ನಾಲ್ಕು ವರ್ಷಗಳ ಹಿಂದೆ ಆರಂಭವಾಗಿದ್ದ ಪ್ರಸಾರ ಭಾರತಿ ನ್ಯೂಸ್‌ ಸರ್ವೀಸ್‌ ಮುಚ್ಚುವ ಲಕ್ಷಣಗಳು ಕಾಣುತ್ತಿವೆ. ನೇರವಾಗಿ ಸರ್ಕಾರ ಇದನ್ನು ತಿಳಿಸದೇ ಇದ್ದರೂ, ಪಿಬಿಎನ್‌ಎಸ್‌ಅಲ್ಲಿ ಇದ್ದ ಉದ್ಯೋಗಿಗಳನ್ನು ಬೇರೆಡೆಗೆ ಶಿಫ್ಟ್‌ ಆಗುವಂತೆ ತಿಳಿಸಲಾಗಿದೆ.

ನವದೆಹಲಿ (ಜೂ.18): ಭಾರತದ ಸಾರ್ವಜನಿಕ ಪ್ರಸಾರದ ಸುದ್ದಿವಾಹಿನಿಯಾಗಿ ಸೇವೆ ಸಲ್ಲಿಸಲು ಪ್ರಾರಂಭವಾದ ನಾಲ್ಕು ವರ್ಷಗಳ ನಂತರ, ಪ್ರಸಾರ ಭಾರತಿ ನ್ಯೂಸ್‌ ಸರ್ವೀಸ್‌ (ಪಿಬಿಎನ್‌ಎಸ್‌) ಭವಿಷ್ಯದ ಮೇಲೆ ಅನಿಶ್ಚಿತತೆಯು ಮೋಡ ಆವರಿಸಿದೆ. ಮೇಲ್ನೋಟಕ್ಕೆ ಪಿಬಿಎನ್‌ಎಸ್‌ ಕಾರ್ಯನಿವರ್ಹಿಸುತ್ತಿದ್ದರೂ, ಶೀಘ್ರದಲ್ಲಿಯೇ ಇದು ಮುಚ್ಚಬಹುದು ಎಂದು ಅಲ್ಲಿನ ಉದ್ಯೋಗಿಗಳೇ ತಿಳಿಸಿದ್ದಾರೆ. ಈ ವರ್ಷದ ಏಪ್ರಿಲ್‌ನಲ್ಲಿ ಪಿಬಿಎನ್‌ಎಸ್‌ನ ಮುಖ್ಯಸ್ಥ ಸಮೀರ್‌ ಕುಮಾರ್‌ ರಾಜೀನಾಮೆ ನೀಡಿದ ಬಳಿಕ, ಈ ತಿಂಗಳ ಆರಂಭದಲ್ಲಿಯೇ ಪಿಬಿಎನ್‌ಎಸ್‌ನ ಉದ್ಯೋಗಿಗಳಿಗೆ ಬ್ರಾಡ್‌ಕಾಸ್ಟರ್‌ನ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. PBNS ಗ್ರಾಫಿಕ್ಸ್ ಮತ್ತು ತಾಂತ್ರಿಕ ವಿಭಾಗದಲ್ಲಿ 12-14 ಜನರ ಜೊತೆಗೆ ಅದರ ಸಂಪಾದಕೀಯ ವಿಭಾಗದಲ್ಲಿ 25 ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದರು. ಈ ಉದ್ಯೋಗಿಗಳು ಈಗ ದೂರದರ್ಶನ ಅಥವಾ ಆಲ್ ಇಂಡಿಯಾ ರೇಡಿಯೊದಲ್ಲಿ ಕೆಲಸ ಮಾಡುತ್ತಿದ್ದಾರೆ. ಜೂನ್ 9 ರ ವೇಳೆಗೆ, ಉದ್ಯೋಗಿಗಳು ತಮ್ಮ ಹೊಸ ಕೆಲಸಗಳಿಗೆ ಸೇರಿದ್ದಾರೆ. '15 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಡಿಡಿಗೆ ಸೇರುವಂತೆ ಸೂಚಿಸಲಾಗಿದ್ದರೆ, 10 ಮಂದಿಯನ್ನು AIR ಗೆ ವರ್ಗಾಯಿಸಲಾಗಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುದ್ದಿ ಸೇವೆಯನ್ನು ವಿಸರ್ಜಿಸುವ ನಿರ್ಧಾರವನ್ನು ಪ್ರಸಾರ ಭಾರತಿಯ ಹೊಸ ಸಿಇಒ ಗೌರವ್ ದ್ವಿವೇದಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಗೌರವ್‌ ದ್ವಿವೇದಿ ಕಳೆದ ವರ್ಷ ನವೆಂಬರ್‌ನಲ್ಲಿ ಈ ಹುದ್ದೆ ವಹಿಸಿಕೊಂಡಿದ್ದರು. ನಮ್ಮ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಿದ್ದಾಗಿ ತಿಳಿಸಿದ್ದಾರೆ. ಈ ವರ್ಷದ ಏಪ್ರಿಲ್ 22 ರಂದು ರಾಜೀನಾಮೆ ನೀಡಿದ ಪಿಬಿಎನ್‌ಎಸ್‌ನ ಮಾಜಿ ಮುಖ್ಯಸ್ಥ ಸಮೀರ್ ಕುಮಾರ್ ಅವರು ಹಿಂದೂಸ್ಥಾನ ಸಮಾಚಾರ್ ಸಿಇಒ ಆಗಿ ಸೇವೆ ಸಲ್ಲಿಸಿದ ನಂತರ ಪ್ರಸಾರ ಭಾರತಿಗೆ ಸೇರಿದ್ದರು ಮತ್ತು ಹಿಂದೂಸ್ತಾನ್ ಸಮಾಚಾರ್ ಪತ್ರಿಕೆಗೂ ಮುನ್ನ ಅವರ ಮಾಧ್ಯಮ ಕ್ಷೇತ್ರದಲ್ಲಿ ಯಾವುದೇ ಅನುಭವ ಹೊಂದಿರಲಿಲ್ಲ. ಕನಿಷ್ಠ ನೋಟಿಸ್ ಅವಧಿ ನೀಡದೆ ಕುಮಾರ್ ಹೊರಹೋಗಿದ್ದರು ಎನ್ನಲಾಗಿದೆ.

