ನಟ ಡಾಲಿ ಧನಂಜಯ್ ಅವರು ಬಿರಿಯಾನಿ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಲಿಂಗಾಯತರಾಗಿ ಅವರು ಮಾಂಸಾಹಾರ ಸೇವಿಸಬಹುದೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಹುಟ್ಟಿಕೊಂಡಿದೆ. ಈ ಕುರಿತಾದ ಪರ-ವಿರೋಧ ಅಭಿಪ್ರಾಯಗಳು ಮತ್ತು ಸಿನಿಮಾ ಪತ್ರಕರ್ತರ ವಿಶ್ಲೇಷಣೆಯನ್ನು ಈ ಲೇಖನ ಒಳಗೊಂಡಿದೆ.
ಬೆಂಗಳೂರು (ಜ.24): ಸಿನಿಮಾ ರಂಗದಲ್ಲಿ ತನ್ನದೇ ಆದ ಅಭಿಮಾನಿ ವರ್ಗವನ್ನು ಹೊಂದಿರುವ ಡಾಲಿ ಧನಂಜಯ್ ಸಖತ್ ಬ್ಯುಸಿಯಾಗಿದ್ದಾರೆ. ಸಿನಿಮಾಗಳಲ್ಲಿ ನಟಿಸುವುದರೊಂದಿಗೆ ಡಾಲಿ ಪಿಕ್ಚರ್ಸ್ ಮೂಲಕ ಹೊಸ ತಲೆಮಾರಿನ ನಿರ್ದೇಶಕರುಗಳು ಹೊಸ ಐಡಿಯಾಗಳ ಸಿನಿಮಾಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಕಳೆದ ಕೆಲ ವಾರಗಳಿಂದ ಸುದ್ದಿಯಲ್ಲಿಲ್ಲದ ಡಾಲಿ ಧನಂಜಯ ಈಗ ಏಕಾಏಕಿ ಒಂದು ವಿಡಿಯೋ ಮೂಲಕ ವೈರಲ್ ಆಗುತ್ತಿದ್ದಾರೆ. ಇತ್ತೀಚೆಗೆ ಬಿರಿಯಾನಿ ಹೋಟೆಲ್‌ವೊಂದರ ಉದ್ಘಾಟನೆಗೆ ಹೋಗಿದ್ದ ಡಾಲಿ ಧನಂಜಯ ಕಾರ್ಯಕ್ರಮ ಮುಗಿದ ಬಳಿಕ ಹೋಟೆಲ್‌ನಲ್ಲಿಯೇ ಬಾಳೆಎಲೆಯಲ್ಲಿ ಭರ್ಜರಿಯಾಗಿ ಬಿರಿಯಾನಿ ಊಟ ಮಾಡಿದ್ದಾರೆ. ಲಿಂಗಾಯತರಾಗಿರುವ ಡಾಲಿ ಧನಂಜಯ ಮಾಂಸಾಹಾರ ಸೇವನೆ ಮಾಡಬಹುದಾ..? ಅನ್ನೋದೇ ಇಲ್ಲಿನ ಪ್ರಶ್ನೆಯಾಗಿದೆ.
@sanatan_kannada ಪೋಸ್ಟ್ ಮಾಡಿರುವ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು,'ಲಿಂಗಾಯತರ ಮಾಂಸಾಹಾರ ಸೇವನೆ ಮಾಡೋದಿಲ್ಲ ಅಂತಾ ಹೇಳಿದವರು ಯಾರು? ಲಿಂಗಾಯುತ ಧರ್ಮದ ಆರಂಭದಲ್ಲೇ ವೇದಗಳನ್ನು ವಿರೋಧಿಸಿದ್ದವು. ಅವರು ಆಗಲೇ ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಲಿಂಗಾಯತ ಧರ್ಮ ಯಾರಿಗೂ ಯಾವುದನ್ನೂ ಹೇರೋದಿಲ್ಲ' ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
'ದಯವಿಲ್ಲದ ಧರ್ಮವದೇವುದಯ್ಯಾ? ದಯವೇ ಬೇಕು ಸಕಲಪ್ರಾಣಿಗಳೆಲ್ಲರಲ್ಲಿಯೂ; ದಯವೇ ಧರ್ಮದ ಮೂಲವಯ್ಯಾ: ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ. ಬಸವಾದಿ ಶರಣರ ವಚನಗಳೆಲ್ಲವೂ ರಾಜಕೀಯ ಲಾಭಕ್ಕೂ ಹಾಗೂ ಹೊಟ್ಟೆಪಾಡಿಗಷ್ಟೇ ಬಳಸಲಾಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ, ಇದು ಸರಿಯಲ್ಲ' ಎಂದು ಡಾಲಿ ಬಿರಿಯಾನಿ ತಿನ್ನೋ ವಿಡಿಯೋವನ್ನು ಕಿರಣ್ ಆರಾಧ್ಯ ಎನ್ನುವವರು ಟೀಕಿಸಿದ್ದಾರೆ.
