* ಜನಪತ್ 10' ನಿವಾಸದಲ್ಲಿ ನಡೆದ ಸಭೆಯಲ್ಲಿ ಪಿಕೆ ಕಾಂಗ್ರೆಸ್‌ ಸೇರುವ ಮಾತು* ರಾಷ್ಟ್ರ ರಾಜಕಾರಣದಲ್ಲಿ ಹೊಸದಾಗಿ ಎಬ್ಬಿಸಿರುವ ರಾಜಕೀಯ ಬಿರುಗಾಳಿ* ವಿವಿಧ ರಾಜ್ಯಗಳಲ್ಲಿ ವಿವಿಧ ಪಕ್ಷಕ್ಕೆ ಗೆಲುವಿನ ಸಿಹಿ ಉಣಿಸಿದ್ದ ಪಿಕೆ

ನವದೆಹಲಿ(ಏ.19): ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ (ಪಿಕೆ) ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ? ಇದು ಫೇಕ್ ನ್ಯೂಸ್ ಅಲ್ಲ ಬದಲಿಗೆ `ಜನಪತ್ 10' ನಿವಾಸದಲ್ಲಿ ನಡೆದ ಸಭೆಯಿಂದ ಹೊರಬಿದ್ದಿರುವ ಮಾಹಿತಿ. ರಾಷ್ಟ್ರರಾಜಕಾರಣದಲ್ಲಿ ಹೊಸದಾಗಿ ಎಬ್ಬಿಸಿರುವ ರಾಜಕೀಯ ಬಿರುಗಾಳಿ ಸುದ್ದಿ ಕೂಡ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಗೆಲುವು ದೊರಕಿಸಿದ್ದು, ತಮಿಳುನಾಡಿನಲ್ಲಿ ಡಿಎಂಕೆ, ಪಂಜಾಬ್‍ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸಿಹಿ ಉಣಿಸಿದ್ದು, ಇಷ್ಟಕ್ಕೂ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬರಲು ತಂತ್ರಗಾರಿಕೆ ರೂಪಿಸಿದ್ದು ಇದೇ ಪ್ರಶಾಂತ್ ಕಿಶೋರ್.

ಒಂದು ರೀತಿಯಲ್ಲಿ ಗೆಲುವಿನ ಜಾದುಗಾರ ಅಂತಲೇ ಹೇಳುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ದೆಹಲಿಯ ರಾಜಕೀಯ ಕಟ್ಟೆಯಲ್ಲಿ ಈಗ ಬಹು ಚರ್ಚಿತ ವ್ಯಕ್ತಿ. ಇಂಡಿಯಾ ರಾಜಕಾರಣದಲ್ಲಿ ಮುಳುಗುತ್ತಿರುವ ಹಡುಗು ಅಂತಲೇ ಕೆಲ ಪಕ್ಷಗಳಿಂದ ಟೀಕೆಗೆ ಒಳಗಾಗಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆಗೆ ಹೊಸದಾಗಿ ಆಕ್ಸಿಜನ್ ನೀಡಲು ಪಿಕೆ ಮುಂದಾಗಿದ್ದಾರೆ ಎನ್ನುವುದು ಮತ್ತೊಂದು ಆಸಕ್ತರ ವಿಷಯ.

ಕೋಮುದ್ವೇಷದ ಬಗ್ಗೆ 12 ವಿಪಕ್ಷ ನಾಯಕರ ಕಳವಳ: ದ್ವೇಷದ ಸುನಾಮಿ ಆವರಿಸುತ್ತಿದೆ ಎಂದ ಸೋನಿಯಾ ಗಾಂಧಿ

