ಸರ್ಜಿಕಲ್‌ ಸ್ಟ್ರೈಕ್‌ ಕುರಿತಾಗಿ ಸರ್ಕಾರದಿಂದ ಸಾಕ್ಷ್ಯ ಕೇಳಿದ್ದ ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಅವರ ಹೇಳಿಕೆಯನ್ನು ಒಪ್ಪೋದಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ದೇಶದ ಸೇನೆ ಏನಾದರೂ ಕಾರ್ಯಾಚರಣೆ ಮಾಡಿದರೆ, ಅದಕ್ಕೆ ಸಾಕ್ಷ್ಯದ ಅಗತ್ಯವಿಲ್ಲ. ನನಗೆ ಸೇನೆಯ ಮೇಲೆ ಪೂರ್ಣ ನಂಬಿಕೆ ಇದೆ ಎಂದಿದ್ದಾರೆ. 

ನವದೆಹಲಿ (ಜ.24): ಕಾಂಗ್ರೆಸ್‌ ಪಕ್ಷದ ಹಿರಿಯ ರಾಜಕಾರಣಿ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಸೇನೆಯ ಸರ್ಜಿಕಲ್‌ ಸ್ಟ್ರೈಕ್‌ಗೆ ಸಾಕ್ಷ್ಯವನ್ನು ಕೇಳುವ ಮೂಲಕ ದೊಡ್ಡ ವಿವಾದ ಸೃಷ್ಟಿಸಿದ್ದರು. ಆದರೆ, ಮಂಗಳವಾರ ರಾಹುಲ್‌ ಗಾಂಧಿ, ದಿಗ್ವಿಜಯ್‌ ಸಿಂಗ್‌ ಅವರ ಹೇಳಿಕೆಯಿಂದ ದೂರ ಉಳಿದಿದ್ದಾರೆ. ಸೇನೆಯ ಶೌರ್ಯದ ಬಗ್ಗೆ ಯಾವತ್ತೂ ಪ್ರಶ್ನೆ ಎತ್ತಲಿಲ್ಲ. ಸೇನೆ ಏನಾದರೂ ಮಾಡಿದರೆ ಅದಕ್ಕೆ ಪುರಾವೆ ಬೇಕಿಲ್ಲ. ಇದು ದಿಗ್ವಿಜಯ್ ಅವರ ವೈಯಕ್ತಿಕ ಅಭಿಪ್ರಾಯ. ಇದನ್ನು ನಾನು ಒಪ್ಪೋದಿಲ್ಲ ಎಂದು ಹೇಳಿದ್ದಾರೆ. ನಾವು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ಜೊತೆ ಹೋರಾಟ ಮಾಡುತ್ತಿದ್ದರೆ, ಬಿಜೆಪಿ ಹಾಗೂ ಸಂಘ ಪರಿವಾರದವರು ಬ್ರಿಟಿಷರ ಜೊತೆ ಕೈಜೋಡಿಸಿದ್ದರು. ಸಂಘ ಹಾಗೂ ಬಿಜೆಪಿ ನಾಯಕರೇ ಎರಡು ದೇಶಗಳ ಪರಿಕಲ್ಪನೆಯನ್ನು ನೀಡಿದರು. ದಿಗ್ವಿಜಯ್ ಅವರ ಹೇಳಿಕೆಗೆ ಸಂಬಂಧಿಸಿದಂತೆ. ಸರ್ಜಿಕಲ್ ಸ್ಟ್ರೈಕ್ ಕುರಿತು ಅವರು ಹೇಳಿದ ಮಾತನ್ನು ನಾವು ಸಂಪೂರ್ಣವಾಗಿ ಒಪ್ಪುವುದಿಲ್ಲ. ನಮ್ಮ ಸೇನೆಯ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ಸೇನೆ ಏನಾದರೂ ಮಾಡಿದರೆ ಅದಕ್ಕೆ ಪುರಾವೆ ನೀಡುವ ಅಗತ್ಯವಿಲ್ಲ. ವೈಯಕ್ತಿಕವಾಗಿ, ದಿಗ್ವಿಜಯ್‌ಜಿ ಏನು ಹೇಳಿದರೂ ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ನಾನು ಹೇಳುತ್ತೇನೆ. ಕಾಂಗ್ರೆಸ್ ಪಕ್ಷವೂ ಇದನ್ನು ಒಪ್ಪುವುದಿಲ್ಲ ಎಂದಿದ್ದಾರೆ.

