ಮಣಿಪುರಕ್ಕೆ ಬೆಂಕಿ ಬಿದ್ದಾಗ ಸಂಸತ್ತಿನಲ್ಲಿ ಮೋದಿ ಹಾಸ್ಯ, ಇದು ಪ್ರಧಾನಿಗೆ ಶೋಭೆಯಲ್ಲ:ರಾಹುಲ್ ಕಿಡಿ
ಲೋಕಸಭೆಯಲ್ಲಿ ಮೋದಿಯಿಂದ 2 ತಾಸು ತಮಾಷೆ, ಚಟಾಕಿ, ಗೇಲಿ. ಆದರೆ ಮಣಿಪುರ ಹಿಂಸೆ ಬಗ್ಗೆ ಕೇವಲ 2 ನಿಮಿಷ ಮಾತು. ರಾಜಕೀಯ ಭಾಷಣ ಹೊರಗೆ ಮಾಡಿ, ಲೋಕಸಭೆಯಲ್ಲಲ್ಲ. ಮಣಿಪುರ ಹೊತ್ತಿ ಉರಿವಾಗ ಇಂಥ ಮಾತು ಪ್ರಧಾನಿಗೆ ಶೋಭೆ ತರಲ್ಲ: ರಾಹುಲ್ ಗಾಂಧಿ ವಾಗ್ದಾಳಿ.

ನವದೆಹಲಿ (ಆ.12): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ… ಗಾಂಧಿ, ‘ಜನಾಂಗೀಯ ಸಂಘರ್ಷದಿಂದ ಮಣಿಪುರ ತಿಂಗಳುಗಟ್ಟಲೆ ಹೊತ್ತಿ ಉರಿಯುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ನಗುತ್ತ, ಹಾಸ್ಯ ಚಟಾಕಿ ಹಾರಿಸುತ್ತ ಹಾಗೂ ವಿಪಕ್ಷಗಳ ಬಗ್ಗೆ ಮನಬಂದಂತೆ ಗೇಲಿ ಮಾಡುತ್ತ ಉತ್ತರ ನೀಡಿದ್ದಾರೆ. ಇಂಥ ವರ್ತನೆ ಭಾರತದ ಪ್ರಧಾನಿಗೆ ಶೋಭೆ ತರುವುದಿಲ್ಲ’ ಎಂದಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಅವರು, ಲೋಕಸಭೆಯಲ್ಲಿ ಪ್ರತಿಪಕ್ಷಗಳು ತಂದಿದ್ದ ಅವಿಶ್ವಾಸ ನಿರ್ಣಯಕ್ಕೆ ಮೋದಿ ನೀಡಿದ ಉತ್ತರದ ವೈಖರಿಯನ್ನು ಪ್ರಶ್ನಿಸಿದರು.
ವಿಪಕ್ಷ ನಾಯಕರನ್ನೇ ಯಾಕೆ ಸೈಡ್‌ಲೈನ್ ಮಾಡಿದ್ದೀರಿ, ಅಧೀರ್ ಬಾಬು ಪರ ನಮ್ಮ ಅನುಕಂಪವಿದೆ: ನರೇಂದ್ರ ಮೋದಿ
‘ಅವಿಶ್ವಾಸ ನಿರ್ಣಯದ ಚರ್ಚೆಯು ಮಣಿಪುರ ಹಿಂಸಾಚಾರವನ್ನು ಉದ್ದೇಶಿಸಿ ನಡೆದಿತ್ತು. ಅದರೆ ಮೋದಿ ಅವರು ಅವರು ತಮ್ಮ 2 ಗಂಟೆಗಳ ಭಾಷಣದಲ್ಲಿ ಮಣಿಪುರಕ್ಕೆ ಕೇವಲ 2 ನಿಮಿಷಗಳನ್ನು ಮೀಸಲಿಟ್ಟರು. ನಾನು ನಿನ್ನೆ ಎರಡು ಗಂಟೆಗಳ ಕಾಲ ಪ್ರಧಾನಿ ನಗುವುದು, ತಮಾಷೆ ಮಾಡುವುದು, ಘೋಷಣೆ ಕೂಗುವುದನ್ನು ನೋಡಿದೆ. ಆದರೆ ಮಣಿಪುರ ರಾಜ್ಯವು ಹೊತ್ತಿ ಉರಿಯುತ್ತಿದೆ ಎಂಬುದನ್ನು ಪ್ರಧಾನಿ ಮರೆತಂತಿದೆ’ ಎಂದರು.
