ಕೋಝಿಕ್ಕೋಡ್‌ನಲ್ಲಿ ನಡೆದ ಕೇರಳ ಸಾಹಿತ್ಯ ಉತ್ಸವದಲ್ಲಿ ನಟ ಪ್ರಕಾಶ್ ರಾಜ್ ಅವರು ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರನ್ನು ಭೇಟಿಯಾದರು. ಈ ಸಂಭ್ರಮದ ಕ್ಷಣವನ್ನು ಹಂಚಿಕೊಂಡ ಪ್ರಕಾಶ್ ರಾಜ್, 'ಚಂದ್ರನ ಮೇಲಿದ್ದಂತೆ' ಭಾಸವಾಯಿತು ಎಂದು ಬಣ್ಣಿಸಿದ್ದಾರೆ.
ಕೋಯಿಕ್ಕೋಡ್(ಜ.23): ಗುರುವಾರ ಕೋಝಿಕ್ಕೋಡ್‌ನಲ್ಲಿ ನಡೆದ ಕೇರಳ ಸಾಹಿತ್ಯ ಉತ್ಸವದಲ್ಲಿ (ಕೆಎಲ್‌ಎಫ್) ನಟ ಪ್ರಕಾಶ್ ರಾಜ್ ಅವರು ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರನ್ನು ಭೇಟಿಯಾದರು. ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಸುನೀತಾ ವಿಲಿಯಮ್ಸ್ ಅವರನ್ನು ಭೇಟಿಯಾದ ಕ್ಷಣಗಳನ್ನು ಹಂಚಿಕೊಂಡ ಪ್ರಕಾಶ್ ರಾಜ್, ಫೋಟೋಗಳನ್ನು ಪೋಸ್ಟ್ ಮಾಡಿ ವಿಲಿಯಮ್ಸ್ ಅವರೊಂದಿಗಿನ ಮಾತುಕತೆಯನ್ನು ತಿಳಿಸಿದರು.
'ಸಂಭ್ರಮಿಸಬೇಕಾದ ಎಂಥಾ ಅದ್ಬುಥ ಕ್ಷಣ, ನಮ್ಮ ಕಾಲದ ಧೈರ್ಯಶಾಲಿ ಮಹಿಳೆಯನ್ನು ಭೇಟಿಯಾಗಿ ಅವರೊಂದಿಗೆ ಸಂವಾದ ನಡೆಸುವುದು ಅದ್ಭುತ. ಕೆಎಲ್‌ಎಫ್‌ನಲ್ಲಿ ಸುನೀತಾ ವಿಲಿಯಮ್ಸ್. ನಾನೇ ಚಂದ್ರನ ಮೇಲಿದ್ದಂತ ಕ್ಷಣಗಳನ್ನು ನಾನು ನಿಮ್ಮೊಂದಿಗೆ ಶೇರ್ ಮಾಡಿಕೊಳ್ಳುತ್ತಿದ್ದೇನೆ' ಎಂದು ನಟ ಬರೆದುಕೊಂಡಿದ್ದಾರೆ.
ಫೋಟೋಗಳಲ್ಲ ಪ್ರಕಾಶ್ ರಾಜ್ ಹಾಗೂ ಸುನೀತಾ ವಿಲಿಯಮ್ಸ್ ಜೊತೆಯಲ್ಲಿಯೇ ಪೋಸ್ ನೀಡಿದ್ದು, ಅದರೊಂದಿಗೆ ವಿಲಿಯಮ್ಸ್‌ಗೆ ತಮ್ಮ ಫೋನ್‌ನಲ್ಲಿ ಪ್ರಕಾಶ್ ರಾಜ್ ಏನನ್ನೋ ತೋರಿಸುತ್ತಿರುವುದು ಕಂಡಿದೆ.
