'ಶೌರ್ಯಂ..ದಕ್ಷಂ..ಯುಧೇಯ್‌.. ಬಲಿದಾನ್‌ ಪರಮ್‌ ಧರ್ಮ..' ದೇಶದ ಪ್ಯಾರಚೂಟ್‌ ರೆಜಿಮೆಂಟ್‌ನ ಯುದ್ಧಘೋಷ ಇಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅದಕ್ಕೆ ಕಾರಣ ಇಂದು ಪುಲ್ವಾಮಾ ದಾಳಿಯಲ್ಲಿ ದೇಶದ 40 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದ ದಿನ. ಸ್ವತಃ ಸಿಆರ್‌ಪಿಎಸ್‌, ಈ ದಿನವನ್ನು ಮರೆಯೋದಿಲ್ಲ, ಕ್ಷಮಿಸೋದಿಲ್ಲ ಎಂದು ಟ್ವೀಟ್‌ ಮಾಡಿದೆ.

ಬೆಂಗಳೂರು (ಫೆ.14): ನಾಲ್ಕು ವರ್ಷಗಳ ಹಿಂದೆ ಇದೇ ದಿನ, ಜಗತ್ತು ಹಾಗೂ ಭಾರತ ಪ್ರೇಮಿಗಳ ದಿನವನ್ನು ಆಚರಿಸುವ ಸಂಭ್ರಮದಲ್ಲಿದ್ದಾಗ ಕಾಶ್ಮೀರದಲ್ಲಿ ದೇಶ ತನ್ನ ಇತಿಹಾಸದಲ್ಲಿ ಇನ್ನೆಂದೂ ಮರೆಯಲಾಗದ ಘಟನೆ ನಡೆದುಹೋಗಿತ್ತು. ಮೈ ಥರಗುಟ್ಟುವ ಚಳಿಯಲ್ಲಿ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಹಾದು ಹೋಗುತ್ತಿದ್ದ ಸಿಆರ್‌ಪಿಎಫ್‌ ಯೋಧರ ಬಸ್‌ ಮೇಲೆ ಭಯೋತ್ಪಾದಕರು ಅತ್ಯಂತ ಕ್ರೂರ ಹಾಗೂ ಹೇಡಿತನದ ದಾಳಿ ಮಾಡಿದ್ದರು. ನೋಡ ನೋಡುತ್ತಿದ್ದಂತೆ ದೇಶದ 40 ವೀರ ಯೋಧರು ಪುಲ್ವಾಮಾದ ಹೆದ್ದಾರಿಯಲ್ಲಿ ನೆತ್ತರು ಚೆಲ್ಲಿದ್ದರು. 300 ಕೆಜಿ ಸ್ಫೋಟಕಗಳನ್ನು ಬಳಸಿಕೊಂಡು ರಣಹೇಡಿ ಭಯೋತ್ಪಾದಕರು ದಾಳಿ ನಡೆಸಿದ್ದರು. ಯೋಧರ ಶವಗಳನ್ನು ಮಾಂಸದ ಮುದ್ದೆಗಳ ರೀತಿಯಲ್ಲಿ ದೇಶ ಪುಲ್ವಾಮಾದ ಹೆದ್ದಾರಿಯಿಂದ ಎತ್ತಿಕೊಂಡು ಬಂದಿತ್ತು. ಈ ಘಟನೆ ನಡೆದು ನಾಲ್ಕು ವರ್ಷಗಳಾಗಿವೆ. ಭಾರತ ಇದಕ್ಕೆ ಪ್ರತಿಯಾಗಿ ಬಾಲಾಕೋಟ್‌ನಲ್ಲಿ ಏರ್‌ಸ್ಟ್ರೈಕ್‌ ನಡೆಸಿದ್ದೂ ಆಗಿದೆ. ಆದರೆ, 2019ರ ಫೆಬ್ರವರಿ 14ರ ಈ ದಿನದ ನೆನಪು ಮಾತ್ರ ಎಂದಿಗೂ ಮಾಸೋದಿಲ್ಲ. ಇದರ ನಡುವೆ ರಾಜಕಾರಣಿಗಳು ಮಾತುಗಳು ಏನೇ ಇರಲಿ, ಗುಪ್ತಚರ ವೈಫಲ್ಯದ ಮಾತುಗಳಿರಲಿ, ದೇಶ ಈ ಸಮಯದಲ್ಲಿ ನೆನಪಿಸಿಕೊಳ್ಳೋದು ಆ 40 ಯೋಧರ ಸಾವುಗಳನ್ನು ಮಾತ್ರ. ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಎಲ್ಲರೂ ಮಂಗಳವಾರ ಪುಲ್ವಾಮಾದ ಹುತಾತ್ಮ ಯೋಧರನ್ನು ನೆನಪಿಸಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಸೋಶಿಯಲ್‌ ಮೀಡಿಯಾದಲ್ಲಿ, ಶೌರ್ಯಂ..ದಕ್ಷಂ.. ಯುಧೇಯ್‌.. ಬಲಿದಾಮ್‌ ಪರಮ್‌ ಧರ್ಮ..' ಘೋಷಣೆ ಟ್ರೆಂಡ್‌ ಆಗಿದೆ.

