ವಿಪಕ್ಷ ನಾಯಕರನ್ನೇ ಯಾಕೆ ಸೈಡ್‌ಲೈನ್ ಮಾಡಿದ್ದೀರಿ, ಅಧೀರ್ ಬಾಬು ಪರ ನಮ್ಮ ಅನುಕಂಪವಿದೆ: ನರೇಂದ್ರ ಮೋದಿ
ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕರಾದ ಅಧೀರ್ ರಂಜನ್ ಚೌಧರಿಗೆ ಮಾಡಿದ ಅವಮಾನದ ಬಗ್ಗೆ ಕಾಂಗ್ರೆಸ್‌ಗೆ ಪ್ರಶ್ನೆ ಮಾಡಿದರು. ಅವರ ಕುರಿತಾಗಿ ನಮಗೆ ಅನುಕಂಪವಿದೆ ಎಂದು ಹೇಳಿದರು.
ನವದೆಹಲಿ (ಆ.10): ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಚರ್ಚೆಯ ವೇಳೆ ದೇಶದ ಅತಿದೊಡ್ಡ ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷ ತನ್ನ ನಾಯಕನಿಗೆ ಮಾತನಾಡುವ ಅವಕಾಶ ನೀಡಿಲ್ಲ. ವಿರೋಧ ಪಕ್ಷದ ನಾಯಕರಾದ ಅಧೀರ್ ರಂಜನ್ ಚೌಧರಿ ಅವರಿಗೆ ಮಾತನಾಡಲು ಅವಕಾಶ ನೀಡದೇ ಇದ್ದಿದ್ದಕ್ಕೆ ಮೋದಿ ವಿಪಕ್ಷವನ್ನು ಅದರಲ್ಲೂ ಕಾಂಗ್ರೆಸ್ ಪಕ್ಷದ ಕುರಿತಾಗಿ ವ್ಯಂಗ್ಯವಾಡಿದರು.ಈ ಅವಿಶ್ವಾಸ ಗೊತ್ತುವಳಿ ಚರ್ಚೆಯ ವೇಳೆ ನನಗೆ ಕೆಲವು ಸಾಕಷ್ಟು ವಿಚಿತ್ರಗಳು ಕಾಣಿಸಿದವು. ಇದಕ್ಕೂ ಮೊದಲು ನಾನು ಕೇಳಿರಲಿಲ್ಲ, ನೋಡಿರಲಿಲ್ಲ ಹಾಗೂ ಅದರ ಕಲ್ಪನೆ ಕೂಡ ಮಾಡಿರಲಿಲ್ಲ. ದೇಶದ ದೊಡ್ಡ ವಿಪಕ್ಷದ ನಾಯಕರಾದ ವ್ಯಕ್ತಿಗೆ ಗೊತ್ತುವಳಿ ಮೇಲೆ ಮಾತನಾಡುವ ಲಿಸ್ಟ್‌ನಲ್ಲಿಯೇ ಇದ್ದಿರಲಿಲ್ಲ. ಬೇಕಾದರೆ ನೀವು ಹಿಂದಿನ ಉದಾಹರಣೆಯನ್ನೇ ನೋಡಿ, 1999ರಲ್ಲಿ ವಾಜಪೇಯಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಬಂದಿತ್ತು. ಅಂದು ಇದರ ನೇತೃತ್ವ ವಹಿಸಿದ್ದು ವಿಪಕ್ಷ ನಾಯಕ ಶರದ್ ಪವಾರ್. ಚರ್ಚೆಗೂ ಅವರೇ ನೇತೃತ್ವ ವಹಿಸಿದ್ದರು.
