ಪ್ರಧಾನಿ ಮೋದಿ ಟುಟಿಕೋರಿನ್‌ನಲ್ಲಿ ₹4,900 ಕೋಟಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಹೊಸ ಟರ್ಮಿನಲ್, ಹೆದ್ದಾರಿ, ಬಂದರು, ರೈಲ್ವೆ ಮತ್ತು ವಿದ್ಯುತ್ ಯೋಜನೆಗಳು ತಮಿಳುನಾಡಿನ ಆರ್ಥಿಕತೆಗೆ ಉತ್ತೇಜನ ನೀಡಲಿವೆ.

ತಮಿಳುನಾಡು, (ಜುಲೈ.27): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯುಕೆ ಮತ್ತು ಮಾಲ್ಡೀವ್ಸ್‌ಗೆ ತಮ್ಮ ಯಶಸ್ವಿ ಪ್ರವಾಸ ಮುಗಿಸಿ ಶನಿವಾರ ತಮಿಳುನಾಡಿನ ಟುಟಿಕೋರಿನ್‌ಗೆ ಆಗಮಿಸಿದರು. ಇಲ್ಲಿ, ಅವರು ₹4,900 ಕೋಟಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ಮಾಡಿದರು.

ಈ ಯೋಜನೆಗಳಲ್ಲಿ ಹೊಸ ಟರ್ಮಿನಲ್, ಹೆದ್ದಾರಿ, ಬಂದರು, ರೈಲ್ವೆ ಅಭಿವೃದ್ಧಿ ಮತ್ತು ವಿದ್ಯುತ್ ಪ್ರಸರಣ ಯೋಜನೆಗಳು ಸೇರಿವೆ, ಇವು ತಮಿಳುನಾಡಿನ ಸಂಪರ್ಕ ಮತ್ತು ಆರ್ಥಿಕತೆಯನ್ನು ಬಲಪಡಿಸಲಿವೆ.

ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ:

ಪ್ರಧಾನಿ ಮೋದಿಯವರು ತಮ್ಮ ಯುಕೆ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಲಾಗಿದೆ ಎಂದು ಘೋಷಿಸಿದರು. ಈ ಒಪ್ಪಂದವು ಭಾರತದ ಮೇಲಿನ ವಿಶ್ವದ ನಂಬಿಕೆ ಮತ್ತು ನಮ್ಮ ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಇದು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮಾರ್ಪಡಿಸುವ ವೇಗವನ್ನು ಇನ್ನಷ್ಟು ತ್ವರಿತಗೊಳಿಸಲಿದೆ ಎಂದರು.

ಇದನ್ನೂ ಓದಿ: ಚೀನಾ ಜೊತೆ ಸೇರಿ ಯಾವ ದೇಶ ಭಾರತದ ವಿರುದ್ಧ ತೊಡೆ ತಟ್ಟಿತ್ತೋ, ಇಂದು ಅದೇ ಮಾಲ್ಡೀವ್ಸ್ ಸ್ವಾತಂತ್ರ್ಯೋತ್ಸವದ ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ!

ತಮಿಳುನಾಡಿನಲ್ಲಿ ಮೂಲಸೌಕರ್ಯ ಉತ್ತೇಜನ:

ನಾವು ಇಂದು ₹2,500 ಕೋಟಿ ವೆಚ್ಚದ ಎರಡು ಪ್ರಮುಖ ರಸ್ತೆ ಯೋಜನೆಗಳನ್ನು ತಮಿಳುನಾಡಿನ ಜನರಿಗೆ ಸಮರ್ಪಿಸಿದ್ದೇವೆ. ಈ ರಸ್ತೆಗಳು ಚೆನ್ನೈಗೆ ಪ್ರಮುಖ ಅಭಿವೃದ್ಧಿ ಪ್ರದೇಶಗಳನ್ನು ಸಂಪರ್ಕಿಸುವ ಜೊತೆಗೆ, ತೂತುಕುಡಿ ಬಂದರಿನ ಸಂಪರ್ಕವನ್ನು ಸುಧಾರಿಸಲಿವೆ. ಇದು ವ್ಯಾಪಾರ, ಉದ್ಯೋಗ ಮತ್ತು ಜೀವನ ಸುಗಮಕ್ಕೆ ಹೊಸ ಅವಕಾಶಗಳನ್ನು ತೆರೆಯಲಿದೆ ಎಂದರು.

ನಮ್ಮ ಆಯುಧಗಳು ಭಯೋತ್ಪಾದಕರ ನಿದ್ದೆಗೆಡಿಸಿವೆ:

"ಮೇಕ್ ಇನ್ ಇಂಡಿಯಾ ಮತ್ತು ಮಿಷನ್ ಮ್ಯಾನುಫ್ಯಾಕ್ಚರಿಂಗ್‌ಗೆ ನಮ್ಮ ಸರ್ಕಾರ ಒತ್ತು ನೀಡುತ್ತಿದೆ. ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತದಲ್ಲಿ ತಯಾರಾದ ಶಸ್ತ್ರಾಸ್ತ್ರಗಳ ಶಕ್ತಿಯನ್ನು ವಿಶ್ವ ಕಂಡಿದೆ. ಇವು ಭಯೋತ್ಪಾದನೆಯ ಅಡಗುತಾಣಗಳನ್ನು ನಾಶಪಡಿಸಿದ್ದು, ಇನ್ನೂ ಭಯೋತ್ಪಾದಕರಿಗೆ ಎಚ್ಚರಿಕೆಯ ಸಂದೇಶ ನೀಡುತ್ತಿವೆ ಎಂದು ಪ್ರಧಾನಿ ಒತ್ತಿ ಹೇಳಿದರು.

ತಮಿಳುನಾಡಿನ ಅಭಿವೃದ್ಧಿಗೆ ಆದ್ಯತೆ

ಕಳೆದ 11 ವರ್ಷಗಳಲ್ಲಿ ಮೂಲಸೌಕರ್ಯ ಮತ್ತು ಇಂಧನ ಕ್ಷೇತ್ರದಲ್ಲಿ ನಮ್ಮ ಕೆಲಸ ತಮಿಳುನಾಡಿನ ಅಭಿವೃದ್ಧಿಗೆ ನಾವು ನೀಡುವ ಆದ್ಯತೆಯನ್ನು ತೋರಿಸುತ್ತದೆ. ಇಂದಿನ ಯೋಜನೆಗಳು ತೂತುಕುಡಿಯನ್ನು ಸಂಪರ್ಕ, ಶುದ್ಧ ಇಂಧನ ಮತ್ತು ಹೊಸ ಅವಕಾಶಗಳ ಕೇಂದ್ರವನ್ನಾಗಿ ಮಾರ್ಪಡಿಸಲಿವೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.