ಸಾಹಿತ್ಯೋತ್ಸವದಲ್ಲಿ ಇದ್ದ ಸಭಿಕರನ್ನುದ್ದೇಶಿಸಿ ಮಾತನಾಡಿದ ಸುನೀತಾ ವಿಲಿಯಮ್ಸ್, ಕಲ್ಪನೆಗಳನ್ನು ವಾಸ್ತವಕ್ಕೆ ತಿರುಗಿಸುವಲ್ಲಿ ತಂತ್ರಜ್ಞಾನದ ಪಾತ್ರದ ಬಗ್ಗೆ ಮಾತನಾಡಿದರು. "ಕನಸುಗಳು ಅವರ ಕಲ್ಪನೆಗಳಷ್ಟೇ ದೊಡ್ಡವು, ಮತ್ತು ವಿಶೇಷವಾಗಿ ಇಂದಿನ ಈ ಸಮಯದಲ್ಲಿ. ವಿಷಯಗಳು ತುಂಬಾ ವೇಗವಾಗಿ ಬದಲಾಗುತ್ತಿವೆ ಮತ್ತು ಜನರು ಆಲೋಚನೆಗಳೊಂದಿಗೆ ಬರುತ್ತಿದ್ದಾರೆ ಮತ್ತು ಅವುಗಳನ್ನು ನಿಜವಾಗಿ ನನಸಾಗಿಸುತ್ತಿದ್ದಾರೆ. ಹಿಂದೆ, ತಂತ್ರಜ್ಞಾನವು ಆವಿಷ್ಕಾರಗಳಿಗೆ ಸಂಭಾವ್ಯವಾಗಿ ಅಡ್ಡಿಯಾಗುತ್ತಿತ್ತು, ಮತ್ತು ಈಗ ತಂತ್ರಜ್ಞಾನವು ಜನರು ಹೊಂದಿರುವ ಆವಿಷ್ಕಾರಗಳಿಗೆ ಧಾವಿಸುತ್ತಿದೆ. ಕಲ್ಪನೆಯೇ ನಿಜವಾಗಿಯೂ ಏಕೈಕ ಮಿತಿಯಾಗಿದೆ" ಎಂದು ಹೇಳಿದ್ದಾರೆ.
ತಮ್ಮ ಸಾಂಸ್ಕೃತಿಕ ಸಂಪರ್ಕಗಳ ಬಗ್ಗೆಯೂ ಮಾತನಾಡಿದ ಅವರು, "ಎರಡೂ ದೇಶಗಳಲ್ಲಿ ಇದು ಬಹಳ ಅದ್ಭುತವಾಗಿದೆ. ಭಾರತದಲ್ಲಿ ಎಲ್ಲರೊಂದಿಗೂ ಇರುವುದಕ್ಕೆ ನನಗೆ ನಿಜವಾಗಿಯೂ ಸಂತೋಷ ಮತ್ತು ಗೌರವವಿದೆ" ಎಂದು ಹೇಳಿದರು.
ಬಾಹ್ಯಾಕಾಶ ಮಹತ್ವಾಕಾಂಕ್ಷೆಯ ದೇಶ ಭಾರತ
ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳ ಕುರಿತು ಮಾತನಾಡುತ್ತಾ, ದೇಶದ ಪ್ರಗತಿಯಿಂದ ತಾನು ಉತ್ಸಾಹಿತಳಾಗಿದ್ದೇನೆ ಎಂದು ವಿಲಿಯಮ್ಸ್ ಹೇಳಿದರು. "ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ನಾನು ಉತ್ಸುಕನಾಗಿದ್ದೇನೆ. ಇಲ್ಲಿನ ಯಾವುದೇ ಆಲೋಚನೆಗಳು ವಾಸ್ತವವಾಗುತ್ತಿವೆ. ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಂತೆ, ಹಾಗೆಯೇ ತಮ್ಮದೇ ಆದ ಕಾರ್ಯಕ್ರಮದೊಂದಿಗೆ, ಸ್ವಂತ ಕಾಲಿನ ಮೇಲೆ ನಿಂತಂತೆ, ಅವರು ಬಹಳ ಬೇಗ ಬಾಹ್ಯಾಕಾಶಕ್ಕೆ ಹೋಗಲಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.
ಭಾರತದ ಮೊದಲ ಯುನೆಸ್ಕೋ ಸಾಹಿತ್ಯ ನಗರಿ ಕೋಝಿಕೋಡ್‌ನಲ್ಲಿ ವಾರ್ಷಿಕವಾಗಿ ಆಯೋಜಿಸಲಾಗಿದ್ದ ಕೇರಳ ಸಾಹಿತ್ಯ ಉತ್ಸವದ ಹಿಂದಿನ ಆವೃತ್ತಿಯು 6.5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿತು ಮತ್ತು 600 ಕ್ಕೂ ಹೆಚ್ಚು ಭಾಷಣಕಾರರನ್ನು ಒಳಗೊಂಡಿತ್ತು. ಸುನಿತಾ ವಿಲಿಯಮ್ಸ್ ಅವರು ಇತ್ತೀಚೆಗೆ ನಾಸಾದಿಂದ ನಿವೃತ್ತಿಯಾಗಿದ್ದು, ತಮ್ಮ27 ವರ್ಷಗಳ ವೃತ್ತಿ ಬದುಕಿನಲ್ಲಿ, ಮೂರು ಬಾರಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಪಯಣಿಸಿದ್ದಾರೆ.


