ಇನ್ನೂ ಮುಗಿದಿಲ್ಲ ಕಲ್ಲಿದ್ದಲು ಕೊರತೆ: 4 ಘಟಕ ಬಂದ್‌!

* ವಿದ್ಯುತ್‌ ಉತ್ಪಾದನೆ ವ್ಯತ್ಯಯ

* ಇನ್ನೂ ಮುಗಿದಿಲ್ಲ ಕಲ್ಲಿದ್ದಲು ಕೊರತೆ: 4 ಘಟಕ ಬಂದ್‌

* ಕೆಪಿಟಿಸಿಎಲ್‌ನಿಂದ ಅಧಿಕೃತ ಮಾಹಿತಿ

Coal shortage crisis not ended yet pod

ಬೆಂಗಳೂರು(ಏ.22): ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಿಂದ ಶಾಖೋತ್ಪನ್ನ ವಿದ್ಯುತ್‌ ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆ ಸ್ಥಗಿತ ಮುಂದುವರೆದಿದೆ. ಕೆಪಿಟಿಸಿಎಲ್‌ ಅಧಿಕೃತ ಮಾಹಿತಿ ಪ್ರಕಾರ ಬುಧವಾರ ಆರ್‌ಟಿಪಿಎಸ್‌ನ 6 ಹಾಗೂ 7ನೇ ಘಟಕ ಸೇರಿ 4 ಘಟಕಗಳು ಕಲ್ಲಿದ್ದಲು ಕೊರತೆಯಿಂದಾಗಿಯೇ ಸ್ಥಗಿತಗೊಂಡಿದೆ. ಪರಿಣಾಮ ವಿದ್ಯುತ್‌ ಉತ್ಪಾದನೆಯಲ್ಲಿ ವ್ಯತ್ಯಯ ಮುಂದುವರೆದಿದೆ.

ಏ.16ರಿಂದ ರಾಜ್ಯದಲ್ಲಿ ಕಲ್ಲಿದ್ದಲಿಗೆ ತೀವ್ರ ಅಭಾವ ಸೃಷ್ಟಿಯಾಗಿದ್ದು ಕಲ್ಲಿದ್ದಲು ಕೊರತೆಯಿಂದ ಬರೋಬ್ಬರಿ ಆರು ಶಾಖೋತ್ಪನ್ನ ವಿದ್ಯುತ್‌ ಘಟಕಗಳು ಸ್ಥಗಿತಗೊಂಡಿದ್ದವು. ಇದೀಗ ಬುಧವಾರ ಪೂರೈಕೆಯ ತುಸು ಹೆಚ್ಚಾಗಿದ್ದರೂ ಕೊರತೆ ಮುಂದುವರೆದಿದೆ. ಪರಿಣಾಮ ನಾಲ್ಕು ಘಟಕಗಳು ಸ್ಥಗಿತಗೊಂಡಿದ್ದವು.

ರಾಯಚೂರಿನ ಶಾಖೋತ್ಪನ್ನ ವಿದ್ಯುತ್‌ ಘಟಕದ (ಆರ್‌ಟಿಪಿಎಸ್‌) 6 ಹಾಗೂ 7ನೇ ಘಟಕ ಕಲ್ಲಿದ್ದಲು ಕೊರತೆ ಕಾರಣಕ್ಕಾಗಿಯೇ ಬುಧವಾರ ಸ್ಥಗಿತಗೊಳಿಸಲಾಗಿದೆ. ಇನ್ನು ಉಡುಪಿಯ ಯುಪಿಸಿಎಲ್‌ ಘಟಕ ಕಲ್ಲಿದ್ದಲು ಕೊರತೆಯಿಂದ ಏ.16ರಿಂದ (ಏ.20ರಂದು ಸೇರಿ) ಸ್ಥಗಿತ ಸ್ಥಿತಿಯಲ್ಲೇ ಮುಂದುವರೆದಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದ್ದಾರೆ.

ಪರಿಣಾಮ ಬೇಸಿಗೆ ನಡುವೆಯೇ ರಾಜ್ಯದಲ್ಲಿ ಸರಾಸರಿ ವಿದ್ಯುತ್‌ ಪೂರೈಕೆಗಿಂತಲೂ ಕಡಿಮೆ ವಿದ್ಯುತ್‌ ಬುಧವಾರ ಪೂರೈಕೆಯಾಗಿದೆ. ಸರಾಸರಿ 13,500 ಮೆ.ವ್ಯಾಟ್‌ನಿಂದ 14 ಸಾವಿರ ಮೆ.ವ್ಯಾಟ್‌ ವಿದ್ಯುತ್‌ ಬಳಕೆಯಾಗುವ ರಾಜ್ಯದಲ್ಲಿ ಗುರುವಾರ ಗರಿಷ್ಠ 10,484 ಮೆ.ವ್ಯಾಟ್‌, ಕನಿಷ್ಠ 6,565 ಮೆ.ವ್ಯಾಟ್‌ ವಿದ್ಯುತ್‌ ಪೂರೈಕೆಯಾಗಿದೆ.

ಇನ್ನು ರಾಜ್ಯದಲ್ಲಿ ಕಲ್ಲಿದ್ದಲಿನಿಂದ 6,220 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯವಿರುವ 15 ಘಟಕಗಳಲ್ಲಿ ಏಳು ಘಟಕಗಳು ಮಾತ್ರ (4 ಘಟಕ ಮೊದಲೇ ಸ್ಥಗಿತಗೊಂಡಿತ್ತು) ಬುಧವಾರ ಕಾರ್ಯನಿರ್ವಹಿಸಿವೆ. ಇವುಗಳಿಂದ ಕೇವಲ 1,774 (ಗರಿಷ್ಠ) ವಿದ್ಯುತ್‌ ಪೂರೈಕೆಯಾಗಿದೆ.

Latest Videos
Follow Us:
Download App:
  • android
  • ios