ನನಗೆ ಬಿಜೆಪಿ, ಆರೆಸ್ಸೆಸ್, ಪ್ರಧಾನಿ ಮೋದಿ ಮೇಲೆ ಯಾವುದೇ ದ್ವೇಷವಿಲ್ಲ. ನನ್ನ ಮನಸ್ಸಲ್ಲಿ ದ್ವೇಷವಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದರೆ ಅದು ಅವರ ತಪ್ಪು ಚಿಂತನೆ. ಹಾಗಿದ್ದರೂ ಇದು ಅವರ ಸ್ವಂತ ಅಭಿಪ್ರಾಯಗಳಾಗಿದ್ದರೆ ನನಗೆ ತುಂಬಾ ಅಚ್ಚರಿಯಾಗುತ್ತದೆ. ಅವರು ಇರುವ ಪಕ್ಷದಲ್ಲಿ, ಅವರು ಏನು ಹೇಳಬೇಕೆಂದು ಮೇಲಿನಿಂದ ಆದೇಶಗಳನ್ನು ಪಡೆಯುತ್ತಾರೆ. ಅಂತಹ ಹೇಳಿಕೆಯನ್ನು ನೀಡುವುದನ್ನು ಬಿಟ್ಟು ಅವರಿಗೆ ಬೇರೆ ಆಯ್ಕೆಗಳಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ದಿಗ್ವಿಜಯ್ ಹೇಳಿಕೆಯಿಂದ ಪಕ್ಷ ಅಂತರ ಕಾಯ್ದುಕೊಂಡಿದೆ, ಆದರೆ ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ರಾಹುಲ್‌ಗೆ ಪ್ರಶ್ನೆ ಮಾಡಲಾಯಿತು. ಈ ಕುರಿತು ಮಾತನಾಡಿದ ರಾಹುಲ್, ನಮ್ಮ ಪಕ್ಷ ಡೆಮಾಕ್ರಟಿಕ್ ಪಕ್ಷ. ಇಲ್ಲಿ ಸರ್ವಾಧಿಕಾರ ಇಲ್ಲ. ಬೇರೆಯವರ ಧ್ವನಿಯನ್ನು ಹತ್ತಿಕ್ಕಿ ಪಕ್ಷ ನಡೆಸುವುದರಲ್ಲಿ ನಮಗೆ ನಂಬಿಕೆ ಇಲ್ಲ. ಪಕ್ಷದ ಸಿದ್ಧಾಂತಕ್ಕಿಂತ ಎಷ್ಟೇ ಭಿನ್ನವಾಗಿರಲಿ ಇಲ್ಲಿ ಜನರು ತಮ್ಮ ಅಭಿಪ್ರಾಯವನ್ನು ಹೇಳಲು ಅವಕಾಶವಿದೆ. ದಿಗ್ವಿಜಯ್ ಜಿ ಹೇಳಿದ್ದೆಲ್ಲ ಅವರ ವೈಯಕ್ತಿಕ ಅಭಿಪ್ರಾಯಗಳು, ಆದರೆ ಪಕ್ಷದ ಅಭಿಪ್ರಾಯಗಳು ಅವರ ಅಭಿಪ್ರಾಯಗಳಿಗಿಂತ ಮೇಲಿರುತ್ತವೆ. ಪಕ್ಷದ ಒಳಗಿನ ಚರ್ಚೆಗಳಿಂದ ಪಕ್ಷದ ಅಭಿಪ್ರಾಯಗಳು ರೂಪುಗೊಳ್ಳುತ್ತವೆ. ಅವರ ಅಭಿಪ್ರಾಯಗಳು ಪಕ್ಷದ ಸಿದ್ಧಾಂತಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿವೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ.

ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ನಿಮ್ಮಲ್ಲೇನಿದೆ ಪ್ರೂಫ್‌, ಮೋದಿ ಸರ್ಕಾರಕ್ಕೆ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್ ಪ್ರಶ್ನೆ!

