ನಮ್ಮದು ನಿಜವಾದ ಜಾತ್ಯತೀತತೆ: ಮೋದಿ
- ಅಮೃತ ಕಾಲದಲ್ಲಿ ಯೋಜನೆ ಶೇ.100ರಷ್ಟುಜನರಿಗೆ ತಲುಪುವ ಗುರಿ. ಜಾತಿ, ಮತ, ಪಂಥವೆನ್ನದೇ ಯೋಜನೆಗಳ ಫಲ ಎಲ್ಲರಿಗೂ ಸಿಗಬೇಕು. 2047ಕ್ಕೆ ವಿಕಸಿತ ಭಾರತ ನಿರ್ಮಾಣವೇ ನನ್ನ ಕನಸು: ಪ್ರಧಾನಿ ಪಣ.
ನವದೆಹಲಿ: ‘ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಸರ್ಕಾರದ ಯೋಜನೆಯ ಫಲಗಳು ಎಲ್ಲರಿಗೂ ತಲುಪಬೇಕೆಂಬುದೇ ನಮ್ಮ ಗುರಿ. ಇದೇ ನಿಜವಾದ ಜಾತ್ಯತೀತತೆ. ಈ ಮೂಲಕ 2047ಕ್ಕೆ ವಿಕಸಿತ ಭಾರತ ನಿರ್ಮಾಣ ಮಾಡುವುದು ನನ್ನ ಕನಸು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ‘ಅಮೃತ ಕಾಲದಲ್ಲಿ ಸರ್ಕಾರದ ಯೋಜನೆ ಶೇ.100ರಷ್ಟುಜನರಿಗೆ ತಲುಪುವ ಗುರಿ ಹೊಂದಲಾಗಿದೆ. ಜಾತಿ, ಮತ, ಪಂಥವೆನ್ನದೇ ಯೋಜನೆಗಳ ಫಲ ಎಲ್ಲರಿಗೂ ಸಿಗಬೇಕು. ಇದು ನಿಜವಾದ ಜಾತ್ಯತೀತತೆ’ ಎಂದರು.
ಎಲ್ಲ ರಂಗದಲ್ಲಿ ಕ್ರಾಂತಿ:
‘ದೇಶದ ಇಂದು ರಕ್ಷಣಾ ಕ್ಷೇತ್ರದಲ್ಲಿ ಭಾರತದ ರಫ್ತು 1 ಲಕ್ಷ ಕೋಟಿ ರು.ಗಿಂತ ಹೆಚ್ಚಿದೆ ಮತ್ತು ದೇಶವನ್ನು ’ಆತ್ಮನಿರ್ಭರ’ ಮಾಡಲು ಹೊಸ ಕಂಪನಿಗಳು ಈ ವಿಭಾಗಕ್ಕೆ ಪ್ರವೇಶಿಸುತ್ತಿವೆ. ಭಾರತವು ಮೊದಲು ಮೊಬೈಲ್ ಫೋನುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಇಂದು ದೇಶವು ಮೊಬೈಲ್ ರಫ್ತ್ತು ಮಾಡುವ ಹೆಮ್ಮೆಯ ರಾಷ್ಟ್ರವಾಗಿದೆ’ ಎಂದು ಹೇಳಿದರು.
ಮೋಜಿನಿಂದ ಕನ್ನಡ ಕಲೀರಿ: ಪ್ರಧಾನಿ ಮೋದಿ
‘ವಿರೋಧ ಪಕ್ಷಗಳು ವಿಜ್ಞಾನ ಮತ್ತು ತಂತ್ರಜ್ಞಾನದ ವಿರುದ್ಧವಾಗಿವೆ. ವಿರೋಧ ಪಕ್ಷಗಳು ದೇಶದ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ರಾಜಕೀಯದ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿವೆ. ಆದರೆ ಬಿಜೆಪಿ ಸರ್ಕಾರ ಜನ ಸಾಮಾನ್ಯರ ಅನುಕೂಲಕ್ಕಾಗಿ ತಂತ್ರಜ್ಞಾನ ಬಳಸುತ್ತಿದೆ. ಸರ್ಕಾರ ಮಾರ್ಪಡಿಸಿದ ನೀತಿಯಿಂದ, ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಡ್ರೋನ್‌ಗಳನ್ನು ಬಳಸಲು ಸಾಧ್ಯವಾಗಿದೆ’ ಎಂದರು.
‘ಈ ಹಿಂದೆ ಸಣ್ಣ ಮತ್ತು ಅತಿಸಣ್ಣ ರೈತರ ದನಿ ಕೇಳಿಸಿರಲಿಲ್ಲ, ಈಗ ಬಿಜೆಪಿ ಸರ್ಕಾರ ಅವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣದ ಆಧಾರದ ಮೇಲೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನೀತಿಗಳನ್ನು ರೂಪಿಸುತ್ತಿತ್ತು’ ಎಂದು ಆರೋಪಿಸಿದರು.
‘2024ರವರೆಗೆ ಮೂಲ ಸೌಕರ್ಯಗಳ ಕೊರತೆ ಇತ್ತು’ ಎಂದು ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಮೋದಿ, ‘2014ರವರೆಗೆ ದೇಶದ ಅರ್ಧಕ್ಕಿಂತ ಹೆಚ್ಚು ಜನರು ಬ್ಯಾಂಕಿಂಗ್ ಸೌಲಭ್ಯವಿಲ್ಲದೆ ಇದ್ದರು. ಈಗ ಕಳೆದ 9 ವರ್ಷಗಳಲ್ಲಿ 48 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ನಮ್ಮ ಸರ್ಕಾರವು ಕುಡಿಯುವ ನೀರು ಪೂರೈಕೆಯನ್ನು ವಿಸ್ತರಿಸಿದೆ. ಕಳೆದ 3-4 ವರ್ಷಗಳಲ್ಲಿ 11 ಕೋಟಿ ಮನೆಗಳು ನಿರ್ಮಾಣ ಆಗಿವೆ. 2014ರ ಮೊದಲು ಕೇವಲ 3 ಕೋಟಿ ನಿರ್ಮಾಣ ಆಗಿದ್ದವು. ