ಪ್ರಿಯಾಂಕಾ ಗಾಂಧಿಯವರಿಗೆ ಉನ್ನತ ಸ್ಥಾನ ನೀಡಬೇಕೆಂದು ಆಗ್ರಹಿಸಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ಪಕ್ಷದಿಂದ ವಜಾಗೊಂಡ ಬೆನ್ನಲ್ಲೇ, ಇದೀಗ ಸ್ವತಃ ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ ಅವರೇ ತಮ್ಮ ಪತ್ನಿಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ನವದೆಹಲಿ (ಡಿ.24): ಒಡಿಶಾ ಕಾಂಗ್ರೆಸ್ ನಾಯಕ ಮೊಹಮ್ಮದ್ ಮೊಖೀಮ್, ಪಕ್ಷದಲ್ಲಿ ಪ್ರಿಯಾಂಕಾ ಗಾಂಧಿಯವರಿಗೆ ಉನ್ನತ ಸ್ಥಾನ ನೀಡಬೇಕೆಂದು ಆಗ್ರಹಿಸಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ಪಕ್ಷದಿಂದ ವಜಾಗೊಂಡ ಬೆನ್ನಲ್ಲೇ, ಇದೀಗ ಸ್ವತಃ ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ ಅವರೇ ತಮ್ಮ ಪತ್ನಿಯ ಪರ ಬ್ಯಾಟಿಂಗ್ ಮಾಡಿದ್ದಾರೆ.
‘ಪ್ರಿಯಾಂಕಾ ಅವರನ್ನು ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಯಾಗಿ ಮಾಡುವಂತೆ ಪಕ್ಷದಲ್ಲಿ ಎಲ್ಲೆಡೆಯಿಂದ ಒತ್ತಡ ಇದೆ’ ಎಂದು ಹೇಳಿದ್ದಾರೆ. ಮತ್ತೊಂದೆಡೆ ಉತ್ತರ ಪ್ರದೇಶದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ಪ್ರಿಯಾಂಕಾರನ್ನು ಪ್ರಧಾನಿ ಅಭ್ಯರ್ಥಿ ಮಾಡಬೇಕೆಂದು ಮಂಗಳವಾರ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಸಂಸತ್‌ನಲ್ಲಿ ಮತಚೋರಿ ಕುರಿತ ಚರ್ಚೆ ವೇಳೆ ರಾಹುಲ್ ಮತ್ತು ಪ್ರಿಯಾಂಕಾ ಮಾಡಿದ ಭಾಷಣವನ್ನು ಪಕ್ಷದ ನಾಯಕರು ತುಲನೆ ಮಾಡಿದ್ದಾರೆ. ಈ ವೇಳೆ ಎಲ್ಲರೂ ಪ್ರಿಯಾಂಕಾ ಪರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದು ರಾಹುಲ್ ವಿದೇಶಕ್ಕೆ ತೆರಳಿದ್ದಾರೆ ಎಂದು ಆರೋಪಿಸಿದ ಬೆನ್ನಲ್ಲೇ ಇದೀಗ ಪ್ರಿಯಾಂಕಾ ಪರ ಕೇಳಿಬಂದ ಘೋಷಣೆಗಳು, ಕಾಂಗ್ರೆಸ್‌ನಲ್ಲಿ ನಾಯಕತ್ವದ ಕುರಿತಾಗಿ ಆಂತರಿಕ ಸಂಘರ್ಷಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಇಮ್ರಾನ್ ಬ್ಯಾಟಿಂಗ್: ಸುದ್ದಿಗಾರರ ಜೊತೆ ಮಾತನಾಡಿದ ಮಸೂದ್, ‘ಪ್ರಿಯಾಂಕಾರನ್ನು ಪ್ರಧಾನಿ ಮಾಡಿ. ಅವರು ಇಂದಿರಾ ಗಾಂಧಿಯವರ ಮೊಮ್ಮಗಳು. ಇಂದಿರಾ ಪಾಕಿಸ್ತಾನಕ್ಕೆ ಮಾಡಿದ ಗಾಯಗಳು ಇನ್ನೂ ವಾಸಿಯಾಗಿಲ್ಲ. ಪ್ರಿಯಾಂಕಾ ಸಹ ಇಂದಿರಾ ಗಾಂಧಿಯಂತೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾರೆಂದು ನೋಡಿ’ ಎಂದಿದ್ದಾರೆ. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ವಾದ್ರಾ, ‘ಪ್ರಿಯಾಂಕಾ ಮುಂದೆ ಬರಬೇಕು ಎಂಬ ಬೇಡಿಕೆ ಎಲ್ಲೆಡೆಯಿಂದ ಬರುತ್ತಿದೆ. ನಾನು ರಾಜಕೀಯ ಪ್ರವೇಶಿಸಬೇಕು ಎಂಬ ಬೇಡಿಕೆಯೂ ಇದೆ. ಆದರೆ ಇದೀಗ, ಜನರಿಗೆ ಸಂಬಂಧಿಸಿದ ನೈಜ ಸಮಸ್ಯೆಗಳತ್ತ ನಾವು ಗಮನ ಹರಿಸಬೇಕು’ ಎಂದಿದ್ದಾರೆ.
ಗಾಂಧಿ ಕುಟುಂಬದಲ್ಲಿ ನಾಯಕತ್ವ ತಿಕ್ಕಾಟ?: ಒಂದೆಡೆ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ಪಟ್ಟ ಕಟ್ಟಬೇಕು ಎಂಬ ಕೂಗು ಕಾಂಗ್ರೆಸ್ಸಲ್ಲಿದೆ. ಈಗ ಪ್ರಿಯಾಂಕಾ ಪರ ಕೂಗು ಕೇಳಿಬಂದಿದೆ. ಇದು ಸೋದರ-ಸೋದರಿ ನಡುವೆ ಒಡಕಿಗೆ ಕಾರಣವಾಗುತ್ತಾ ಎಂಬ ವಿಶ್ಲೇಷಣೆ ರಾಜಕೀಯ ಪಡಸಾಲೆಯಲ್ಲಿ ಆರಂಭವಾಗಿದೆ.
ಪ್ರಿಯಾಂಕಾ ಪರ ಕಾಂಗ್ರೆಸ್ಸಲ್ಲಿ ಕೂಗು
- ಇತ್ತೀಚೆಗೆ ಪ್ರಿಯಾಂಕಾಗೆ ಉನ್ನತ ಸ್ಥಾನ ಸಿಗಲಿ ಎಂದಿದ್ದ ಒಡಿಶಾ ಮಾಜಿ ಶಾಸಕ/
- ಇದರ ಬೆನ್ನಲ್ಲೇ ಪ್ರಿಯಾಂಕಾ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಆಗಲಿ ಎಂದು ಕೂಗು
- ಪ್ರಿಯಾಂಕಾ ಪರ ಎಲ್ಲೆಡೆಯಿಂದ ಆಗ್ರಹ ಕೇಳಿ ಬರುತ್ತಿದೆ: ಪತಿ ರಾಬರ್ಟ್ ವಾದ್ರಾ
- ಅಜ್ಜಿ ಇಂದಿರಾ ರೀತಿ ಪ್ರಿಯಾಂಕಾ ಪ್ರಧಾನಿ ಆಗಬೇಕುಳ ಕೈ ಸಂಸದ ಮಸೂದ್