ಪರ-ವಿರೋಧ ಚರ್ಚೆ
ಇನ್ನು ಸಿನಿಮಾ ಪತ್ರಕರ್ತ ಶ್ಯಾಮ್ ಪ್ರಸಾದ್, 'ನಮ್ಮ ಧರ್ಮದವರು ಅದನ್ನ ತಿನ್ನಬಾರದು, ನಮ್ಮ ಜಾತಿಯವರು ಇವತ್ತು ಇದನ್ನು ತಿನ್ನಬಾರದು ಅನ್ನೋದೆಲ್ಲ ಜಾತಿ-ಧರ್ಮದ ಹೆಸರಲ್ಲಿ ಮಂದಿಯನ್ನು ಕಂಟ್ರೋಲ್ ಮಾಡೋ ವ್ಯವಸ್ಥೆಗಳಷ್ಟೇ (ಸಾಬರು-ಜೀವ್ ಗಳು ಹಂದಿ ತಿನ್ನಬಾರದು, ಶೈವರು ಸೋಮವಾರ ಮಾಂಸ ತಿನ್ನಬಾರದು, ವೈಷ್ಣವರು ಶನಿವಾರ ತಿನ್ನಬಾರದು, ಕ್ಯಾಥೊಲಿಕ್ ಕ್ರಿಶ್ಚಿಯನ್ ಗಳು ಲೆಂಟ್ ತಿಂಗಳಲ್ಲಿ ಮಾಂಸ ತಿನ್ನಬಾರದು etc). ಜನ್ನನ ಯಶೋಧರ ಚರಿತೆಯಲ್ಲಿ ಹಿಟ್ಟಿನ ಹುಂಜ ಮಾಡಿ ಬಲಿ ಕೊಡೋದೇ ಕರ್ನಾಟಕಕ್ಕೆ ಬಂದ ಜೈನ ಸಂಪ್ರದಾಯ ಈ ಮಣ್ಣಿನ ಮಕ್ಕಳ ಆಹಾರ ಪದ್ಧತಿಯನ್ನು ಕದ್ದು-ಮುಚ್ಚಿ ಅನುಕರಣೆ ಮಾಡೋದನ್ನು ತೋರಿಸುತ್ತೆ. ಮಾಡೋದಿದ್ರೆ ಒಪೆನ್ ಆಗಿ ಮಾಡಬೇಕು. ಜಾತಿ ಸರ್ಟಿಫಿಕೇಟ್ ತೋರಿಸಿದ್ರೆ ಮಾತ್ರ ಎಲ್ಲರಿಗೂ ಪ್ರಪಂಚದ ಎಲ್ಲಾ KFC, McDonald's ಹಿಂದೂ ಮಿಲಿಟರಿ ಹೋಟೆಲ್ ಗಳಲ್ಲಿ ಪ್ರವೇಶ ಕೊಟ್ರೆ ಸರಿಹೋಗುತ್ತೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೇಸಿಕೆಗಿಂತ ಕೀಳು
'ಅವರವರ ಊಟ ಆಹಾರ ಪೂಜೆ ಪುನಸ್ಕಾರ ಸಂಸ್ಕೃತಿ ಪರಂಪರೆ ಅವರವರಿಗೆ ಬಿಟ್ಟು ಬಿಡಿ ಯಾಕೆ ಇನ್ನೋಬ್ಬರ ತಟ್ಟೆ ಕಡೆ ಗಮನ ಕೊಡ್ತೀರಿ ಏನು ಊಟ ಎಂಥ ಊಟ ಯಾಕೆ ಬೇಕು ಭಾರತದ ಸಂವಿಧಾನ ಎಲ್ಲರಿಗೂ ಸಮಾನ ನ್ಯಾಯ ಅಧಿಕಾರ ಸ್ವಾತಂತ್ರ್ಯ ನೀಡಿರುವಾಗ ಬೀದಿಲಿ ಹೊಗೋ ದಾಸಯ್ಯನಿಗೆ ಏನು ಕೆಲಸ ಮನುಷ್ಯರ ಕೊಲೆ ಮಾಡದಿರಲಿ ಮನುಷ್ಯತ್ವ ಇರಲಿ ಇದೆ ಇವತ್ತಿನ ಅವಶ್ಯಕತೆ..' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಲಿಂಗಾಯತರಾಗಿ ಹುಟ್ಟಿ ಮಾಂಸಾಹಾರ ಸೇವಿಸುವವರು ಹೇಸಿಕೆಗಿಂತ ಕೀಳು..' ಎಂದು ಮತ್ತೊಬ್ಬರು ಬರೆದಿದ್ದಾರೆ.