ಬಿಜೆಪಿಯಲ್ಲಿ ಯಾವ ಚರ್ಚೆಗಳು ನಡೆಯೋದಿಲ್ಲ. ಅಲ್ಲಿ ಪ್ರಧಾನಿ ಮೋದಿ ಬೆಳಿಗ್ಗೆ ಎದ್ದು ನಿರ್ಧಾರ ತೆಗೆದುಕೊಳ್ಳುತ್ತಾರೆ, ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಸಮಯದಲ್ಲಿ ಹೀಗೆ ಮಾಡಿದ್ದರು. ಎಲ್ಲಿ ಚರ್ಚೆಯಾಗುತ್ತದೋ ಅಲ್ಲಿ ಜನ ಕೂಡ ಅಸಂಬದ್ಧವಾಗಿ ಮಾತನಾಡುತ್ತಾರೆ. ಪಕ್ಷದ ಹಿರಿಯ ನಾಯಕರೊಬ್ಬರು ಈ ಮಾತು ಹೇಳಿದ್ದಕ್ಕೆ ನನಗೆ ಬೇಸರವಾಗಿದೆ ಆದರೆ ದಿಗ್ವಿಜಯ್ ಜೀ ಅವರು ಅಸಂಬದ್ಧ ಮಾತನಾಡಿದ್ದಾರೆ. ಯಾತ್ರೆ ಇದುವರೆಗೆ ಸಾಧಿಸಿದ್ದು ಅವರ ಹೇಳಿಕೆಯಿಂದ ಕೊನೆಯಾಗುವುದಿಲ್ಲ ಎಂದಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸರ್ಕಾರ ಇನ್ನೂ ದಾಖಲೆ ಕೊಟ್ಟಿಲ್ಲ: ಪ್ರೂಫ್‌ ಕೇಳಿದ ಕಾಂಗ್ರೆಸ್‌ ನಾಯಕ

ಇನ್ನು ದಿಗ್ವಿಜಯ್‌ ಸಿಂಗ್‌ ಅವರ ಹೇಳಿಕೆಯ ಕುರಿತಾಗಿ ಜೈರಾಮ್‌ ರಮೇಶ್‌ ಅವರಿಗೆ ಜಮ್ಮುವಿನಲ್ಲಿ ಮಾಧ್ಯಮಗಳು ಪ್ರಶ್ನೆ ಮಾಡಿದ್ದವು. ದಿಗ್ವಿಜಯ್‌ ಸಿಂಗ್‌ ಅವರ ಕುರಿತಾಗಿ ಪ್ರಶ್ನೆ ಕೇಳಿದಾಗ ಸಿಟ್ಟಾಗಿದ್ದಾರೆ. ನಿಮ್ಮ ಪ್ರಶ್ನೆಗಳೆಲ್ಲಾ ಸಾಕು. ನಮಗೆ ಮುಂದುವರಿಯಲು ಬಿಡಿ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದ್ದೇನೆ. ಪ್ರಧಾನಿ ಮೋದಿ ಅವರ ಬಳಿ ಹೋಗಿ ಇದೇ ಪ್ರಶ್ನೆಗಳನ್ನು ಕೇಳಿ ಎಂದು ಕೂಗಾಡಿದ್ದಾರೆ. ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿಯೇ ದಿಗ್ವಿಜಯ್ ಸಿಂಗ್ ಅವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸರ್ಕಾರ ಎಂದಿಗೂ ಪುರಾವೆ ನೀಡಲಿಲ್ಲ ಎಂದು ಹೇಳಿದ್ದರು. ವಿವಾದ ಹೆಚ್ಚಾದಾಗ, ನಾವು ಭಾರತೀಯ ಸೇನೆಯನ್ನು ಗೌರವಿಸುತ್ತೇವೆ ಮತ್ತು ಅದು ನಮಗೆ ಎಲ್ಲಕ್ಕಿಂತ ಹೆಚ್ಚಾಗಿರುತ್ತದೆ ಎಂದು ಸ್ಪಷ್ಟನೆ ನೀಡಿದ್ದರು.