ಡಾ, ಸಂದೀಪ್ ಪಾಠಕ್, ಶಾಸಕರು ಭಾಗವಹಿಸಿದ್ದರು.
ಇದನ್ನೂ ಓದಿ: ದೆಹಲಿ ಸೋಲಿನ ಬೆನ್ನಲ್ಲೇ ಪಂಜಾಬ್‌ನಲ್ಲಿ ಆಪ್‌ಗೆ ಶಾಕ್ ಕೊಟ್ಟ ಕಾಂಗ್ರೆಸ್?
ಸಭೆಯ ಬಳಿಕ ಮಾತನಾಡಿದ ಸಿಎಂ ಭಗವಂತ್ ಮಾನ್, ‘ಆಗಾಗ ಮೈತ್ರಿ ಪಕ್ಷಗಳನ್ನು ಬದಲಿಸುವುದು ಕಾಂಗ್ರೆಸ್‌ನ ಅಭ್ಯಾಸ. ಆದರೆ ಆಪ್ ನಾಯಕರು ಹಾಗಲ್ಲ. ಪಕ್ಷದಲ್ಲಿ ಎಲ್ಲವೂ ಚೆನ್ನಾಗಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದಿದ್ದಾರೆ. ಪಂಜಾಬ್‌ನ 30 ಆಪ್ ಶಾಸಕರು ತಮ್ಮ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾನ್, ‘ಅವರು ಹಲವು ವರ್ಷಗಳಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅವರ ನಮ್ಮ ಶಾಸಕರನ್ನು ಎಣಿಸುವ ಬದಲು, ಮೊದಲು ದೆಹಲಿಯಲ್ಲಿ ಕಾಂಗ್ರೆಸ್ ಎಷ್ಟು ಶಾಸಕರನ್ನು ಹೊಂದಿದೆ ಎಂದು ನೋಡಿಕೊಳ್ಳಲಿ’ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಕೇಜ್ರಿ ಸೋಲಿಗೆ 'ಸಪ್ತ' ಕಾರಣ ನೀಡಿದ ಪಿಕೆ
