ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ವಿವಿಧ ಇಲಾಖೆಗಳ ಮೌಲ್ಯಮಾಪನ ಮಾಡಿ ರ್‍ಯಾಂಕಿಂಗ್‌ ನೀಡಿದ್ದು, ಇದರಲ್ಲಿ ಪ್ರಹ್ಲಾದ್‌ ಜೋಶಿ ಅವರ ಗ್ರಾಹಕರ ವ್ಯವಹಾರಗಳ ಸಚಿವಾಲಯವು ನಂಬರ್ 1 ಸ್ಥಾನ ಪಡೆದಿದೆ. ಯಾವ್ಯಾವ ಇಲಾಖೆಗಳು ಉತ್ತಮ ಕಾರ್ಯ ಮಾಡಿವೆ ತಿಳಿಯಿರಿ

ನವದೆಹಲಿ (ಮೇ.24): ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ವಿವಿಧ ಇಲಾಖೆಗಳ ಮೌಲ್ಯಮಾಪನ ಮಾಡಿ ರ್‍ಯಾಂಕಿಂಗ್‌ ನೀಡಿದ್ದು, ಇದರ ಆಧಾರದ ಮೇಲೆ ಸಚಿವರಾದ ಪ್ರಹ್ಲಾದ್‌ ಜೋಶಿ ಅವರ ಗ್ರಾಹಕರ ವ್ಯವಹಾರಗಳ ಸಚಿವಾಲಯವು ನಂ.1 ಸ್ಥಾನ ಪಡೆದಿದೆ.

Add Asianetnews Kannada as a Preferred SourcegooglePreferred

ನಂತರದ 3 ಸ್ಥಾನಗಳು ಜಿ.ಕಿಶನ್ ರೆಡ್ಡಿ ಅವರ ಕಲ್ಲಿದ್ದಲು, ಮನೋಹರ್‌ ಲಾಲ್‌ ಖಟ್ಟರ್‌ ಅವರ ವಿದ್ಯುತ್ ಮತ್ತು ಜೆ.ಪಿ.ನಡ್ಡಾ ಅವರ ಆರೋಗ್ಯ ಇಲಾಖೆಯ ಪಾಲಾಗಿವೆ. ಈ 4 ಸಚಿವಾಲಯಗಳು ಟಾಪ್-4 ಅತ್ಯುತ್ತಮ ಸಾಧನೆ ಮಾಡಿದ ಇಲಾಖೆಗಳಾಗಿ ಹೊರಹೊಮ್ಮಿವೆ.

ಕಡತಗಳ ವಿಲೇವಾರಿ, ಸಾರ್ವಜನಿಕ ಕುಂದು-ಕೊರತೆ ಪರಿಹಾರ ಸೇರಿ ವಿವಿಧ ಮಾನದಂಡಗಳ ಆಧಾರದಲ್ಲಿ ರ್‍ಯಾಂಕಿಂಗ್ ನೀಡಲಾಗಿದೆ. 3 ದಿನದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಮಂತ್ರಿಮಂಡಲದ ಸಭೆಯಲ್ಲಿ ಇದನ್ನು ಪ್ರಕಟಿಸಲಾಯಿತು ಎಂದು ‘ಹಿಂದುಸ್ತಾನ್ ಟೈಮ್ಸ್‌’ ವರದಿ ಮಾಡಿದೆ. ಆದರೆ ಇತರ ಇಲಾಖೆಗಳ ಸಾಧನೆ ಏನು? ಅವುಗಳ ರ್‍ಯಾಂಕಿಂಗ್ ಏನು ಎಂಬ ಮಾಹಿತಿ ಲಭ್ಯವಾಗಿಲ್ಲ.

ಈ ರೀತಿಯ ಮೌಲ್ಯಾಂಕನದ ಮೂಲ ಉದ್ದೇಶ- ಇಲಾಖೆಗಳು ಉತ್ತಮ ಸಾಧನೆ ತೋರುವುದು ಮತ್ತು ಎಲ್ಲಿ ಎಡವಿದ್ದೇವೆ ಎಂಬುದನ್ನು ಗುರುತಿಸಿ ಸುಧಾರಿಸಿಕೊಳ್ಳುವುದೇ ಆಗಿದೆ ಎಂದು ಸಚಿವ ಸಂಪುಟ ಕಾರ್ಯದರ್ಶಿ ಟಿ.ವಿ.ಸೋಮನಾಥನ್‌ ತಿಳಿಸಿದ್ದಾರೆ.

ಪ್ರಲ್ಹಾದ್ ಜೋಶಿ ಇಲಾಖೆ ಏಕೆ ನಂ.1?

ಪ್ರಹ್ಲಾದ್‌ ಜೋಶಿ ಅವರ ಗ್ರಾಹಕರ ವ್ಯವಹಾರಗಳ ಇಲಾಖೆಯು ಗ್ರಾಹಕರ ಕುಂದು-ಕೊರತೆ ಪರಿಹಾರ ಮತ್ತು ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ಎದುರಾಗಿರುವ ಬಿಕ್ಕಟ್ಟು ನಿಭಾಯಿಸುವ ವಿಚಾರದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಇಲಾಖೆ ಎಂಬ ಗೌರವಕ್ಕೆ ಪಾತ್ರವಾಗಿದೆ. ವಿದ್ಯುತ್ ಪರಿಸ್ಥಿತಿ ನಿರ್ವಹಣೆ, ಆರೋಗ್ಯ ನಿರ್ವಹಣೆಗಾಗಿ ಕಲ್ಲಿದ್ದಲು, ವಿದ್ಯುತ್‌ ಹಾಗೂ ಆರೋಗ್ಯ ಸಚಿವಾಲಯಗಳು ನಂತರದ ಸ್ಥಾನ ಪಡೆದಿವೆ.

ಯಾವ್ಯಾವ ಇಲಾಖೆ ಅತ್ಯುತ್ತಮ?

- ಗ್ರಾಹಕರ ವ್ಯವಹಾರಗಳು, ಕಲ್ಲಿದ್ದಲು, ವಿದ್ಯುತ್‌, ಆರೋಗ್ಯ ಇಲಾಖೆ