ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕದ ಚರ್ಚೆಯ ವೇಳೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ಚತುರತೆಯನ್ನು 'ಚಾಣಕ್ಯನ ಕುಟಿಲತೆ'ಗೆ ಹೋಲಿಸಿ ವ್ಯಂಗ್ಯವಾಡಿದರು. 

ನವದೆಹಲಿ (ಏ.16): ಲೋಕಸಭೆಯಲ್ಲಿ ಗುರುವಾರ ನಡೆದ ಮಹಿಳಾ ಮೀಸಲು ಕಾನೂನು ತಿದ್ದುಪಡಿ ಮತ್ತು ಡಿಲಿಮಿಟೇಷನ್‌ ಆಯೋಗ ಸ್ಥಾಪನೆಗೆ ಸಂಬಂಧಿಸಿದ ಮೂರು ವಿಧೇಯಕಗಳ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ಚತುರತೆಯನ್ನು ವ್ಯಂಗ್ಯವಾಗಿ ಶ್ಲಾಘಿಸಿದರು. "ಒಂದು ವೇಳೆ ಇಂದು ಚಾಣಕ್ಯ ಬದುಕಿದ್ದಿದ್ದರೆ, ನಿಮ್ಮ ರಾಜಕೀಯ ಕುಟಿಲತೆಯನ್ನು ಕಂಡು ಆತನೇ ಬೆಚ್ಚಿಬೀಳುತ್ತಿದ್ದ" ಎಂದು ಹೇಳುವ ಮೂಲಕ ಸದನದಲ್ಲಿ ಲಘು ಹಾಸ್ಯದ ಜೊತೆಗೆ ತೀವ್ರ ವಾಗ್ದಾಳಿ ನಡೆಸಿದರು. ಪ್ರಿಯಾಂಕಾ ಅವರ ಮಾತು ಕೇಳೀ ಸ್ವತಃ ಅಮಿತ್‌ ಶಾ ಕೂಡ ನಕ್ಕರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ಕಾರದ ವಿರುದ್ಧ 'ವಂಚನೆ'ಯ ಆರೋಪ

ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಸರ್ಕಾರವು ಜನರನ್ನು ಮತ್ತೊಮ್ಮೆ "ವಂಚಿಸಲು" ಹೊರಟಿದೆ ಮತ್ತು ದೇಶದ ಸಮಗ್ರತೆಯ ಮೇಲೆ "ದೊಡ್ಡ ದಾಳಿ" ನಡೆಸುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು. "ಒಂದೆಡೆ ಮಹಿಳಾ ಮೀಸಲಾತಿಯ ಬಗ್ಗೆ ದೊಡ್ಡ ಮಾತುಗಳನ್ನಾಡಲಾಗುತ್ತಿದೆ, ಇನ್ನೊಂದೆಡೆ ಒಬಿಸಿಗಳ (OBC) ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಸಣ್ಣ ರಾಜ್ಯಗಳ ಪ್ರಭಾವವನ್ನು ಕುಗ್ಗಿಸುವ ಮೂಲಕ ಮತ್ತು ಪ್ರಜಾಪ್ರಭುತ್ವವನ್ನು ತುಂಡು ತುಂಡು ಮಾಡುವ ಮೂಲಕ ಮುಂದಿನ ಚುನಾವಣೆಗಾಗಿ ಬಲವಾದ ರಚನೆಯನ್ನು ನಿರ್ಮಿಸಲಾಗುತ್ತಿದೆ" ಎಂದು ಅವರು ಕಿಡಿಕಾರಿದರು.