ಹಲವಾರು ಉದ್ಯೋಗಿಗಳು ಮುಂದೆ ಏನಾಗುತ್ತದೆ ಎಂಬುದರ ಕುರಿತು ಚಿಂತಿತರಾಗಿದ್ದಾರೆ. ಪ್ರಸಾರ ಭಾರತಿಯಲ್ಲಿಯೇ ಬರುತ್ತಿರುವ ಊಹಾಪೋಹಗಳ ಪ್ರಕಾರ, ಇವರೆಲ್ಲರ ಕೆಲಸಗಳೂ ಹೋಗಬಹುದು ಎನ್ನುವ ಮಾತುಗಳೂ ಬರುತ್ತಿವೆ. ಕಾರ್ಯಕ್ರಮವನ್ನು ನಡೆಸುತ್ತಿದ್ದ ಉದ್ಯೋಗಿಗಳಲ್ಲಿ ಹಲವಾರು ಇಂಟರ್ನ್‌ಗಳು ಇದ್ದರು, ಕೇವಲ ಬೆರಳೆಣಿಕೆಯಷ್ಟು ಅನುಭವಿಗಳಿದ್ದರು ಎಂದು ಮೂಲಗಳು ತಿಳಿಸಿವೆ. ತಾಂತ್ರಿಕ ವಿಭಾಗದಿಂದ ಆರು ಮತ್ತು ಸಂಪಾದಕೀಯ ವಿಭಾಗದಿಂದ ಇಬ್ಬರು ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ ಮತ್ತು ಅವರು ಕುಮಾರ್ ಪ್ರಾರಂಭಿಸಿರುವ ಹೊಸ ಉದ್ಯಮಕ್ಕೆ ಮುಂದಾಗಿದ್ದಾರೆ ಎಂಬ ಊಹಾಪೋಹಗಳಿವೆ.

