ಪ್ರಧಾನಿ ನರೇಂದ್ರ ಮೋದಿಯವರ ಸುದೀರ್ಘ ಆಡಳಿತಾವಧಿಯು 'ಏಕ ಭಾರತ, ಶ್ರೇಷ್ಠ ಭಾರತ' ಪರಿಕಲ್ಪನೆಯಡಿ ದೇಶವನ್ನು ಏಕೀಕೃತಗೊಳಿಸಿದೆ. ಜನಧನ, ಉಜ್ವಲಾ, ಸ್ವಚ್ಛ ಭಾರತ್‌ನಂತಹ ಯೋಜನೆಗಳ ಮೂಲಕ ಜನಕಲ್ಯಾಣ ಮತ್ತು ಡಿಜಿಟಲ್ ಆಡಳಿತಕ್ಕೆ ಒತ್ತು ನೀಡಿದ ಅವರು, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚಿಸಿದ್ದಾರೆ.

-ಪ್ರಲ್ಹಾದ ಜೋಶಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇಂದ್ರ ಸಚಿವರು

ಮೋದಿ ಅವಧಿ ಅಭಿವೃದ್ಧಿಯ ಹೊಸ ಅಧ್ಯಾಯ । ನವ ಭಾರತದ ನಿರ್ಮಾಣಕ್ಕೆ ಅಡಿಗಲ್ಲು 

‘ಕಮಲೇ ಕಮಲೋತ್ಪತ್ತಿಃ’ ಎಂಬ ಸಂಸ್ಕೃತ ನುಡಿಗಟ್ಟು ಪ್ರಧಾನಿ ನರೇಂದ್ರ ಮೋದಿ(Prime minister Narendra Modi) ಅವರಿಗೆ ಅಕ್ಷರಶಃ ಅನ್ವಯಿಸುತ್ತದೆ. ಭಾರತದಂತಹ ಸುಂದರ ಕಮಲದಲ್ಲಿ ಅರಳಿದ ಮತ್ತೊಂದು ಕಮಲದಂತೆ ಅವರಿದ್ದಾರೆ. ಗುಜರಾತಿನ ವಡ್‌ನಗರದಲ್ಲಿ 1950ರ ಸೆಪ್ಟೆಂಬರ್ 17ರಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಮೋದಿ, ಇಂದು ವಿಶ್ವದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿ ಬೆಳೆದಿದ್ದಾರೆ.

2026ರ ಜೂ.10ರಂದು ಮೋದಿ ಅವರು, ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ(Jawaharlal Nehru) ಅವರ 4,398 ದಿನಗಳ ಸತತ ಅಧಿಕಾರಾವಧಿಯ ದಾಖಲೆಯನ್ನು ಮುರಿದು, 4,399 ದಿನ ಅಧಿಕಾರವನ್ನು ಪೂರೈಸುವ ಮೂಲಕ ಭಾರತದ ಅತ್ಯಂತ ಸುದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿದ್ದಾರೆ.

2001ರಿಂದ 2014ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ, 2014ರಿಂದ ಪ್ರಧಾನಿಯಾಗಿ ಒಟ್ಟು 8,930 ದಿನಗಳ ಸಾರ್ವಜನಿಕ ಆಡಳಿತ ಅನುಭವ ಹೊಂದಿರುವ ಅವರು, ಭಾರತದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿಗೆ ಜನರಿಂದ ಚುನಾಯಿತರಾದ ಸರ್ಕಾರದ ಮುಖ್ಯಸ್ಥರಾಗಿದ್ದಾರೆ.

