ಆಪರೇಷನ್ ಸಿಂದೂರ್ ಸಮಯದಲ್ಲಿ ಯೋಧರಿಗೆ ನೀರು, ಲಸ್ಸಿ, ಟೀ ಪೂರೈಸಿದ 10 ವರ್ಷದ ಬಾಲಕ ಶ್ರವಣ್‌ನನ್ನು ಸೇನೆ ಸನ್ಮಾನಿಸಿದೆ.

ಪಂಜಾಬ್‌: ಆಪರೇಷನ್ ಸಿಂದೂರ್ ಸಮಯದಲ್ಲಿ ಸುಡುವ ಬಿಸಿಲಿನ ನಡುವೆ ಯೋಧರಿಗೆ ಲಸ್ಸಿ, ಟೀ, ಮಜ್ಜಿಗೆ ಹಾಲು ಪೂರೈಕೆ ಮಾಡುತ್ತಿದ್ದ 10 ವರ್ಷದ ಗಡಿ ಭಾಗದ ಬಾಲಕನಿಗೆ ಸೇನೆ ಸನ್ಮಾನ ಮಾಡಿದೆ. ಪಂಜಾಬ್‌ನ ತಾರಾ ವಾಲಿ ಗ್ರಾಮದಲ್ಲಿ ಆಪರೇಷನ್‌ ಸಿಂದೂರ್‌ನ ಸದ್ದು ಇಡೀ ಗ್ರಾಮದಲ್ಲಿ ಪ್ರತಿಧ್ವನಿಸುತ್ತಿತ್ತು. ಈ ಭಯದ ವಾತಾವರಣದ ನಡುವೆಯೂ ಪಂಜಾಬ್‌ನ ಫಿರೋಜ್‌ಪುರ್ ಜಿಲ್ಲೆಯ ಮಮ್ದೊತ್‌ ನ 10 ವರ್ಷದ ಬಾಲಕ ಶ್ರವಣ್‌ ಬಿರು ಬಿಸಿಲಿನ ನಡುವೆಯೂ ದೇಶ ಕಾಯುವ ಕಾಯಕದಲ್ಲಿ ತೊಡಗಿದ್ದ ಯೋಧರಿಗೆ ನೀರು ಟೀ, ಲಸ್ಸಿ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಿದ್ದರು. ಈ ಬಾಲಕನ ಸೇವೆಯನ್ನು ಗುರುತಿಸಿದ ಸೇನೆ ಈಗ ಅವರಿಗೆ ಸನ್ಮಾನ ಮಾಡಿ ಗೌರವಿಸಿದೆ.

7ನೇ ಪದಾತಿ ದಳದ ವಿಭಾಗದ ಕಮಾಂಡಿಂಗ್ ಜನರಲ್ ಆಫೀಸರ್ ಆಗಿರುವ ಮೇಜರ್‌ ಜನರಲ್ ರಂಜಿತ್ ಸಿಂಗ್ ಮನ್ರಾಲ್ ಅವರು ಶ್ರವಣ್ ಅವರನ್ನು ಸನ್ಮಾನಿಸಿದ್ದಾರೆ. ಈ ವೇಳೆ ಮಾತನಾಡಿದ ಶ್ರವಣ್ ತಾನು ಸೇನೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಾನು ದೊಡ್ಡವನಾದ ಮೇಲೆ ಸೈನಿಕನಾಗಬೇಕು, ನಾನು ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಎಂದು ಶ್ರವಣ್ ಹೇಳಿದ್ದಾನೆ. ಶ್ರವಣ್ ತಂದೆ ಮಾತನಾಡಿ ಮಗನ ಬಗ್ಗೆ ಹೆಮ್ಮೆ ಎನಿಸುತ್ತಿದೆ ಅವನನ್ನು ಸೈನಿಕರು ಇಷ್ಟಪಡುತ್ತಾರೆ ಎಂದರು.