ಮಲ್ಟಿಮೀಡಿಯಾ ಸ್ವರೂಪದಲ್ಲಿ ಡಿಜಿಟಲ್ ಮತ್ತು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುದ್ದಿ ಮತ್ತು ಸಾರ್ವಜನಿಕ ಹಿತಾಸಕ್ತಿ ಸುದ್ದಿಗಳನ್ನು ಪ್ರಸಾರ ಮಾಡಲು ಪ್ರಸಾರ ಭಾರತಿ 2019 ರಲ್ಲಿ ಔಪಚಾರಿಕವಾಗಿ ಪಿಬಿಎನ್‌ಎಸ್‌ಅನ್ನು ಪ್ರಾರಂಭಿಸಿತು. ಸುದ್ದಿ ಸೇವೆಯನ್ನು ಪ್ರಾರಂಭಿಸುವ ನಿರ್ಧಾರವನ್ನು ಪ್ರಸಾರ ಭಾರತಿ ಮಂಡಳಿಯು 2016 ರಲ್ಲಿ ತೆಗೆದುಕೊಂಡಿತು.

ಪ್ರಸಾರ ಭಾರತಿ ಮಾಜಿ ಅಧ್ಯಕ್ಷರಿಗೆ ಟಿಎಂಸಿ ರಾಜ್ಯಸಭಾ ಟಿಕೆಟ್‌!

ಪ್ರಸಾರ ಭಾರತಿ 500 ಕ್ಕೂ ಹೆಚ್ಚು ಅರೆಕಾಲಿಕ ಉದ್ಯೋಗಿಗಳನ್ನು ಹೊಂದಿದ್ದರೆ, ದೂರದರ್ಶನ ದೇಶಾದ್ಯಂತ 600 ಉದ್ಯೋಗಿಗಳ ಜಾಲವನ್ನು ಹೊಂದಿದೆ. ಡಿಡಿ 39 ಪ್ರಾದೇಶಿಕ ಘಟಕಗಳನ್ನು ಹೊಂದಿದೆ.
ಪಿಬಿಎನ್‌ಎಸ್‌ ಉಚಿತವಾಗಿ ಸುದ್ದಿಯನ್ನು ಪ್ರಸಾರ ಮಾಡುತ್ತಿತ್ತು ಮತ್ತು ಚಂದಾದಾರಿಕೆ ಮಾದರಿಯನ್ನು ಪ್ರಾರಂಭಿಸುವ ಯೋಜನೆಯು ಜಾರಿಯಲ್ಲಿತ್ತು. ಈ ವರ್ಷದ ಆರಂಭದಲ್ಲಿ ಆರ್‌ಎಸ್‌ಎಸ್ ಬೆಂಬಲಿತ ಸುದ್ದಿ ಸಂಸ್ಥೆ ಹಿಂದೂಸ್ತಾನ್ ಸಮಾಚಾರ್‌ನೊಂದಿಗೆ ಎರಡು ವರ್ಷಗಳ ವಿಶೇಷ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ವಿವಾದವೂ ಏರ್ಪಟ್ಟಿತ್ತು. 

ವಿದ್ಯುತ್ ದರ ಕಡಿಮೆಯಾಗಲ್ಲ ಎಂದ ಸಿಎಂ: ಕರ್ನಾಟಕ ಬಂದ್‌ಗೆ ಕರೆಕೊಟ್ಟ ಕೆಸಿಸಿಐ