ಹಲವು ಕಾರ್ಯಕ್ರಮಗಳ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಕೇರಳದ ಕೊಚ್ಚಿಗೆ ಆಗಮಿಸಿದ್ದಾರೆ. ಮಧ್ಯಪ್ರದೇಶದಲ್ಲಿನ ಕಾರ್ಯಕ್ರಮ ಮುಗಿಸಿ ಕೇರಳಕ್ಕೆ ಕಾಲಿಡುತ್ತಿದ್ದಂತೆ ಪ್ರಧಾನಿ ಮೋದಿ ಕೇರಳ ಸ್ಟೈಲ್‌ನಲ್ಲಿ ಮಿಂಚಿದ್ದಾರೆ. ಬಿಳಿ ಪಂಚ, ಕುರ್ತಾ ಹಾಗೂ ಶಲ್ಯದೊಂದಿಗೆ ಕಾಣಿಸಿಕೊಂಡ ಮೋದಿ ಅದ್ಧೂರಿ ರೋಡ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 

ಕೊಚ್ಚಿ(ಏ.24): ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ, ಯುವಂ ಕಾಂಕ್ಲೇವ್, ಬಿಶಪ್ ಚರ್ಚ್‌ಗೆ ಭೇಟಿ, ವಾಟರ್ ಬೋಟ್ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳ ನಿಮಿತ್ತ ಪ್ರಧಾನಿ ಮೋದಿ ಕೇರಳದ ಕೊಚ್ಚಿಗೆ ಆಗಮಿಸಿದ್ದಾರೆ. 2 ದಿನದ ಕೇರಳ ಪ್ರವಾಸದಲ್ಲಿ ಮೋದಿ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಧ್ಯಪ್ರದೇಶದ ಕಾರ್ಯಕ್ರಮ ಮುಗಿಸಿ ಕೇರಳದಲ್ಲಿ ಲ್ಯಾಂಡ್ ಅದ ಪ್ರಧಾನಿ ಮೋದಿ, ಕೇರಳ ಉಡುಗು ತೊಡುಗೆಯಲ್ಲಿ ಮಿಂಚಿದ್ದಾರೆ. ಪಂಚೆ, ಬಿಳಿ ಕುರ್ತಾ ಹಾಗೂ ಶಲ್ಯ ಹಾಕಿ ಕೇರಳ ಸಾಂಪ್ರಾದಾಯಿಕ ಉಡುಗೆಯಲ್ಲಿ ಮೋದಿ ಕಾಣಿಸಿಕೊಂಡಿದ್ದಾರೆ. ಕೊಚ್ಚಿಯಲ್ಲಿ ಮೋದಿ ಭಾರಿ ಭಿಗಿ ಭದ್ರತೆಯಲ್ಲಿ ಅದ್ಧೂರಿ ರೋಡ್ ಶೋ ನಡೆಸಲಿದ್ದಾರೆ.

ಕೊಚ್ಚಿಗೆ ಆಗಮಿಸಿದ ಪ್ರಧಾನಿ ಮೋದಿ 1.8 ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಮೋದಿ ರೋಡ್ ಶೋ ಥೇವರದಲ್ಲಿರುವ ಸೆಕ್ರೆಟ್ ಹಾರ್ಟ್ ಕಾಲೇಜು ಮೈದಾನದಲ್ಲಿ ಸಮಾಪ್ತಿಯಾಗಲಿದೆ. ಈ ಮೈದಾನದಲ್ಲಿ ಯುವಂ ಕಾಂಕ್ಲೇವ್ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮೋದಿ ಯುವ ಸಮೂಹದ ಜೊತೆ ಸಂವಾದ ನಡೆಸಲಿದ್ದಾರೆ. ಬಳಿಕ ಕೇರಳದ ಹಲವು ಕ್ರಿಶ್ಟಿಯನ್ ಚರ್ಚ್ ಮುಖಂಡರ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ರಬ್ಬರ್ ಬೆಳೆ ಬೆಲೆ ಹೆಚ್ಚಿಸಿದರೆ ಬಿಜೆಪಿ ಬೆಂಬಲಿಸುವುದಾಗಿ ಕ್ರಿಶ್ಚಿಯನ್ ಚರ್ಚ್ ಧರ್ಮಗುರುಗಳು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಭೇಟಿ ಕೇರಳ ರಾಜಕೀಯದಲ್ಲೂ ಮಹತ್ವದ್ದಾಗಿದೆ.