2003ರಲ್ಲಿ ಮತ್ತೊಮ್ಮೆ ವಾಜಪೇಯಿ ಸರ್ಕಾರದ ವಿರುದ್ಧ ಇದೇ ಗೊತ್ತುವಳಿ ಬಂದಿತ್ತು. ಸೋನಿಯಾ ಗಾಂದಿ ವಿಪಕ್ಷದ ನಾಯಕರಾಗಿದ್ದರು. ಅವರೇ ನೇತೃತ್ವ ವಹಿಸಿದ್ದರು. ಅವಿಶ್ವಾಸ ಪ್ರಸ್ತಾಪವನ್ನು ಅವರು ಮುನ್ನಡೆಸಿದ್ದರು. 2019ರಲ್ಲಿ ಖರ್ಗೆ ವಿಪಕ್ಷ ನಾಯಕರಾಗಿದ್ದರು. ಅವರೇ ಚರ್ಚೆ ಮುನ್ನಡೆಸಿದ್ದರು. ಆದರೆ, ಈ ಬಾರಿ ಏನಾಗಿದೆ. ಅಧೀರ್ ಬಾಬು ಅವರನ್ನು ಏನು ಮಾಡಿದ್ದಾರೆ ನೋಡಿ? ಅವರ ಪಕ್ಷವೇ ಅವರಿಗೆ ಲೋಕಸಭೆಯಲ್ಲಿ ಮಾತನಾಡುವ ಅವಕಾಶ ನೀಡಿರಲಿಲ್ಲ.ಇದರ ಬಗ್ಗೆ ಬುಧವಾರ ಅಮಿತ್ ಶಾ, ಬಹಳ ಜವಾಬ್ದಾರಿಯಿಂದ ಮಾತನಾಡಿದ್ದರು. ವಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ನೀಡದೇ ಇರುವುದು ಸರಿ ಕಾಣುತ್ತಿಲ್ಲ ಎಂದಿದ್ದರು. ಅದರೊಂದಿಗೆ ಸ್ಪೀಕರ್ ನೀವು ಕೂಡ ಉದಾರತೆ ತೋರಿದ್ದೀರಿ. ನೀವು ಅವರಿಗೆ ಇಂದು ಅವಕಾಶ ನೀಡಿದ್ದೀರಿ ಎಂದು ಹೇಳಿದರು.
ವಿಪಕ್ಷಗಳ ಅವಿಶ್ವಾಸ ಬಿಜೆಪಿಗೆ ಶುಭ ಸಂಕೇತ, 2019ರ ಘಟನೆ ನೆನೆಪಿಸಿದ ಪ್ರಧಾನಿ ಮೋದಿ!
ಆದರೆ, ಸಿಕ್ಕ ಅವಕಾಶವನ್ನು ಹಾಳು ಮಾಡಿಕೊಳ್ಳೋದು ಹೇಗೆ ಅನ್ನೋದರಲ್ಲಿ ಅಧೀರ್ ಬಾಬು ನಿಸ್ಸೀಮರು ಎಂದು ಮೋದಿ ಹೇಳಿದಾಗ ಆಡಳಿತ ಪಕ್ಷದ ಸಂಸದರು ಮೇಜು ಕುಟ್ಟಿ ಸ್ವಾಗತಿಸಿದರು. ನಿಮಗೆ ಇರುವ ಸಂಕಷ್ಟ ಏನು ಅನ್ನೋದು ನಮಗೆ ಗೊತ್ತಿಲ್ಲ. ಯಾಕೆ ಅವರನ್ನು ಸೈಡ್‌ಲೈನ್ ಮಾಡಿದ್ದೀರಿ ಅನ್ನೋದು ಗೊತ್ತಿಲ್ಲ. ಬಹುಶಃ ಕೋಲ್ಕತ್ತಾದಿಂದ ಫೋನ್ ಬಂದಿರಬಹುದು. ಇನ್ನು ಕಾಂಗ್ರೆಸ್ ಪದೇ ಪದೇ ಅವರ ಅವಮಾನ ಮಾಡುತ್ತದೆ. ಕೆಲವೊಮ್ಮೆ ಚುನಾವಣೆಯ ಲಿಸ್ಟ್‌ನಲ್ಲಿ ನೆಪ ಮಾತ್ರಕ್ಕೂ ಅವರ ಹೆಸರನ್ನು ಇಡೋದೇ ಇಲ್ಲ. ನಾವು ಅಧೀರ್ ಬಾಬು ಕುರಿತಾಗಿ ಎಲ್ಲಾ ರೀತಿಯ ಅನುಕಂಪವನ್ನು ಹೊಂದಿದ್ದೇವೆ ಎಂದು ಮೋದಿ ಟೀಕೆ ಮಾಡಿದರು.
ಪ್ರಧಾನಿಯನ್ನು ನೀರವ್ ಮೋದಿಗೆ ಹೋಲಿಸಿ ವಿಪಕ್ಷದ ಎಡವಟ್ಟು, ಕಡತದಿಂದ ತೆಗೆದುಹಾಕಿದ ಸ್ಪೀಕರ್!