ಬೆಂಗಳೂರು [ಸೆ.05]:  ದೇಶದಲ್ಲಿ ಚರ್ಚೆ ನಡೆಯುತ್ತಿರುವ ‘ಒಂದು ದೇಶ-ಒಂದು ಚುನಾವಣೆ’ ಪರಿಕಲ್ಪನೆಗೆ ಚುನಾವಣಾ ಆಯೋಗದಿಂದ ಯಾವುದೇ ರೀತಿಯಲ್ಲೂ ವಿರೋಧ ಇಲ್ಲ. ಆದರೆ, ರಾಜಕೀಯ ಪಕ್ಷಗಳಿಂದ ಒಮ್ಮತದ ತೀರ್ಮಾನ ಅತ್ಯಗತ್ಯ ಜೊತೆಗೆ ಅಗತ್ಯ ತಿದ್ದುಪಡಿಯಾಗಬೇಕು ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಸುನೀಲ್‌ ಅರೋರ ಅಭಿಪ್ರಾಯಪಟ್ಟಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಕಳೆದ ಮೂರು ದಿನಗಳಿಂದ ನಡೆದ ಜಾಗತಿಕ ಚುನಾವಣಾ ಸಂಸ್ಥೆಗಳ ಒಕ್ಕೂಟದ (ಎ-ವೆಬ್‌) ನಾಲ್ಕನೇ ಸಾಮಾನ್ಯ ಸಭೆ ಮತ್ತು ಅಂತಾರಾಷ್ಟ್ರೀಯ ಸಮಾವೇಶದ ಸಮಾರೋಪ ಸಮಾರಂಭ ಬುಧವಾರ ನಡೆಯಿತು. ಸಮಾರಂಭದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ದೇಶ-ಒಂದು ಚುನಾವಣೆ ವ್ಯವಸ್ಥೆ ಅನುಷ್ಠಾನವಾಗಬೇಕಾದರೆ ರಾಷ್ಟ್ರದಲ್ಲಿನ ಹಲವು ರಾಜ್ಯಗಳಲ್ಲಿ ಸರ್ಕಾರದ ಅವಧಿ ಬೇಗ ಮುಗಿಸಬೇಕಾಗುತ್ತದೆ. ಇದಕ್ಕೆ ಆ ರಾಜ್ಯಗಳ ತೀರ್ಮಾನವು ಮುಖ್ಯವಾಗಿರುತ್ತದೆ. ಸರ್ಕಾರದ ಅವಧಿಯು ಒಂದು ಅಥವಾ ಎರಡು ವರ್ಷ ಕಡಿತವಾಗಲಿದೆ ಎಂದರು.

ಕರ್ನಾಟಕದ ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರಭಾವಶಾಲಿಯಾಗಿರುವ ಸಾಮಾಜಿಕ ಜಾಲತಾಣಗಳನ್ನು ಚುನಾವಣಾ ಜಾಗೃತಿ ಸೇರಿದಂತೆ ಇತರೆ ವಿಚಾರಗಳಿಗಾಗಿ ಸದ್ಬಳಕೆ ಮಾಡಿಕೊಂಡರೆ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಲಿದೆ. ಇದೇ ವೇಳೆ ಸಾಮಾಜಿಕ ಜಾಲತಾಣದ ದುರ್ಬಳಕೆ ನಿಯಂತ್ರಿಸಲು ಕಾರ್ಯೋನ್ಮುಖವಾಗಬೇಕಿದೆ. ಸಾಮಾಜಿಕ ಮಾಧ್ಯಮಗಳ ಸದ್ಬಳಕೆ ಕುರಿತು ಸಮಾವೇಶದಲ್ಲಿ ಗಂಭೀರವಾಗಿ ಸಮಾಲೋಚನೆ ನಡೆಸಲಾಗಿದೆ. ಐಟಿ ಕುರಿತು ಸಂಸತ್‌ನ ಸ್ಥಾಯಿ ಸಮಿತಿಯು ನೀಡುವ ಶಿಫಾರಸುಗಳ ಸಾಧಕ-ಬಾಧಕ ಅಧ್ಯಯನ ನಡೆಸಿ ಅಳವಡಿಸಿಕೊಳ್ಳಲು ಆಯೋಗ ಸಿದ್ಧವಿದೆ ಎಂದು ತಿಳಿಸಿದರು.

ಅಸ್ಸಾಂನಲ್ಲಿ 19 ಲಕ್ಷ ಮಂದಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪಟ್ಟಿಯಿಂದ ಹೊರಗಿಟ್ಟಿರುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸುನೀಲ್‌ ಅರೋರ, ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ಅಂಕಿ-ಅಂಶಗಳನ್ನು ಬಿಡುಗಡೆಗೊಳಿಸಿದೆ. ಆದರೆ, ವಿದೇಶಿಯರ ನ್ಯಾಯಾಧೀಕರಣದಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿರುವ ಕಾರಣ ಅಲ್ಲಿ ತೀರ್ಮಾನವಾಗುವವರೆಗೆ ಅವರೆಲ್ಲರನ್ನು ಮತದಾರರು ಎಂದು ಪರಿಗಣಿಸಲಾಗುವುದು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಎ-ವೆಬ್‌ನ ನೂತನ ಉಪಾಧ್ಯಕ್ಷ ಗ್ಲೆನ್‌ ವುಮಾ ಮಾಶಿನಿನಿ, ಪ್ರಧಾನ ಕಾರ್ಯದರ್ಶಿ ಜೋಂಗ್‌ಯುನ್‌ ಚೋ, ಭಾರತ ಚುನಾವಣಾ ಆಯೋಗದ ಆಯುಕ್ತರಾದ ಅಶೋಕ್‌ ಲಾವಸಾ, ಉಮೇಶ್‌ ಸಿನ್ಹಾ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಇತರರು ಉಪಸ್ಥಿತರಿದ್ದರು.