ಏಕ ಭಾರತ, ಶ್ರೇಷ್ಠ ಭಾರತ:

ಪ್ರಧಾನಿ ಮೋದಿ ನಾಯಕತ್ವದಲ್ಲಿ ‘ಏಕ ಭಾರತ, ಶ್ರೇಷ್ಠ ಭಾರತ’ ಪರಿಕಲ್ಪನೆಗೆ ನವ ಚೈತನ್ಯ ದೊರೆತಿದೆ. ಒನ್ ನೇಷನ್-ಒನ್ ರೇಷನ್ ಕಾರ್ಡ್, ಜಿಎಸ್‌ಟಿ, ಇ-ನಾಮ್‌, ನ್ಯಾಷನಲ್ ಮೊಬಿಲಿಟಿ ಕಾರ್ಡ್, ಡಿಜಿಟಲ್ ಇಂಡಿಯಾ ಮುಂತಾದ ಯೋಜನೆಗಳು ದೇಶವನ್ನು ಮತ್ತಷ್ಟು ಏಕೀಕೃತಗೊಳಿಸಿವೆ. ವಿಶ್ವ ಯೋಗ ದಿನಾಚರಣೆಗೆ ಪ್ರೇರಣೆ ನೀಡಿ 177 ರಾಷ್ಟ್ರಗಳ ಬೆಂಬಲ ಗಳಿಸಿದ ಅವರು, ಯೋಗವನ್ನು ಜಾಗತಿಕ ಚಳವಳಿಯನ್ನಾಗಿ ರೂಪಿಸಿದರು.

‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಧ್ಯೇಯದೊಂದಿಗೆ ಅಭಿವೃದ್ಧಿ, ಪಾರದರ್ಶಕತೆ ಮತ್ತು ಡಿಜಿಟಲ್ ಆಡಳಿತಕ್ಕೆ ಒತ್ತು ನೀಡಿದ ಮೋದಿ, ‘ಮನ ಕೀ ಬಾತ್’ ಮೂಲಕ ಜನಸಂಪರ್ಕಕ್ಕೆ ಹೊಸ ಆಯಾಮ ನೀಡಿದ್ದಾರೆ. ದೇಶದ ಪ್ರಜೆಗಳ ಜತೆ ಡಿಜಿಟಲ್‌ ವೇದಿಕೆಯ ಮೂಲಕ ಪ್ರಧಾನಿ ನೇರವಾಗಿ ಸಂವಾದ ನಡೆಸುವ ಈ ಕಾರ್ಯಕ್ರಮ ದೇಶದ ಮನೆಮನೆಗೂ ತಲುಪಿದೆ.

ನೆಹರೂ ಮತ್ತು ಮೋದಿ ಯುಗ:

ನೆಹರೂ ಆಡಳಿತ ಕಾಲದಲ್ಲಿ ಭಾರತ 34 ಕೋಟಿ ಜನಸಂಖ್ಯೆ ಮತ್ತು ಸುಮಾರು 17 ಕೋಟಿ ಮತದಾರರನ್ನು ಹೊಂದಿತ್ತು. ಇಂದು ಭಾರತ 146 ಕೋಟಿ ಜನಸಂಖ್ಯೆ ಹಾಗೂ ಸುಮಾರು 97 ಕೋಟಿ ಮತದಾರರನ್ನು ಹೊಂದಿದೆ. ರಾಜಕೀಯ ಪಕ್ಷಗಳ ಸಂಖ್ಯೆ 53ರಿಂದ 744ಕ್ಕೆ ಏರಿಕೆಯಾಗಿದೆ. ಇಂತಹ ಸ್ಪರ್ಧಾತ್ಮಕ ಮತ್ತು ಸಂಕೀರ್ಣ ರಾಜಕೀಯ ವಾತಾವರಣದಲ್ಲಿ ಸತತ 3ನೇ ಅವಧಿಗೆ ಅಧಿಕಾರಕ್ಕೇರಿದ ಮೊದಲ ಕಾಂಗ್ರೆಸ್ಸೇತರ ನಾಯಕ ಎಂಬ ಹೆಗ್ಗಳಿಕೆ ಮೋದಿ ಅವರದ್ದು.