ಇವರಿರುವ ತಾರಾ ವಾಲಿ ಗ್ರಾಮವೂ ಭಾರತ ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಿಂದ ಹೆಚ್ಚೆಂದರೆ ಕೇವಲ 2 ಕಿಲೋ ಮೀಟರ್ ದೂರವಿದೆ. ರೈತ ಸೋನಾ ಸಿಂಗ್ ಎಂಬುವವರ ಮಗನಾಗಿರುವ ಶ್ರವಣ್‌ ಆಪರೇಷನ್ ಸಿಂದೂರ್ ವೇಳೆ ಕೇವಲ ಇಲ್ಲಿನ ಚಟುವಟಿಕೆಗಳನ್ನು ಗಮನಿಸುತ್ತಾ ಕೂರಲಿಲ್ಲ, ಬದಲು ದೇಶಕ್ಕಾಗಿ ಶ್ರಮಿಸುತ್ತಿರುವ ಯೋಧರಿಗೆ ತನ್ನ ಕೈಲಾದ ಸಹಾಯ ಮಾಡಲು ಮುಂದಾದ. ತನ್ನ ಕುಟುಂಬದ ಕೃಷಿ ಭೂಮಿಯಲ್ಲಿ ಕ್ಯಾಂಪ್ ಹಾಕಿದ್ದ ಸೈನಿಕರಿಗೆ ಆತ ನೀರು, ಹಾಲು, ಲಸ್ಸಿ ಐಸ್ ಮುಂತಾದ ವಸ್ತುಗಳನ್ನು ತಂದು ನೀಡುತ್ತಿದ್ದ. ಉರಿ ಬಿಸಿಲಿನಲ್ಲಿ ಅನೇಕರು ಮನೆಯಿಂದ ಹೊರಗೆ ಬರುವುದಕ್ಕೆ ಹಿಂಜರಿಯುತ್ತಿದ್ದರೆ, ಶ್ರವಣ್ ಸಿಂಗ್ ದಿನವೂ ಸೈನಿಕರಿದ್ದಲ್ಲಿಗೆ ಹೋಗಿ ನೀವು ಒಬ್ಬರೇ ಅಲ್ಲ, ನಿಮ್ಮ ಜೊತೆ ನಾವಿದ್ದೇವೆ ಎಂಬುದನ್ನು ನೆನಪು ಮಾಡುತ್ತಿದ್ದ.

ನನಗೆ ಭಯವಾಗಲಿಲ್ಲ. ನಾನು ದೊಡ್ಡವನಾದ ಮೇಲೆ ಸೈನಿಕನಾಗಲು ಬಯಸುತ್ತೇನೆ. ಸೈನಿಕರಿಗೆ ನೀರು, ಲಸ್ಸಿ ಮತ್ತು ಐಸ್ ತರುತ್ತಿದ್ದೆ. ಅವರು ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ಶ್ರವಣ್ ಸಿಂಗ್ ಆತ್ಮವಿಶ್ವಾಸದಿಂದ ಹೇಳಿದ್ದಾನೆ. ಇವರ ಈ ಪ್ರಯತ್ನಗಳು ಸೇನೆಯ ಗಮನಕ್ಕೆ ಬರದೆ ಹೋಗಲಿಲ್ಲ. ಈ ಬಾಲಕನ ಸೇವೆಯಿಂದ ಪ್ರೇರಿತರಾದ ಭಾರತೀಯ ಸೇನೆಯು ಅವನನ್ನು ಕರೆದು ಗೌರವಿಸಿತು.

7 ನೇ ಪದಾತಿ ದಳದ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ರಂಜಿತ್ ಸಿಂಗ್ ಮನ್ರಾಲ್ ಅವರು ಶ್ರವಣ್ ಸಿಂಗ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿದರು, ಅಲ್ಲಿ ಬಾಲಕನಿಗೆ ಸ್ಮರಣಿಕೆ, ವಿಶೇಷ ಊಟ ಮತ್ತು ಅವನ ನೆಚ್ಚಿನ ಐಸ್ ಕ್ರೀಮ್ ಅನ್ನು ಉಡುಗೊರೆಯಾಗಿ ನೀಡಲಾಯಿತು. ಅವರು ನನಗೆ ಆಹಾರ ಮತ್ತು ಐಸ್ ಕ್ರೀಮ್ ನೀಡಿದರು. ನನಗೆ ತುಂಬಾ ಸಂತೋಷವಾಗಿದೆ. ನಾನು ಸೈನಿಕನಾಗಲು ಮತ್ತು ದೇಶಕ್ಕೆ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಶ್ರವಣ್ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾನೆ.

ಸೈನಿಕರೊಂದಿಗಿನ ತನ್ನ ಮಗನ ಬಾಂಧವ್ಯವನ್ನು ನೋಡಿದರೆ ಅದರ ಮುಂದೆ ಯಾವ ಸುಗ್ಗಿಯೂ ಸರಿಸಾಟಿಯಾಗುವುದಿಲ್ಲ ಎಂದು ರೈತ ಸೋನಾ ಸಿಂಗ್ ಹೆಮ್ಮೆಯಿಂದ ಹೇಳಿದ್ದಾರೆ. ನಮ್ಮ ಹೊಲಗಳಲ್ಲಿ ಸೈನ್ಯ ಬೀಡುಬಿಟ್ಟಿತ್ತು. ಮೊದಲ ದಿನದಿಂದಲೇ ಶ್ರವಣ್ ಅವರಿಗೆ ಸಹಾಯ ಮಾಡಲು ಪ್ರಾರಂಭಿಸಿದ ಹಾಲು, ನೀರು, ಲಸ್ಸಿ ಮತ್ತು ಐಸ್ ತೆಗೆದುಕೊಂಡು ಹೋಗಿ ನೀಡುತ್ತಿದ್ದ, ನಾವು ಆತನ ಬೆಂಬಲಕ್ಕೆ ನಿಂತೆವು ಎಂದು ಶ್ರವಣ್ ತಂದೆ ಹೇಳಿದರು.