ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರ್ ಬಾಂಬ್ ಬ್ಲಾಸ್ಟ್ ಕುರಿತು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಪಿತೂರಿಯ ಹಿಂದಿರುವವರನ್ನು ಸುಮ್ಮನೆ ಬಿಡುವುದಿಲ್ಲ ಮತ್ತು ನ್ಯಾಯದ ಕಟಕಟೆಗೆ ತರಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಥಿಂಪು (ನ.11): ದೆಹಲಿಯ ಕೆಂಪುಕೋಟೆಯ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ಕಾರ್ ಬಾಂಬ್ ಬ್ಲಾಸ್ಟ್‌ಅನ್ನು ಬಹುತೇಕ ಭಯೋತ್ಪಾದಕ ಕೃತ್ಯ ಎನ್ನುವ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಭೂತಾನ್‌ಗೆ ದ್ವಿಪಕ್ಷೀಯ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ರಾಜಧಾನಿ ಥಿಂಪುವಿನಲ್ಲಿ ದೆಹಲಿ ಬ್ಲಾಸ್ಟ್ ಬಗ್ಗೆ ಮಾತನಾಡಿದ್ದಾರೆ. ದೆಹಲಿ ಕಾರ್ ಬಾಂಬ್ ಬ್ಲಾಸ್ಟ್ ಪಿತೂರಿ ಮಾಡಿದವರನ್ನು ಸುಮ್ಮನೆ ಬಿಡೋ ಮಾತೇ ಇಲ್ಲ ಎಂದು ಹೇಳುವ ಮೂಲಕ ದೊಡ್ಡ ಪ್ರತಿಕ್ರಿಯೆ ನೀಡುವ ಸೂಚನೆ ನೀಡಿದ್ದಾರೆ.
ಪುಲ್ವಾಮಾ ಘಟನೆ ಆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಬಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಗ್ಲೀಷ್‌ನಲ್ಲಿ ಮಾತನಾಡಿದ್ದರು. ತಮ್ಮ ಮಾತು ಇಡೀ ವಿಶ್ವಕ್ಕೆ ಅರ್ಥವಾಗಲಿ ಎನ್ನುವ ಕಾರಣಕ್ಕೆ ಎಚ್ಚರಿಕೆಯ ಸಂದೇಶವನ್ನು ಇಂಗ್ಲೀಷ್‌ನಲ್ಲಿ ಹೇಳಿದ್ದರು. ಈಗ ಭೂತಾನ್‌ನಲ್ಲೂ ಕೂಡ ನರೇಂದ್ರ ಮೋದಿ ಇಂಗ್ಲೀಷ್‌ನಲ್ಲಿಯೇ ಮಾತನಾಡಿ ಮುಂದೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ನ್ಯಾಯದ ಕಟಕಟೆಗೆ ತರಲಿದ್ದೇವೆ ಎಂದ ಮೋದಿ
"ಇಂದು, ನಾನು ತುಂಬಾ ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ. ನಿನ್ನೆ ಸಂಜೆ ದೆಹಲಿಯಲ್ಲಿ ನಡೆದ ಭೀಕರ ಘಟನೆ ಎಲ್ಲರನ್ನೂ ತೀವ್ರವಾಗಿ ದುಃಖಿಸಿದೆ. ಸಂತ್ರಸ್ತ ಕುಟುಂಬಗಳ ದುಃಖ ನನಗೆ ಅರ್ಥವಾಗಿದೆ. ಇಂದು ಇಡೀ ರಾಷ್ಟ್ರವು ಅವರೊಂದಿಗೆ ನಿಂತಿದೆ. ನಿನ್ನೆ ರಾತ್ರಿಯಿಡೀ ಈ ಘಟನೆಯ ತನಿಖೆ ನಡೆಸುತ್ತಿರುವ ಎಲ್ಲಾ ಸಂಸ್ಥೆಗಳೊಂದಿಗೆ ನಾನು ಸಂಪರ್ಕದಲ್ಲಿದ್ದೆ. ನಮ್ಮ ಸಂಸ್ಥೆಗಳು ಈ ಪಿತೂರಿಯ ಆಳವನ್ನು ಕಂಡುಕೊಳ್ಳುತ್ತವೆ. ಇದರ ಹಿಂದಿನ ಪಿತೂರಿಗಾರರನ್ನು ಸುಮ್ಮನೆ ಬಿಡೋದಿಲ್ಲ. ಇದಕ್ಕೆ ಕಾರಣರಾದ ಎಲ್ಲರನ್ನೂ ನ್ಯಾಯದ ಕಟಕಟೆಗೆ ತರಲಾಗುವುದು' ಎಂದು ಮೋದಿ ಹೇಳಿದ್ದಾರೆ."...ಇದರ ಹಿಂದಿನ ಪಿತೂರಿಗಾರರನ್ನು ಬಿಡಲಾಗುವುದಿಲ್ಲ. ಎಲ್ಲ ಹೊಣೆಗಾರರನ್ನು ನ್ಯಾಯ ಸಿಕ್ಕೇ ಸಿಗುತ್ತದೆ' ಎಂದು ಹೇಳಿದ್ದಾರೆ.
ಆಪರೇಷನ್ ಸಿಂದೂರ್ ಯಶಸ್ವಿಯಾಗಿದೆ ಎಂದು ಘೋಷಣೆ ಮಾಡುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಮಹತ್ವದ ಘೋಷಣೆ ಮಾಡಿದ್ದರು. ಭಾರತದ ಮೇಲೆ ಮುಂದೆ ನಡೆಸಲಾಗುವ ಎಲ್ಲಾ ಭಯೋತ್ಪಾದಕ ದಾಳಿಯನ್ನು ಆಕ್ಟ್ ಆಫ್ ವಾರ್ ಎಂದೇ ಪರಿಗಣಿಸಲಾಗುತ್ತದೆ ಎಂದು ಹೇಳಿದ್ದರು. ಹಾಗಾಗಿ ಈ ಕೃತ್ಯದ ಹಿಂದೆ ಕಾರಣವಾಗಿರುವ ದಮನಕ್ಕೆ ಮೋದಿ ಸರ್ಕಾರ ಮುಂದಡಿ ಇಡುವುದು ನಿಶ್ಚಿತ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