ಪ್ಯಾರಾಚೂಟ್‌ ರೆಜಿಮೆಂಟ್‌ನ ಈ ಯುದ್ಧಘೋಷದ ನೇರ ಕನ್ನಡ ಅರ್ಥ, 'ಯುದ್ಧಕ್ಕೆ ನಿಮ್ಮನ್ನು ಸಮರ್ಥರನ್ನಾಗಿ ಮಾಡೋದೇ ಸೌರ್ಯ, ತ್ಯಾಗ ಅನ್ನೋದು ಅತಿಶ್ರೇಷ್ಠ ಕರ್ತವ್ಯ' ಎನ್ನುವುದಾಗಿದೆ. ಪ್ರಧಾನಿ ಮೋದಿ ಹುತಾತ್ಮರನ್ನು ನೆನಪಿಸಿಕೊಳ್ಳುತ್ತಾ, 'ಪುಲ್ವಾಮಾದಲ್ಲಿ ಈ ದಿನ ಕಳೆದುಕೊಂಡ ನಮ್ಮ ಧೀರ ಯೋಧರನ್ನು ನಾವಿಂದು ನೆನಪಿಸಿಕೊಳ್ಳುತ್ತಿದ್ದೇವೆ. ಇವರ ಸರ್ವಶ್ರೇಷ್ಠ ತ್ಯಾಗವನ್ನು ನಾವೆಂದೂ ಮರೆಯದಿರೋಣ. ಇವರ ಈ ಸಾಹಸವೇ ಬಲಿಷ್ಠ ಹಾಗೂ ಅಭಿವೃದ್ಧಿ ಹೊಂದಿದ ಭಾರತ ರಚಿಸಲು ಸ್ಫೂರ್ತಿ ತುಂಬಲಿ' ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

ದಿಗ್ವಿಜಯ್‌ ಸಿಂಗ್‌ ಹೇಳಿಕೆಯ ನಡುವೆ, ಪುಲ್ವಾಮಾ ನೆಲದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ರಾಹುಲ್‌ ಗಾಂಧಿ!