ಚುನಾವಣೆಗಳಲ್ಲಿ ಪ್ರಶಾಂತ್ ಕಿಶೋರ್ ಜಾದು ಬಿಜೆಪಿ, ಕಾಂಗ್ರೆಸ್ ಸೇರಿ ಹಲವು ಪ್ರಾದೇಶಿಕ ಪಕ್ಷಗಳಿಗೆ ಗೆಲುವಿನ ರೂಪದಲ್ಲಿ ಅನುಭವಕ್ಕೆ ಬಂದಿದೆ. 2014ರಲ್ಲಿ ಬಿಜೆಪಿಗೆ ಗೆಲುವು ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಿಕೆ, ಬಳಿಕ ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ತೀವ್ರ ವಿರಸ ಕಟ್ಟಿಕೊಂಡರು. ಅದೆಷ್ಟರ ಮಟ್ಟಿಗೆ ಅಂದರೆ ಬಿಹಾರದಲ್ಲಿ ಹೊಸ ಪಕ್ಷ ಕಟ್ಟಿ ರಾಜಕೀಯದಲ್ಲಿ ತಮ್ಮ ಛಾತಿ ತೋರಿಸುವುದಾಗಿ ಹೇಳಿದರು. ಆದರೆ ಬಿಹಾರ ಮತದಾರ ಮಾತ್ರ ಪಿಕೆಯನ್ನು ಕೈಹಿಡಯಲಿಲ್ಲ. ಆ ನಂತರ ತಮ್ಮ ಐ-ಪ್ಯಾಕ್ ಸಂಸ್ಥೆಯ ಮೂಲಕ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಗೆಲುವಿಗೆ ಶ್ರಮಿಸಿದ್ದು ಮಾತ್ರ ಸುಳ್ಳಲ್ಲ. ಪಿಕೆ ಹೆಜ್ಜೆ ಇಟ್ಟ ಕಡೆ ಗೆಲುವು ಇರುತ್ತೆ ಅನ್ನೋ ಲೆಕ್ಕಾಚಾರಗಳು ಇದ್ದಾಗಲೇ ಬಿಜೆಪಿಯ ಸಹ್ಯದಿಂದ ಹೊರಬಂದರು.

ಹೊಸ ವೇಶದಲ್ಲಿ ಪಿಕೆ ..! : 

ಪಿಕೆ ಅಲಿಯಾಸ್ ಪ್ರಶಾಂತ್ ಕಿಶೋರ್‍ಗೆ ಚುನಾವಣೆಗಳಲ್ಲಿ ಗೆಲುವಿನ ತಂತ್ರಗಾರಿಕೆ ಮಾಡಿ ಗೊತ್ತು. ಒಂದು ರಾಜಕೀಯ ಪಕ್ಷ ಕಟ್ಟಿದ ಸಣ್ಣಪುಟ್ಟ ಅನುಭವವೂ ಇದೆ. ಇದೇ ಅನುಭವ ಬಳಸಿಕೊಳ್ಳಲು ಈಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮುಂದಾಗಿದೆ. ಸಾಮಾನ್ಯಕ್ಕೆ ಪ್ರತಿ ತಂತ್ರಗಾರಿಕೆ ಕುರಿತು ತಮ್ಮ ಇಷ್ಟದಂತೆ ಅಥವಾ ತಮ್ಮ ಆಪ್ತ ಬಳಗದ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತಿದ್ದ ಕಾಂಗ್ರೆಸ್ ಅಧಿನಾಯಕಿ, ಇಂದು ಪೂರ್ತಿಯಾಗಿ ಪ್ರಜಾಸತ್ತಾತ್ಮಕ ಕ್ರಿಯೆ ಅನುಸರಿಸಿದ್ದಾರೆ.

ಜಿ-23 ನಾಯಕರು ಸೇರಿ ಹಲವು ಪಕ್ಷ ಪವರ್‍ನಲ್ಲಿದ್ದಾಗ ಅಧಿಕಾರ ಉಂಡವರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹಬಗೆದರು ಅನ್ನುವ ಅಂಶವನ್ನು ಮನಗಂಡ ಅಧಿನಾಯಕಿ, ಇದೀಗ ಕಾಂಗ್ರೆಸ್‍ನ ಪ್ರಮುಖ ನಾಯಕರ ಜೊತೆಯಲ್ಲೇ ಪ್ರಶಾಂತ್ ಕಿಶೋರ್ ಅವರನ್ನು ಕುರಿಸಿದ್ದಾರೆ. 2024ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಟಕ್ಕರ್ ಕೊಡಲು ಸಿದ್ದತೆ ನಡೆಸಿದ್ದಾರೆ. ಇದರ ಭಾಗವಾಗಿ ಇಂದು ಸೋನಿಯಾ ಮೇಡಂ ನಿವಾಸದಲ್ಲಿ ಪ್ರಶಾಂತ್ ಕಿಶೋರ್ ಸಮ್ಮುಖದಲ್ಲಿ ನಡೆದ ಸಭೆಯೇ ಉದಾಹರಣೆ.