36 ತಾಸಲ್ಲಿ 7 ಕಡೆ 8 ಸಭೆ, 5300 ಕಿಮೀ ಪ್ರಧಾನಿ ಓಡಾಟ: ಮೋದಿ ಮಿಂಚಿನ ಸಂಚಾರ..!

ಬಳಿಕ ಕೊಚ್ಚಿಯಲ್ಲಿ ತಂಗಲಿರುವ ಪ್ರಧಾನಿ ನರೇಂದ್ರ ಮೋದಿ, ನಾಳೆ(ಏಪ್ರಿಲ್ 25) ತಿರುವನಂತಪುರಕ್ಕೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ತಿರುವನಂತಪುರಂ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ರಧಾನಿ ಮೋದಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಬಳಿಕ ದೇಶದ ಮೊದಲ ವಾಟರ್ ಬೋಟ್ ಮೆಟ್ರೋ ಉದ್ಘಾಟನೆ ಮಾಡಲಿದ್ದಾರೆ. ಇದರ ಜೊತೆಗೆ ಡಿಜಿಟಲ್ ಪಾರ್ಕ್ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಪ್ರಧಾನಿ ಮೋದಿ ಎಲ್ಲಾ ಕಾರ್ಯಕ್ರಮಗಳಿಗೆ ಭಿಗಿ ಭದ್ರತೆ ಒದಗಿಸಲಾಗಿದೆ. ಮೋದಿ ಮೇಲೆ ಆತ್ಮಾಹುತಿ ದಾಳಿ ಮಾಡುವ ಬೆದರಿಕೆ ಪತ್ರವೊಂದು ಬಿಜೆಪಿ ಕಚೇರಿಗೆ ಬಂದಿತ್ತು. ಇದರ ಹಿನ್ನಲೆಯಲ್ಲಿ ಕೇರಳ ಪೊಲೀಸ್ ಭಾರಿ ಬಿಗಿ ಭದ್ರತೆ ಒದಗಿಸಿದೆ. ಏ.24-25ರಂದು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಅವರ ಮೇಲೆ ಆತ್ಮಾಹುತಿ ಬಾಂಬ್‌ ದಾಳಿ ನಡೆಸುವುದಾಗಿ ಬೆದರಿಕೆ ಪತ್ರ ಬರೆದಿದ್ದ ವ್ಯಕ್ತಿಯನ್ನು ಕೇರಳ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬೇರೊಂದು ಹೆಸರಿನಲ್ಲಿ ಪತ್ರ ಬರೆದಿದ್ದ ಆರೋಪಿ, ಕೊಚ್ಚಿಯ ವ್ಯಾಪಾರಿ ಕ್ಸೇವಿಯರ್‌ನನ್ನು ಬಂಧಿಸಲಾಗಿದೆ.

ಎಪ್ರಿಲ್ 28 ರಿಂದ ಕರ್ನಾಟಕದಲ್ಲಿ ಮೋದಿ ಪ್ರಚಾರ ಆರಂಭ, ಯೋಗಿ ಆದಿತ್ಯನಾಥ್ ಸಾಥ್!

ವೈಜ್ಞಾನಿಕವಾಗಿ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಲಾಗಿದ್ದು, ಇದೊಂದು ವೈಯಕ್ತಿಕ ದ್ವೇಷಕ್ಕಾಗಿ ನಡೆದ ಕೃತ್ಯವಾಗಿದೆ. ಬಂಧಿತ ಆರೋಪಿಯು ಪತ್ರದಲ್ಲಿ ಉಲ್ಲೇಖಿಸಲಾದ ವ್ಯಕ್ತಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎನ್ನುವ ಉದ್ದೇಶದಿಂದ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳೀಯ ಚಚ್‌ರ್‍ ವಿಷಯದಲ್ಲಿ ಜಾನಿ ಮತ್ತು ಕ್ಸೇವಿಯರ್‌ ನಡುವೆ ವೈಷಮ್ಯವಿತ್ತು. ಹೀಗಾಗಿ ಹೇಗಾದರೂ ಮಾಡಿ ಜಾನಿಯನ್ನು ಜೈಲಿಗೆ ಕಳುಹಿಸಬೇಕು ಎಂದು ಸಂಚು ರೂಪಿಸಿದ್ದ ಕ್ಸೇವಿಯರ್‌, ಈ ಕಾರಣಕ್ಕಾಗಿ ಜಾನಿ ಹೆಸರಲ್ಲಿ ಬಿಜೆಪಿಯ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್‌ ಅವರಿಗೆ ಕಳೆದ ವಾರ ಪತ್ರ ಬರೆದಿದ್ದ.