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಸಣ್ಣ ಮಟ್ಟದ ನೆರವು ನೀಡಿದ್ದಕ್ಕೆ ನನಗೆ ಸಂತೋಷವಾಗಿದೆ. ಇಬ್ಬರು ಯೋಧರ ಮಕ್ಕಳಾದ ಅರ್ಪಿತ್‌ ಸಿಂಗ್ ಹಾಗೂ ರಾಹುಲ್‌ ಸೊರೆಂಗ್‌ ಇಂದು ಸೆಹ್ವಾಗ್‌ ಶಾಲೆಯಲ್ಲಿ ಓದುತ್ತಿದ್ದಾರೆ. ನನ್ನ ಈ ಸಂತೋಷಕ್ಕೆ ಪಾರವೇ ಇಲ್ಲ ಎಂದು ಟೀಮ್‌ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ಟ್ವೀಟ್‌ ಮಾಡಿದ್ದಾರೆ. ಇನ್ನು ಪುಲ್ಮಾಮಾ ದಾಳಿಯ ವಾರ್ಷಿಕೋತ್ಸವದಂದು ಮಾತನಾಡಿದ ಕಾಶ್ಮೀರ ವಲಯದ ಎಡಿಜಿಪಿ ವಿಜಯ್‌ ಕುಮಾರ್‌, 2019ರ ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ 19 ಭಯೋತ್ಪಾದಕರ ಪೈಕಿ, 8 ಮಂದಿಯನ್ನು ಕೊಲ್ಲಲಾಗಿದೆ. 7 ಮಂದಿ ಜೈಲಲಿದ್ದಾರೆ ಹಾಗೂ 4 ಮಂದಿ ಪಾಕಿಸ್ತಾನದಲ್ಲಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.

ದಿಗ್ವಿಜಯ್‌ ಸಿಂಗ್‌ ಹೇಳಿಕೆ ಒಪ್ಪಲ್ಲ ಎಂದ ರಾಹುಲ್‌ ಗಾಂಧಿ, ಸೇನೆಯ ಕಾರ್ಯಾಚರಣೆಗಳಿಗೆ ಸಾಕ್ಷಿ ಬೇಕಿಲ್ಲ ಎಂದ ರಾಗಾ!

ಪುಲ್ವಾಮಾ ದಾಳಿಯ ನೇರ ಹೊಣೆ ಹೊತ್ತುಕೊಂಡಿದ್ದ ಜೈಶ್‌ ಎ ಮೊಹಮದ್‌ ಉಗ್ರ ಸಂಘಟನೆಯ ನಾಯಕ ಮಸೂದ್‌ ಅಜರ್‌ ಪಾಕಿಸ್ತಾನದ ಸರ್ಕಾರದ ಭದ್ರತೆಯಲ್ಲಿದ್ದಾರೆ.ಕಳೆದ ವರ್ಷ, ಕೇಂದ್ರವು ಅವರ ಸಹೋದರ ಮೊಹಿಯುದ್ದೀನ್ ಔರಂಗಜೇಬ್ ಅಲಂಗೀರ್ ಅಲಿಯಾಸ್ ಅಮ್ಮರ್ ಅಲ್ವಿಯನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯಡಿ ವೈಯಕ್ತಿಕ ಭಯೋತ್ಪಾದಕ ಎಂದು ಹೆಸರಿಸಿತ್ತು. ಅಲ್ವಿ ಜೈಶ್‌ನ ಹಿರಿಯ ನಾಯಕನಾಗಿದ್ದು, ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ. ಬಾಲಾಕೋಟ್‌ನ ಜಬಾ ಟಾಪ್‌ನಲ್ಲಿ ವೈಮಾನಿಕ ದಾಳಿ ನಡೆಸಿ ಜೈಶ್‌ನ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಧ್ವಂಸ ಮಾಡುವ ಮೂಲಕ ಭಾರತವು ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಂಡಿತ್ತು. ವೈಮಾನಿಕ ದಾಳಿಯಲ್ಲಿ ಸತ್ತ ಭಯೋತ್ಪಾದಕರ ನಿಖರ ಸಂಖ್ಯೆ ತಿಳಿದಿಲ್ಲವಾದರೂ, ಅಲ್ಲಿ ತೆಗೆದ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳ ಆಧಾರದ ಮೇಲೆ ದಾಳಿಗೆ ಒಂದು ದಿನ ಮೊದಲು ತರಬೇತಿ ಶಿಬಿರದಲ್ಲಿ 300 ಕ್ಕೂ ಹೆಚ್ಚು ಧಾರ್ಮಿಕ ಮೂಲಭೂತವಾದಿಗಳನ್ನು ಗುರುತಿಸಲಾಗಿತ್ತು.