ಅಮೆರಿಕದಲ್ಲಿ ಮೋದಿಗೆ ಇಂದ್ರದೇವನ ಆಶೀರ್ವಾದ: ಮಳೆಯ ಆರ್ಭಟದ ನಡುವೆಯೂ ರಾಷ್ಟ್ರಗೀತೆಗೆ ‘ನಮೋ’ ಗೌರವ
ಮಳೆಯ ನಡುವೆಯೂ ಮೋದಿ ನಿಂತುಕೊಂಡಿರುವ ವಿಡಿಯೋಗೆ ಟ್ವಿಟ್ಟರ್‌ನಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ. ಜತೆಗೆ, ಈ ವಿಡಿಯೋ ವೈರಲ್ ಸಹ ಆಗುತ್ತಿದೆ.
ವಾಷಿಂಗ್ಟನ್ ಡಿಸಿ (ಜೂನ್ 22, 2023): ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ ದೊರೆತಿದೆ. ಗುರುವಾರ ಬೆಳಗ್ಗೆ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿಗೆ ಔಪಚಾರಿಕ ಸ್ವಾಗತ ನೀಡಲಾಗಿದೆ. ಈ ನಡುವೆ, ಪ್ರಧಾನಿ ನರೇಂದ್ರ ಮೋದಿ, ಮಳೆಯ ನಡುವೆಯೂ ರಾಷ್ಟ್ರಗೀತೆಗೆ ನಿಂತಿರುವುದು ಕಂಡುಬಂದಿದೆ.
ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿ ಏರ್‌ಪೋರ್ಟ್‌ಗೆ ಬಂದಿಳಿದ ಬಳಿಕ, ಭಾರತದ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಳೆಯ ಆರ್ಭಟವನ್ನು ಲೆಕ್ಕಿಸದೆ ಜನ ಗಣ ಮನ ನುಡಿಸಿದ ಕೂಡಲೇ ನಿಂತುಕೊಂಡಿದ್ದಾರೆ. ಮಳೆಯ ನಡುವೆಯೂ ಮೋದಿ ನಿಂತುಕೊಂಡಿರುವ ವಿಡಿಯೋಗೆ ಟ್ವಿಟ್ಟರ್‌ನಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ. ಜತೆಗೆ, ಈ ವಿಡಿಯೋ ವೈರಲ್ ಸಹ ಆಗುತ್ತಿದೆ.
ಇದನ್ನು ಓದಿ: ಅಮೆರಿಕಾದ ಶ್ವೇತಭವನದಲ್ಲಿ ಪ್ರಧಾನಿ ಮೋದಿಗೆ ವಿಶೇಷ ಔತಣಕೂಟ, ಮೆನುವಿನಲ್ಲಿ ಏನೇನಿದೆ?
ವಾಷಿಂಗ್ಟನ್ ಡಿಸಿಯ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ ಪ್ರಧಾನ ಮಂತ್ರಿಯ ವಿಡಿಯೋಗಳನ್ನು ನೆಟ್ಟಿಗರು ಹಾಗೂ ಬಿಜೆಪಿ ನಾಯಕರು ಟ್ವಿಟ್ಟರ್‌ನಲ್ಲಿ ಹೊಗಳುತ್ತಿದ್ದು, ಜತೆಗೆ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ‘’ವಾಷಿಂಗ್ಟನ್ ಡಿಸಿಯ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿದ್ಯುಕ್ತ ಸ್ವಾಗತ ಮತ್ತು ಗೌರವವನ್ನು ನೀಡಲಾಯಿತು. ಅವರು ಬೇಸ್‌ನಲ್ಲಿ ಇಳಿದ ನಂತರ ಎರಡೂ ದೇಶಗಳ ರಾಷ್ಟ್ರಗೀತೆಗಳನ್ನು ನುಡಿಸಲಾಯಿತು. ರಾಷ್ಟ್ರಗೀತೆಗಳನ್ನು ನುಡಿಸುವಾಗ ಪ್ರಧಾನಿ ಮೋದಿಯವರು ಮಳೆಗೆ ಲೆಕ್ಕಿಸದೆ ನಿಂತುಕೊಂಡಿದ್ದಾರೆ’’ ಎಂಬ ಕ್ಯಾಪ್ಷನ್ ಅನ್ನೂ ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿದೆ.