ಅಮಿತ್ ಶಾ ನಗು ಮತ್ತು ಪ್ರಿಯಾಂಕಾ ವಾಗ್ದಾಳಿ

ಚರ್ಚೆಯ ವೇಳೆ ಅಮಿತ್ ಶಾ ಅವರು ನಗುತ್ತಿರುವುದನ್ನು ಗಮನಿಸಿದ ವಯನಾಡ್ ಸಂಸದೆಯೂ ಆಗಿರುವ ಪ್ರಿಯಾಂಕಾ, "ಗೃಹ ಸಚಿವರು ನಗುತ್ತಿದ್ದಾರೆ... ಅವರು ಈ ಸಂಪೂರ್ಣ ಯೋಜನೆಯನ್ನು ರೂಪಿಸಿದ್ದಾರೆ. ಚಾಣಕ್ಯ ಬದುಕಿದ್ದಿದ್ದರೆ ನಿಮ್ಮ 'ರಾಜಕೀಯ ಕುಟಿಲತೆ' ಕಂಡು ಆಶ್ಚರ್ಯಚಕಿತರಾಗುತ್ತಿದ್ದರು. ಅವರು (ಶಾ) ಪ್ಲಾನ್ ಮಾಡಿದ್ದಕ್ಕೆ ಈಗ ನಗುತ್ತಿದ್ದಾರೆ... ಅಂದರೆ ಅವರು ನನ್ನ ಮಾತನ್ನು ಒಪ್ಪುತ್ತಿದ್ದಾರೆ ಎಂದೇ ಅರ್ಥ" ಎಂದು ಲೇವಡಿ ಮಾಡಿದರು.

ಬಿಜೆಪಿಯ ರಣತಂತ್ರದ ಬಗ್ಗೆ ಟೀಕೆ

ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ ಅವರು, ಚುನಾವಣಾ ಸಮಯದಲ್ಲಿ ಸಂಸತ್ತಿನ ಅಧಿವೇಶನ ಕರೆಯುವುದು, ಸರ್ವಪಕ್ಷ ಸಭೆ ನಡೆಸದಿರುವುದು ಮತ್ತು ಮಸೂದೆಯ ಕರಡನ್ನು ಕೇವಲ ಒಂದು ದಿನ ಮುಂಚಿತವಾಗಿ ಹಂಚಿಕೊಳ್ಳುವುದರ ಹಿಂದೆ ವಿರೋಧ ಪಕ್ಷಗಳಿಗೆ ಚರ್ಚಿಸಲು ಅವಕಾಶ ನೀಡಬಾರದು ಎಂಬ ಸಂಚಿದೆ ಎಂದು ಆರೋಪಿಸಿದರು. "ಮಹಿಳಾ ಸಬಲೀಕರಣಕ್ಕಾಗಿ ಪ್ರಧಾನಿ ಮೋದಿ ದೊಡ್ಡ ಹೆಜ್ಜೆ ಇಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ಚರ್ಚೆ ಶುರು ಮಾಡಿಸಿ, ವಿರೋಧ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುವುದು ಇವರ ತಂತ್ರ" ಎಂದರು.

"ರಾಜಕೀಯದಲ್ಲಿ ಚತುರತೆ ಇರುವುದು ಒಂದು ವಿಷಯ, ಬಹುಶಃ ನಾವು (ವಿರೋಧ ಪಕ್ಷಗಳು) ಈ ವಿಷಯದಲ್ಲಿ ಸ್ವಲ್ಪ ಹೆಚ್ಚು ಚತುರರಾಗಬೇಕಿರಬಹುದು. ಆದರೆ ಅಧಿಕಾರ ಹಿಡಿಯುವ ಆಕಾಂಕ್ಷೆಯನ್ನು ಬದಿಗಿಟ್ಟು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಮತ್ತೊಂದು ವಿಷಯ" ಎಂದು ಪ್ರಿಯಾಂಕಾ ಹೇಳಿದರು.

ಮೋದಿ ಮತ್ತು ಬಿಜೆಪಿಗೆ ಟಾಂಗ್

ಮಹಿಳಾ ಮೀಸಲಾತಿಯ ಏಕೈಕ ಚಾಂಪಿಯನ್ ತಾವೇ ಎಂದು ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ ಎಂದು ಪ್ರಧಾನಿ ಮೋದಿಯವರ ವಿರುದ್ಧವೂ ಅವರು ವಾಗ್ದಾಳಿ ನಡೆಸಿದರು. "ತಮ್ಮನ್ನು ಪದೇ ಪದೇ ದಾರಿತಪ್ಪಿಸಲು ಪ್ರಯತ್ನಿಸುವ ಪುರುಷರನ್ನು ಮಹಿಳೆಯರು ತಕ್ಷಣವೇ ಗುರುತಿಸಬಲ್ಲರು ಎಂದು ಯಾವುದೇ ಮಹಿಳೆಯೂ ನಿಮಗೆ ಹೇಳಬಲ್ಲಳು" ಎಂದು ಅವರು ಮಾರ್ಮಿಕವಾಗಿ ನುಡಿದರು.

