ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮಧ್ಯರಾತ್ರಿ ವಿಡಿಯೋ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಈ ವಿಡಿಯೋವನ್ನು ಲೇವಡಿ ಮಾಡಿರುವ ನಟ ಪ್ರಕಾಶ್ ರಾಜ್, 'ಹೆದರಿಬಿಟ್ಟ' ಎಂದು ವ್ಯಂಗ್ಯವಾಡಿದ್ದು, ಈ ಟ್ವೀಟ್ ವೈರಲ್ ಆಗಿದೆ.
ಬೆಂಗಳೂರು: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ದ ಜಿರಳೆ ಜನತಾ ಪಕ್ಷ(ಸಿಜೆಪಿ) ನೇತೃತ್ವದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರವಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಮಧ್ಯರಾತ್ರಿ ಮೂರು ನಿಮಿಷಗಳ ವಿಡಿಯೋ ಮಾಡಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆ ಕೊನೆಯಾಗುತ್ತಾ ಎನ್ನುವ ಕುತೂಹಲ ಜೋರಾಗಿದೆ.
ದೇಶದ ಯುವಕರ ಭವಿಷ್ಯಕ್ಕಿಂತ ನಮಗೆ ಬೇರೇನೂ ಮುಖ್ಯವಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವವರಿಗೆ ತ್ವರಿತವಾಗಿ ಹಾಗೂ ಕಠಿಣ ಶಿಕ್ಷೆ ವಿಧಿಸಲು ಶೀಘ್ರಗತಿ ನ್ಯಾಯಾಲಯ ಸ್ಥಾಪನೆಗೆ ನಿರ್ಧರಿಸಿದ್ದೇವೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು. ಇದೀಗ ಗುರುವಾರ ಮಧ್ಯರಾತ್ರಿ ಪ್ರಧಾನಿ ಮೋದಿ ಸುಮಾರು ಮೂರು ನಿಮಿಷಗಳ ವಿಡಿಯೋ ಮಾಡಿ, ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ದ ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ.
ವಿಡಿಯೋದಲ್ಲಿ ಹೇಳಿದ್ದೇನು?:
ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಶೀಘ್ರಗತಿ ನ್ಯಾಯಾಲಯಗಳ ಸ್ಥಾಪನೆ ಹಾಗೂ ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸುವುದೂ ಸೇರಿದಂತೆ ಕಠೋರ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಮೋದಿ ಸೆಲ್ಫಿ ವಿಡಿಯೋದಲ್ಲಿ ಹೇಳಿದರು.
ಪ್ರಶ್ನೆಪತ್ರಿಕೆ ಸೋರಿಕೆ ಎಂಬುದು ಸಾಧಾರಣ ವಿಷಯವಲ್ಲ ಎಂಬುದು ಗೊತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಇದೊಂದು ನೋವಿನ ಸಂಗತಿ. ಪ್ರಶ್ನೆಪತ್ರಿಕೆ ಸೋರಿಕೆಯಾದ ಬಳಿಕ ಎರಡೂವರೆ ತಿಂಗಳಿನಲ್ಲಿ ಹಲವಾರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ತಪ್ಪು ಮಾಡಿದವರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ವಿದ್ಯಾರ್ಥಿಗಳ ಒಂದಿಡೀ ವರ್ಷ ವ್ಯರ್ಥವಾಗದಂತೆ ನೋಡಿಕೊಳ್ಳುವುದು ನಮ್ಮ ಅತ್ಯಂತ ಮುಖ್ಯ ಜವಾಬ್ದಾರಿಯಾಗಿತ್ತು. ಸರ್ಕಾರ ತನ್ನ ಎಲ್ಲ ಸಾಮರ್ಥ್ಯ ಬಳಸಿ 22 ಲಕ್ಷ ವಿದ್ಯಾರ್ಥಿಗಳು ಅತ್ಯಂತ ಅಲ್ಪಾವಧಿಯಲ್ಲಿ ಮರುಪರೀಕ್ಷೆ ಬರೆಯುವಂತೆ ನೋಡಿಕೊಂಡಿದೆ ಎಂದು ವಿವರಿಸಿದರು.
ಇಲಾಖೆಗಳು ಈ ತಡರಾತ್ರಿ ಹೊತ್ತಿನಲ್ಲಿ ನಿರ್ಣಯ ತಿಳಿಸಿವೆ. ಈ ನಿರ್ಣಯ ಹಾಗೂ ಅದರ ಜತೆಗೆ ಶೀಘ್ರಗತಿ ನ್ಯಾಯಾಲಯ ಮತ್ತು ಕಠಿಣ ಶಿಕ್ಷೆಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ಚರ್ಚಿಸುತ್ತೇವೆ. ಸಂಪುಟ ಸಹೋದ್ಯೋಗಿಗಳ ಅಭಿಪ್ರಾಯ ಪಡೆದು, ಅದನ್ನು ಅಂತಿಮಗೊಳಿಸಲಾಗುತ್ತದೆ. ಸೋಮವಾರದಿಂದ ಆರಂಭವಾಗುವ ಸಂಸತ್ತಿನ ಎರಡನೇ ವಾರದ ಕಲಾಪದಲ್ಲಿ ಅದನ್ನು ಅಂಗೀಕರಿಸಲಾಗುತ್ತದೆ ಎಂದರು.
ಇನ್ನು ಮಧ್ಯರಾತ್ರಿ ಪ್ರಧಾನಿ ಮೋದಿ ಮಾಡಿರುವ ವಿಡಿಯೋ ಕುರಿತಂತೆ ಬಹುಭಾಷಾ ನಟ ಪ್ರಕಾಶ್ ರಾಜ್, ತಮ್ಮ ಎಕ್ಸ್ ಖಾತೆಯಲ್ಲಿ ಅಣಕ ಮಾಡಿದ್ದಾರೆ.