ಅಭಿವೃದ್ಧಿಯ ಹೊಸ ಅಧ್ಯಾಯ:

ಕಳೆದ 12 ವರ್ಷಗಳಲ್ಲಿ ಭಾರತ ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ಕೃಷಿ, ಸಾರಿಗೆ, ರಕ್ಷಣೆ ಹಾಗೂ ಡಿಜಿಟಲ್ ಆಡಳಿತ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. 18 ಸಾವಿರಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಆಯುಷ್ಮಾನ್ ಭಾರತ್ ಮೂಲಕ ಕೋಟ್ಯಂತರ ಜನರಿಗೆ ಆರೋಗ್ಯ ರಕ್ಷಣೆ ಒದಗಿಸಲಾಗಿದೆ. ಜನಧನ ಖಾತೆಗಳು, ಆಧಾರ್ ಮತ್ತು ಯುಪಿಐ ಮೂಲಕ ಹಣಕಾಸು ಸೇರ್ಪಡೆಗೆ ಹೊಸ ದಿಕ್ಕು ಸಿಕ್ಕಿದೆ. ಜೆಎಎಂ ಟ್ರಿನಿಟಿ ವ್ಯವಸ್ಥೆ ಸರ್ಕಾರದ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಿದೆ. ಉಜ್ವಲಾ ಯೋಜನೆಯು ಕೋಟ್ಯಂತರ ಮಹಿಳೆಯರಿಗೆ ಹೊಗೆಮುಕ್ತ ಅಡುಗೆ ವ್ಯವಸ್ಥೆ ಒದಗಿಸಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 4.2 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ.

ರೈತರು, ಸ್ವಚ್ಛತೆ ಮತ್ತು ಹಸಿರು ಶಕ್ತಿ

ಪಿಎಂ ಕಿಸಾನ್, ಫಸಲ್ ಬಿಮಾ, ನೀರಾವರಿ ಯೋಜನೆ, ಬೆಂಬಲ ಬೆಲೆ ಹೆಚ್ಚಳದ ಮೂಲಕ ರೈತರ ಸಬಲೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಪಿಎಂ ಸೂರ್ಯ ಘರ್ ಮತ್ತು ಪಿಎಂ ಕುಸುಮ್ ಯೋಜನೆಗಳು ಶಕ್ತಿ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆಗಳಾಗಿವೆ.

2014ರಲ್ಲಿ ಶುರುವಾದ ಸ್ವಚ್ಛ ಭಾರತ್ ಮಿಷನ್ ಭಾಗವಾಗಿ ಸ್ವತಃ ಪ್ರಧಾನಿಯವರೇ ಕಸಬರಿಗೆ ಹಿಡಿದು ರಸ್ತೆ ಸ್ವಚ್ಛಗೊಳಿಸಿದ್ದು, ಕೋಟ್ಯಂತರ ಜನರಿಗೆ ಪ್ರೇರಣೆ ನೀಡಿತು. ಕೇಂದ್ರ ಸರ್ಕಾರ ಬಯಲು ಶೌಚಮುಕ್ತ ಭಾರತ ನಿರ್ಮಾಣದತ್ತ ಮಹತ್ತರ ಸಾಧನೆ ಮಾಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯೂ ಈ ಕಾರ್ಯಕ್ರಮವನ್ನು ಶ್ಲಾಘಿಸಿದೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಸ್ಥಾಪನೆ, ಹವಾಮಾನ ನ್ಯಾಯದ ಪರಿಕಲ್ಪನೆ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದ ನಾಯಕತ್ವಕ್ಕೆ ಮೋದಿ ಅವರ ಕೊಡುಗೆ ಮಹತ್ವದ್ದಾಗಿದೆ.