ನೆಹರೂ-ಪಟೇಲ್ ಕಾಲದ ಇತಿಹಾಸ ನೆನಪಿಸಿದ ಪ್ರಿಯಾಂಕಾ

ಮಹಿಳಾ ಮೀಸಲಾತಿಯ ಇತಿಹಾಸವನ್ನು ವಿವರಿಸಿದ ಅವರು, ಈ ಹೋರಾಟವು ಬಿಜೆಪಿ ಹೇಳುತ್ತಿರುವಂತೆ ಈಗ ಶುರುವಾಗಿದ್ದಲ್ಲ ಎಂದರು. "ಈ ಕಥೆ ನೆಹರೂ ಹೆಸರಿನ ವ್ಯಕ್ತಿಯಿಂದ ಆರಂಭವಾಯಿತು. ಆದರೆ ನೀವು ಯಾರನ್ನು ತಪ್ಪಿಸಲು ಪ್ರಯತ್ನಿಸುತ್ತೀರೋ ಆ ನೆಹರೂ ಅಲ್ಲ (ಜವಾಹರಲಾಲ್ ನೆಹರೂ ಅವರನ್ನು ಉದ್ದೇಶಿಸಿ), ಅವರ ತಂದೆ ಮೋತಿಲಾಲ್ ನೆಹರೂ ಅವರ ಬಗ್ಗೆ ನಾನು ಹೇಳುತ್ತಿದ್ದೇನೆ" ಎಂದು ಟಾಂಗ್ ನೀಡಿದರು. 1928ರಲ್ಲಿ ಮೋತಿಲಾಲ್ ನೆಹರೂ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಸಲ್ಲಿಸಿದ ವರದಿಯಲ್ಲಿ 19 ಮೂಲಭೂತ ಹಕ್ಕುಗಳ ಪಟ್ಟಿಯನ್ನು ಸಿದ್ಧಪಡಿಸಿದ್ದರು. 1931ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕರಾಚಿ ಅಧಿವೇಶನದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು.

ಅಂದೇ 'ಒಂದು ಮತ, ಒಬ್ಬ ನಾಗರಿಕ, ಒಂದು ಮೌಲ್ಯ' ಎಂಬ ತತ್ವ ಜಾರಿಗೆ ಬಂದಿದ್ದರಿಂದ ಸ್ವಾತಂತ್ರ್ಯದ ಮೊದಲ ದಿನವೇ ಭಾರತದ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿತು. ಅಮೆರಿಕದಂತಹ ದೇಶಗಳಲ್ಲಿ ಮಹಿಳೆಯರು ಇದಕ್ಕಾಗಿ 150 ವರ್ಷ ಕಾಯಬೇಕಾಯಿತು ಎಂದು ಅವರು ನೆನಪಿಸಿದರು. ಅಂತಿಮವಾಗಿ, 2023ರಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಮಂಡನೆಯಾದಾಗ ಕಾಂಗ್ರೆಸ್ ತನ್ನ ಸೈದ್ಧಾಂತಿಕ ಬದ್ಧತೆಯಂತೆ ಅದನ್ನು ಪೂರ್ಣವಾಗಿ ಬೆಂಬಲಿಸಿತ್ತು ಮತ್ತು ಕಾಂಗ್ರೆಸ್ ಯಾವಾಗಲೂ ಮಹಿಳಾ ಮೀಸಲಾತಿಯ ಪರವಾಗಿ ದೃಢವಾಗಿ ನಿಲ್ಲುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

Scroll to load tweet…