ನವದೆಹಲಿ(ಆ.29): ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆ ಹೀಗೆ ಎಲ್ಲಾ ಚುನಾವಣೆಗಳಿಗೂ ಒಂದೇ ಮತದಾರರ ಪಟ್ಟಿ ತಯಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆ ಇರಿಸಿದೆ. ಇದು ಮುಂದೆ ದೇಶದಲ್ಲಿ ಒಂದೇ ಚುನಾವಣೆ ನೀತಿ ಜಾರಿಯಾಗಬಹುದಾ ಎಂಬ ಅನುಮಾನ ಮೂಡಿಸಿದೆ. 

‘ಒಂದು ದೇಶ ಒಂದು ಚುನಾವಣೆ’ : ಜಾರಿಯಾದಲ್ಲಿ ಹಲವು ಸರ್ಕಾರಗಳ ಅಧಿಕಾರವಧಿ ಕಡಿತ

ಆಂಗ್ಲ ಪತ್ರಿಕೆಯೊಂದು ಸಾಮಾನ್ಯವಾದ ಮತದಾರರ ಪಟ್ಟಿ ರೂಪಿಸುವ ನಿಟ್ಟಿನಲ್ಲಿ ಪ್ರಧಾನಿ ಕಾರ್ಯಾಲಯ ಆಗಸ್ಟ್ 13ರಂದು ಸಭೆ ನಡೆಸಿ ಚರ್ಚೆ ಮಾಡಿದೆ.  ಈ ಸಭೆಯಲ್ಲಿ ಸಂವಿಧಾನದ 243K ಮತ್ತು 243ZA ವಿಧಿಯನ್ನು ತಿದ್ದುಪಡಿ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದು ವರದಿ ಮಾಡಿದೆ.

ಪ್ರಧಾನಿ ಕಾರ್ಯಾಲಯದ ಮುಖ್ಯಕಾರ್ಯದರ್ಶಿ ಪಿ.ಕೆ. ಮಿಶ್ರಾ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ದೇಶಾದ್ಯಂತ ಎಲ್ಲಾ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿ ಮಾಡಲು ಅನುವಾಗುವಂತೆ ಆ ಎರಡು ವಿಧಿಗಳನ್ನು ತಿದ್ದುಪಡಿ ಮಾಡಲು ಚರ್ಚೆ ನಡೆದಿದೆ. ಜೊತೆಗೆ ಚುನಾವಣಾ ಆಯೋಗ ತಯಾರಿಸುವ ಮತದಾರರ ಪಟ್ಟಿಯನ್ನು ಸ್ಥಳೀಯ ಸಂಸ್ಥೆ ಚುನಾವಣೆಗಳಿಗೂ ಅನ್ವಯ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಕೇಳಿಕೊಳ್ಳುವುದರ ಬಗ್ಗೆಯೂ ಈ ವೇಳೆ ಮಾತುಕತೆಯಾಗಿದೆ ಎಂದಿದ್ದಾರೆ.

ಸದ್ಯಕ್ಕೀಗ ದೇಶಾದ್ಯಂತ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ವಿಭಿನ್ನ ಮತದಾರರ ಪಟ್ಟಿ ಬಳಕೆಯಾಗುತ್ತಿದೆ.  ವಿಧಾನಸಭಾ ಚುನಾವಣೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿ ಬಳಕೆಯಾದರೆ, ಪಂಚಾಯಿತಿ, ನಗರಸಭೆ ಮೊದಲಾದ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ರಾಜ್ಯ ಚುನಾವಣಾ ಆಯೋಗ ಪ್ರತ್ಯೇಕವಾಗಿ ತಯಾರಿಸುವ ಪಟ್ಟಿಯೇ ಮುಖ್ಯವಾಗಿರುತ್ತದೆ. ಈ ಪಟ್ಟಿಗೆ ಕೇಂದ್ರ ಚುನಾವಣಾ ಆಯೋಗದ ನಿಯಂತ್ರಣ ಇರುವುದಿಲ್ಲ.

ಒಂದು ದೇಶ - ಒಂದು ಚುನಾವಣೆ : ಪ್ರಧಾನಿ ಮೋದಿ ಮಹತ್ವದ ನಿರ್ಧಾರ

ಇನ್ನು ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಕೇಂದ್ರ ಆಯೋಗದ ಮತದಾರರ ಪಟ್ಟಿಯನ್ನೇ ಸ್ಥಳೀಯ ಸಂಸ್ಥೆಗಳಿಗೂ ಬಳಕೆ ಮಾಡಿಕೊಳ್ಳುತ್ತಿವೆ. ಆದರೆ  ಉತ್ತರ ಪ್ರದೇಶ, ಕೇರಳ, ಮಧ್ಯ ಪ್ರದೇಶ, ಉತ್ತರಾಖಂಡ್ ಒಡಿಶಾ ಸೇರಿ 11 ರಾಜ್ಯಗಳು ಮಾತ್ರ ಪ್ರತ್ಯೇಕ ಮತದಾರರ ಪಟ್ಟಿ ತಯಾರಿಸುತ್ತವೆ.

ಗ ಎಲ್ಲಾ ರಾಜ್ಯಗಳಿಗೂ ಸಾಮಾನ್ಯ ಮತದಾರರ ಪಟ್ಟಿ ಇರಬೇಕೆನ್ನುವ ಕಾನೂನು ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಮೂಲಕ ಕೇಂದ್ರ ಸರ್ಕಾರ ಒಂದು ದೇಶ ಒಂದು ಚುನಾವಣೆ ಜಾರಿಗೊಳಿಸಲು ಮುಂದಾಗಿದೆಯಾ ಎಂಬುವುದೂ ಅನುಮಾನ ಮೂಡಿಸಿದೆ. ಇನ್ನು ಒಂದು ದೇಶ ಒಂದು ಚುನಾವಣೆಗೆ ಬಗ್ಗೆ ಪಿಎಂ ನರೇಂದ್ರ ಮೋದಿ ಅಧಿಕಾರಕ್ಕೇರುವ ಆರಂಭದಲ್ಲೇ ಮಾತನಾಡಿದ್ದರು.