ಜಾಗತಿಕ ವೇದಿಕೆಯಲ್ಲಿ ಭಾರತ:

ವಿಶ್ವಸಂಸ್ಥೆ, ಜಿ20, ಬ್ರಿಕ್ಸ್‌ ಸೇರಿದಂತೆ ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮೋದಿ ಅವರ ನಾಯಕತ್ವ ಭಾರತದ ಜಾಗತಿಕ ಪ್ರಭಾವವನ್ನು ಹೆಚ್ಚಿಸಿದೆ. ಯೋಗ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಕೋವಿಡ್‌ ಲಸಿಕೆ ರಾಜತಾಂತ್ರಿಕತೆ ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವಗಳ ಮೂಲಕ ಭಾರತ ಹೊಸ ಎತ್ತರ ತಲುಪಿದೆ. ಅವರ ಸೇವೆಯನ್ನು ಗುರುತಿಸಿ 29ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಗೌರವಗಳು ಮತ್ತು ಪ್ರಶಸ್ತಿಗಳು ದೊರೆತಿವೆ.

ಟೆಕ್ನೋ-ಸೇವಿ ನಾಯಕ:

ಸಾಮಾಜಿಕ ಜಾಲತಾಣ, ಮೈಗವ್‌, ಮನ ಕೀ ಬಾತ್, ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಗಳ ಮೂಲಕ ಮೋದಿ ಜನರೊಂದಿಗೆ ನೇರ ಸಂಪರ್ಕ ಸಾಧಿಸಿದ್ದಾರೆ. ಯುಪಿಐ, ಡಿಜಿಲಾಕರ್‌, ಉಮಾಂಗ್, ಜಿಇಎಂ, ಒಎನ್‌ಡಿಸಿ ಮುಂತಾದ ಡಿಜಿಟಲ್ ಉಪಕ್ರಮಗಳು ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಿವೆ. ಡಿಜಿಟಲ್ ಕ್ಷೇತ್ರದಲ್ಲಿ ಭಾರತ ಕ್ರಾಂತಿಕಾರಿ ಬದಲಾವಣೆಗೆ ಒಳಪಟ್ಟಿದೆ.

ಐತಿಹಾಸಿಕ ಪಯಣ:

ಮೂಲಸೌಕರ್ಯ ಅಭಿವೃದ್ಧಿ, ಜನಕಲ್ಯಾಣ, ಡಿಜಿಟಲ್ ಪರಿವರ್ತನೆ, ಪರಿಸರ ಸಂರಕ್ಷಣೆ ಮತ್ತು ಜಾಗತಿಕ ನಾಯಕತ್ವದ ಮೂಲಕ ಮೋದಿ ಆಡಳಿತ ಭಾರತಕ್ಕೆ ಹೊಸ ದಿಕ್ಕು ನೀಡಿದೆ. ಇದು ಒಬ್ಬ ನಾಯಕನ ಸಾಧನೆಯಾಗಿರದೆ, ಹೊಸ ಭಾರತದ ಆತ್ಮವಿಶ್ವಾಸದ ಪ್ರತೀಕವೂ ಹೌದು. ಮಹಿಳೆಯರಿಂದ ರೈತರ ವರೆಗೆ, ಕೃಷಿಯಿಂದ ತಂತ್ರಜ್ಞಾನದ ವರೆಗೆ, ಶಿಕ್ಷಣದಿಂದ ಬಾಹ್ಯಾಕಾಶದ ವರೆಗೆ, ಕ್ರೀಡೆಯಿಂದ ಡಿಜಿಟಲ್ ಕ್ರಾಂತಿಯ ವರೆಗೆ ಭಾರತ ಇಂದು ಹೊಸ ಮೈಲುಗಲ್ಲು ತಲುಪಿದೆ. ಆರ್ಥಿಕತೆ, ರಕ್ಷಣೆ, ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದ್ದು ದಾಪುಗಾಲಿಡುತ್ತಿದೆ. ಇವೆಲ್ಲವುಗಳ ಹಿಂದೆ ಪ್ರಧಾನಿ ಮೋದಿಯವರ ದೂರದೃಷ್ಟಿಯ ನಾಯಕತ್ವವಿದೆ.