ಕೆಳಗಿನ ವಿಡಿಯೋವನ್ನು ವೀಕ್ಷಿಸಿ..
ಇದನ್ನೂ ಓದಿ: 80 ತುಂಬಿದ ಬೈಡೆನ್‌ಗೆ ವಿಶೇಷ ಉಡುಗೊರೆ ನೀಡಿದ ಮೋದಿ: ದಶದಾನ ಏನಿದರ ವಿಶೇಷತೆ?
ಇನ್ನು, ಪ್ರಧಾನಿ ಮೋದಿ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, "ವಾಷಿಂಗ್ಟನ್ ಡಿಸಿ ತಲುಪಿದೆ. ಭಾರತೀಯ ಸಮುದಾಯದ ಪ್ರೀತಿ ಮತ್ತು ಇಂದ್ರ ದೇವತೆಯ ಆಶೀರ್ವಾದವು ಆಗಮನವನ್ನು ಇನ್ನಷ್ಟು ವಿಶೇಷಗೊಳಿಸಿದೆ" ಎಂದು ವಾಷಿಂಗ್ಟನ್ ಡಿಸಿ ತಲುಪಿದ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಈ ವಿಡಿಯೋವನ್ನು ಶೇರ್ ಮಾಡಿದವರಲ್ಲಿ ಮೊದಲಿಗರು ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಬೈಡೆನ್‌ಗೆ ಕರುನಾಡ ಶ್ರೀಗಂಧ ಉಡುಗೊರೆ : ದಶದಾನ ಮಾಡಿದ ಪ್ರಧಾನಿ ಮೋದಿ
ಹಾಗೆ, ಅನೇಕ ಟ್ವಿಟ್ಟರ್ ಬಳಕೆದಾರರು ಸಹ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ಗೌರವ ಮತ್ತು ದೇಶಭಕ್ತಿಯ ಗಮನಾರ್ಹ ಪ್ರದರ್ಶನದಲ್ಲಿ, ಪ್ರಧಾನಿ ಮೋದಿ ಅವರು ಯುನೈಟೆಡ್ ಸ್ಟೇಟ್ಸ್‌ಗೆ ಆಗಮಿಸಿದ ನಂತರ ರಾಷ್ಟ್ರಗೀತೆಯನ್ನು ಗೌರವಿಸಲು ಇಂದು ಮಳೆಯಲ್ಲಿ ನಿಂತರು" ಎಂದು ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ. ಗೂಸ್‌ಬಂಪ್ಸ್ ಕ್ಷಣ ಎಂದೂ ಬಳಕೆದಾರರೊಬ್ಬರು ಹೇಳಿದರು.
ಬಳಿಕ, ಪ್ರಧಾನಿ ನರೇಂದ್ರ ಮೋದಿಗೆ ಶ್ವೇತಭವನದಲ್ಲಿ ಪ್ರಧಾನಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಭವ್ಯ ಸ್ವಾಗತ ಕೋರಿದರು. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷರು ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರಿಗೆ ಅನೇಕ ಉಡುಗೊರೆಗಳನ್ನು ನೀಡಿದ್ದು, ಈ ಫೋಟೋ, ವಿಡಿಯೋಗಳು ಸಹ ಅನೇಕರು ಹಂಚಿಕೊಂಡಿದ್ದಾರೆ. ಜೂನ್ 20 ರಂದು ಅಮೆರಿಕಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21 ರಂದು ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದರು.
ಇದನ್ನೂ ಓದಿ: ಅಮೆರಿಕಾದ ಮೋದಿ ಅರೈವಲ್ ಸೆರಮನಿಯಲ್ಲಿ ಚಿಕ್ಕಮಗಳೂರ ಹಳ್ಳಿ ಹೈದ!