‘ಸಂಸತ್ತಿನ ಮಧ್ಯದಲ್ಲಿ ಕುಳಿತಿರುವ ಪ್ರಧಾನಿ ನಾಚಿಕೆಯಿಲ್ಲದೆ ನಗುತ್ತಿದ್ದರು. 2024ರಲ್ಲಿ ಮತ್ತೆ ಬಿಜೆಪಿಗೇ ಅಧಿಕಾರ ಎಂದು ಹೇಳಿದರು. ಇಲ್ಲಿ ಮುಖ್ಯ ವಿಷಯವು 2024ರ ಚುನಾವಣೆ ಆಗಿರಲಿಲ್ಲ. ಮಣಿಪುರ ಸಮಸ್ಯೆ ಆಗಿತ್ತು. ಚುನಾವಣಾ ಭಾಷಣವನ್ನು ಬೇಕೆಂದರೆ ಪ್ರಧಾನಿಗಳು ಬಹಿರಂಗ ಸಭೆಯಲ್ಲಿ ಮಾಡಲಿ. ಆದರೆ ಮಣಿಪುರದ ಬಗ್ಗೆ ಸದನದಲ್ಲಿ ಕೇವಲ 2 ನಿಮಿಷ ಮಾತನಾಡಿದರು. ಮಣಿಪುರ ಸಮಸ್ಯೆ ಕಾಂಗ್ರೆಸ್‌ನದ್ದಲ್ಲ ಅಥವಾ ವಿಪಕ್ಷದ್ದಲ್ಲ. ಇದು ದೇಶಕ್ಕೆ ಸಂಬಂಧಿಸಿದ ಸಮಸ್ಯೆ. ಹಿಂಸೆ ಇನ್ನೂ ಏಕೆ ನಿಂತಿಲ್ಲ ಎಂಬ ಬಗ್ಗೆ ಮೋದಿ ಮಾಹಿತಿ ನೀಡಬೇಕಿತ್ತು’ ಎಂದರು.
ವಿಪಕ್ಷಗಳ ಅವಿಶ್ವಾಸ ಬಿಜೆಪಿಗೆ ಶುಭ ಸಂಕೇತ, 2019ರ ಘಟನೆ ನೆನೆಪಿಸಿದ ಪ್ರಧಾನಿ ಮೋದಿ!
‘ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಂದಿದ್ದಾರೆ ಎಂಬ ನನ್ನ ಹೇಳಿಕೆಗಳು ಪೊಳ್ಳು ಮಾತುಗಳಲ್ಲ’ ಎಂದ ರಾಹುಲ್, ‘ಮಣಿಪುರದಲ್ಲಿ ಬಿಜೆಪಿಯಿಂದ ಹಿಂದುಸ್ತಾನದ ಕೊಲೆ ಆಗಿದೆ’ ಎಂದು ಪುನರುಚ್ಚರಿಸಿದರು.
‘ಪ್ರಧಾನಿಯವರು ಮಣಿಪುರವನ್ನು ಸುಡಬೇಕೆಂದು ಬಯಸುತ್ತಾರೆ ಮತ್ತು ಬೆಂಕಿ ಆರಬಾರದು ಎನ್ನುತ್ತಾರೆ. ಸೇನೆಯು 2-3 ದಿನಗಳಲ್ಲಿ ಶಾಂತಿಯನ್ನು ತರಬಹುದು. ಆದರೆ ಸರ್ಕಾರ ಅದನ್ನು ನಿಯೋಜಿಸುತ್ತಿಲ್ಲ’ ಎಂದು ಆರೋಪಿಸಿದರು.