ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿರುವ ಡಿ.ಕೆ.ಶಿವಕುಮಾರ್, ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚೆ.. ಬೆಂಗಳೂರು ಮೆಟ್ರೋ ಯೋಜನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದು, ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿದ್ದಾರೆ.

  • ಕೇಂದ್ರ ಸಚಿವರ ಭೇಟಿ, ಅಧಿಕಾರಿಗಳ ಜತೆ ಸಭೆ । ಅಭಿವೃದ್ಧಿ ಯೋಜನೆಗಳ ಚರ್ಚೆ
  •  ಸಿಎಂ ಆದ ನಂತರ ಮೊದಲ ದಿಲ್ಲಿ ಭೇಟಿ । ಇಂದು ಮೋದಿ ಭೇಟಿ ಸಾಧ್ಯತೆ
  •  ರಾಜಧಾನಿ ಸಂಚಾರ

 ನವದೆಹಲಿ ಜೂ.11: ಸಿಎಂ ಆದ ಬಳಿಕ ಮೊದಲ ಬಾರಿ ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌(DK Shivakumar) ಅವರು ಬುಧವಾರ ಕೇಂದ್ರ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಿ, ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಮಹತ್ವದ ಚರ್ಚೆ ನಡೆಸಿದರು. ಜೊತೆಗೆ, ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್‌ ಗಾಂಧಿ(Rahul Gandhi)ಯವರನ್ನು ಭೇಟಿ ಮಾಡಿ, ಸಿಎಂ ಆಗಲು ಸಹಕರಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬುಧವಾರ ಬೆಳಗ್ಗೆ ಸೋನಿಯಾ(Sonia Gandhi) ನಿವಾಸಕ್ಕೆ ಭೇಟಿ ವರಿಷ್ಠ ನಾಯಕರ ಜತೆ ಮಾತುಕತೆ ನಡೆಸಿದರು. ನಂತರ ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ ಲಾಲ್‌ ಖಟ್ಟರ್‌ ಅವರನ್ನು ಭೇಟಿ ಮಾಡಿ, ಬೆಂಗಳೂರಿನ ಮೆಟ್ರೋ(Bengaluru Metro) ಮೂರನೇ ಹಂತದ ಯೋಜನೆಯಡಿ 44.65 ಕಿ.ಮೀ. ಉದ್ದದ ಡಬಲ್‌ ಡೆಕ್ಕರ್‌ ಮೇಲ್ಸೇತುವೆ ನಿರ್ಮಾಣ ಹಾಗೂ ಮೆಟ್ರೋ ಎರಡನೇ ಹಂತದ ಪರಿಷ್ಕೃತ ಯೋಜನಾ ವೆಚ್ಚ ಕುರಿತು ಚರ್ಚೆ ನಡೆಸಿದರು.

ಸಂಜೆ ದೆಹಲಿಯ ಕರ್ನಾಟಕ ಭವನ(Karnataka Bhavan)ದಲ್ಲಿ ಹಿರಿಯ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳ ಜೊತೆ ಸಭೆ ನಡೆಸಿ ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಿದರು. ರಾಜ್ಯದ ಸರ್ವತೋಮುಖ ಪ್ರಗತಿಗೆ ಕೈಜೋಡಿಸಲು, ರಾಜ್ಯದ ಯೋಜನೆಗಳ ಜಾರಿ ವಿಷಯದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸಲು ಕರೆ ನೀಡಿದರು. ಈ ವೇಳೆ, ಡಿಸಿಎಂ ಪರಮೇಶ್ವರ್‌, ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ರಾಜ್ಯದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಇಂದು ನೀತಿ ಆಯೋಗದ ಸಭೆಯಲ್ಲಿ ಭಾಗಿ:

ಪ್ರಧಾನಿ ಮೋದಿ ನೇತೃತ್ವದಲ್ಲಿ ಗುರುವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಡಿಕೆಶಿ ಪಾಲ್ಗೊಳ್ಳಲಿದ್ದು, ರಾಜ್ಯದ ಹಿತಾಸಕ್ತಿಯ ವಿಚಾರಗಳನ್ನು ಸಭೆಯಲ್ಲಿ ಪ್ರಸ್ತಾಪ ಮಾಡಲಿದ್ದಾರೆ.

ಇಂದು ಪ್ರಧಾನಿ ಭೇಟಿ ಸಾಧ್ಯತೆ:

ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಭೇಟಿಗೆ ಸಮಯಾವಕಾಶ ನೀಡಿದ್ದು, ಅವರನ್ನು ಭೇಟಿ ಮಾಡಿ, ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಹಾಗೂ ಸಹಕಾರ ಕೋರಲಿದ್ದಾರೆ. ಇದೇ ವೇಳೆ, ಇತರ ಕೇಂದ್ರ ಸಚಿವರುಗಳ ಭೇಟಿಗೂ ಸಮಯ ಕೇಳಿದ್ದು, ಯಾರೆಲ್ಲಾ ಸಮಯ ನೀಡುತ್ತಾರೋ ಅವರನ್ನು ಭೇಟಿ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ.