ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಠಿಣ ವಿಧೇಯಕಕ್ಕೆ ಸಂಸತ್ತಿನಲ್ಲಿ ಅನುಮೋದನೆ ದೊರೆತಿದೆ. ಈ ಹೊಸ ಕಾಯ್ದೆಯು ಪರೀಕ್ಷಾ ವ್ಯವಸ್ಥೆಯನ್ನು ಪಾರದರ್ಶಕವಾಗಿಸಲಿದ್ದು, ಅಕ್ರಮ ಎಸಗುವವರನ್ನು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.

ನವದೆಹಲಿ (ಜು.30): ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಂಡಿಸಿದ್ದ 'ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026'ಕ್ಕೆ (Public Examinations Amendment Bill, 2026) ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರ ದೊರೆತಿದೆ. ಲೋಕಸಭೆಯಲ್ಲಿ ಅಂಗೀಕಾರಗೊಂಡ ಮರುದಿನವೇ ಅಂದರೆ ಗುರುವಾರ ರಾಜ್ಯಸಭೆಯಲ್ಲೂ ಈ ವಿಧೇಯಕಕ್ಕೆ ಸಮ್ಮತಿ ಸಿಕ್ಕಿದ್ದು, ಇದೀಗ ಅಧಿಕೃತ ಕಾಯ್ದೆಯಾಗಿ ಜಾರಿಯಾಗಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಕಿತಕ್ಕಾಗಿ ರವಾನಿಸಲಾಗಿದೆ.

ಸಂಸತ್ತಿನಲ್ಲಿ ಈ ಮಹತ್ವದ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದು, "ಈ ಕಾಯ್ದೆಯು ದೇಶದ ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಬಲಶಾಲಿಯನ್ನಾಗಿ ಮತ್ತು ಪಾರದರ್ಶಕವಾಗಿ ಮಾಡಲಿದೆ" ಎಂದು ಪ್ರಶಂಸಿಸಿದ್ದಾರೆ. ಕಳೆದೊಂದು ವಾರದಲ್ಲಿ ನಾಲ್ಕನೇ ಬಾರಿಗೆ ಇನ್ಸ್‌ಟಾಗ್ರಾಮ್‌ನಲ್ಲಿ ಮಧ್ಯರಾತ್ರಿ ರೀಲ್ಸ್‌ ಪೋಸ್ಟ್‌ ಮಾಡುವ ಮೂಲಕ ಜೆನ್‌ಜಿ ಜೊತೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ಮೋದಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮ ತಡೆ ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಕಳೆದ ಒಂದು ವಾರದಲ್ಲೇ ನಾಲ್ಕನೇ ಬಾರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. 'ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026' ದೇಶದ ಲಕ್ಷಾಂತರ ಯುವಕರ ಭವಿಷ್ಯವನ್ನು ಕಾಯಲು ತಂದಿರುವ ಕ್ರಾಂತಿಕಾರಿ ಹೆಜ್ಜೆ ಎಂದು ಅವರು ವೀಡಿಯೋದಲ್ಲಿ ಬಣ್ಣಿಸಿದ್ದಾರೆ.

ಪರೀಕ್ಷಾ ಮಾಫಿಯಾಗೆ ಖಡಕ್ ಎಚ್ಚರಿಕೆ ನೀಡಿದ ಸಚಿವ ಪ್ರಹ್ಲಾದ್ ಜೋಶಿ

ನೂತನವಾಗಿ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಪ್ರಹ್ಲಾದ್ ಜೋಶಿ ಅವರು ವಿಧೇಯಕ ಅಂಗೀಕಾರಗೊಂಡಿರುವುದನ್ನು ಸ್ವಾಗತಿಸಿದ್ದಾರೆ. "ಇದು ಉದ್ಯೋಗಾಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳ ಅರ್ಹತೆಗೆ ತಕ್ಕಂತೆ ನ್ಯಾಯಸಮ್ಮತ, ಪಾರದರ್ಶಕ ಪರೀಕ್ಷೆ ನಡೆಸಲು ನೆರವಾಗುವ ಬೃಹತ್ ಹೆಜ್ಜೆಯಾಗಿದೆ" ಎಂದು ಸಾಮಾಜಿಕ ಜಾಲತಾಣ 'X' ನಲ್ಲಿ ಬರೆದುಕೊಂಡಿದ್ದಾರೆ. "ನಮ್ಮ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲು ಯತ್ನಿಸುವ ಅಥವಾ ಪರೀಕ್ಷಾ ಅಕ್ರಮಗಳಲ್ಲಿ ತೊಡಗುವ ಯಾವುದೇ ವ್ಯಕ್ತಿ ಅಥವಾ ಜಾಲವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಸ್ಪಷ್ಟ ಸಂದೇಶವನ್ನು ಈ ಕಾಯ್ದೆ ನೀಡುತ್ತದೆ" ಎಂದು ಎಚ್ಚರಿಸಿದ್ದಾರೆ.

ಹೊಸ ಕಾಯ್ದೆಯಲ್ಲಿರುವ ಕಠಿಣ ಶಿಕ್ಷೆಗಳು ಮತ್ತು ನಿಯಮಗಳು

5 ರಿಂದ 10 ವರ್ಷ ಜೈಲು ಶಿಕ್ಷೆ: ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಲೀಕ್‌ನಂತಹ ಪ್ರಕರಣಗಳಲ್ಲಿ ಭಾಗಿಯಾದ ವ್ಯಕ್ತಿಗಳಿಗೆ ಪ್ರಸ್ತುತ ಕನಿಷ್ಠ 5 ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಲಕ್ಷ ರೂಪಾಯಿಯವರೆಗೆ ದಂಡ ವಿಧಿಸಲು ಹೊಸ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸಂಘಟಿತ ಅಪರಾಧಗಳಿಗೆ ರೂ 10 ಕೋಟಿ ದಂಡ: ಸಂಘಟಿತ ರೀತಿಯಲ್ಲಿ ಪೇಪರ್ ಲೀಕ್ ದಂಧೆ ನಡೆಸುವ ಮಾಫಿಯಾಗಳಿಗೆ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ಹಾಗೂ 10 ಕೋಟಿ ರೂಪಾಯಿಯವರೆಗೆ ಭಾರಿ ದಂಡ ವಿಧಿಸಲಾಗುತ್ತದೆ.

ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆ: ಈ ಕಾಯ್ದೆಯಡಿಯ ಅಪರಾಧಗಳ ವಿಚಾರಣೆಗಾಗಿ ಪ್ರತಿ ಜಿಲ್ಲೆಯ ಸೆಷನ್ಸ್ ನ್ಯಾಯಾಲಯಗಳನ್ನು 'ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ'ಗಳಾಗಿ (Special Fast-Track Courts) ನೇಮಿಸಲು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಧಿಕಾರ ನೀಡಲಾಗಿದೆ.

3 ತಿಂಗಳಲ್ಲಿ ವಿಚಾರಣೆ ಪೂರ್ಣ: ಚಾರ್ಜ್ ಶೀಟ್ ಸಲ್ಲಿಸಿದ ದಿನದಿಂದ ದಿನನಿತ್ಯ ವಿಚಾರಣೆ (Day-to-day hearing) ನಡೆಸಿ, 3 ತಿಂಗಳ ಒಳಗಾಗಿ ಪ್ರಕರಣದ ತೀರ್ಪು ನೀಡುವುದು ಕಡ್ಡಾಯವಾಗಿದೆ.

ವಿಶೇಷ ಟಾಸ್ಕ್ ಫೋರ್ಸ್ (STF): ದೇಶದ ಯಾವುದೇ ಭಾಗದಲ್ಲಿ ಅಗತ್ಯಬಿದ್ದಾಗ ಪರೀಕ್ಷಾ ಅಕ್ರಮಗಳ ತನಿಖೆ ನಡೆಸಲು ಕೇಂದ್ರ ಸರ್ಕಾರವು 'ವಿಶೇಷ ಟಾಸ್ಕ್ ಫೋರ್ಸ್' ರಚಿಸಲು ಈ ತಿದ್ದುಪಡಿ ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ.

View post on Instagram