ಕಳೆದ ನಾಲ್ಕು ದಿನಗಳಲ್ಲಿ ಸೋನಿಯಾ ಮೇಡಂ ಮತ್ತು ಪ್ರಶಾಂತ್ ಕಿಶೋರ್ ನಡುವೆ ನಡೆದ ಮೂರನೇ ಮೀಟಿಂಗ್ ಇದಾಗಿದೆ. ಇವತ್ತು ನಡೆದ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಎ.ಕೆ.ಅಂಟೋನಿ, ಕಮಲ್‍ನಾಥ್, ದಿಗ್ವಿಜಯ್ ಸಿಂಗ್, ಜೈರಾಮ್ ರಮೇಶ್, ಅಂಬಿಕಾ ಸೋನಿ, ಕೆ.ಸಿ.ವೇಣುಗೋಪಾಲ್, ರಣದೀಪ್‍ಸಿಂಗ್ ಸುರ್ಜೇವಾಲ ಸೇರಿ ಹಲವು ಮುಖಂಡರು ಭಾಗವಹಿಸಿದ್ದರು.

ಕೋಮುದ್ವೇಷದ ಬಗ್ಗೆ 12 ವಿಪಕ್ಷ ನಾಯಕರ ಕಳವಳ: ದ್ವೇಷದ ಸುನಾಮಿ ಆವರಿಸುತ್ತಿದೆ ಎಂದ ಸೋನಿಯಾ ಗಾಂಧಿ

ನೀವು ಬರೀ ಸಲಹೆಗಾರರಾಗಬೇಡಿ..! 

ಕಾಂಗ್ರೆಸ್ ಪಕ್ಷ ಪ್ರಶಾಂತ್ ಕಿಶೋರ್ ಅವರ ಮುಂದೆ ಇರಿಸಿರುವ ಒನ್ ಲೇನ್ ಸಲಹೆ ಕಮ್ ಮನವಿ. ಕೇವಲ ಪಕ್ಷಕ್ಕೆ ಸಲಹೆಗಾರರಾಗುವುದಕ್ಕಿಂತ ಪಕ್ಷಕ್ಕೆ ಸೇರಿ ಅಂತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಶಾಂತ್ ಕಿಶೋರ್‍ಗೆ ಆಹ್ವಾನ ನೀಡಿದೆ. ಇದಕ್ಕೆ ಪಿಕೆ ಕೂಡ ಸಕಾರಾತ್ಕಕವಾಗಿ ಪ್ರತಿಕ್ರಿಯೆಸಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಪಿಕೆ ಅವರ ಪಾತ್ರ ಏನು ? ಅನ್ನೋದು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಧರಿಸಲಿದ್ದಾರೆ. ಒಂದು ವಾರದಲ್ಲಿ ಈ ಕುರಿತಾದ ಆದೇಶ ಹೊರ ಬೀಳಲಿದೆ ಎಂದು ಎಐಸಿಸಿ ಮೂಲಗಳು ತಿಳಿಸಿವೆ.

ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ,ಕೆ.ಸಿ.ವೇಣುಗೋಪಾಲ್, 2024ರ ಸಾರ್ವತ್ರಿಕ ಚುನಾವಣೆಯ ರೋಡ್ ಮ್ಯಾಪ್ ಕುರಿತು ಇಂದು ಪ್ರಶಾಂತ್ ಕಿಶೋರ್ ಸಭೆಗೆ ವಿವರವಾಗಿ ವಿವರಣೆ ನೀಡಿದರು ಎಂದರು. ಇನ್ನು ಮೂಲಗಳು ಹೇಳುವ ಪ್ರಕಾರ, 2022ರ ಡಿಸೆಂಬರ್ ನಲ್ಲಿ ನಡೆಯಲಿರುವ ಹಿಮಾಚಲ ಪ್ರದೇಶ ಹಾಗು ಗುಜರಾತ್ ನಲ್ಲಿ ಕಾಂಗ್ರೆಸ್ ತಂತ್ರಗಾರಿಕೆ ಏನು ಇರಬೇಕು ಅನ್ನೋದು ಕೂಡ ಚರ್ಚೆಯಾಗಿದೆ ಎನ್ನಲಾಗಿದೆ. ಅಲ್ಲದೇ 20024ರ ಲೋಕಸಭಾ ಚುನಾವಣೆಗೆ 370 ಟಾರ್ಗೆಟ್ ಇರಬೇಕು ಅನ್ನೋದರ ಬಗ್ಗೆ ಕೂಡ ಪಿಕೆ ಮೀಟಿಂಗ್‍ನಲ್ಲಿ ವಿವರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವರದಿ: ಡೆಲ್ಲಿ ಮಂಜು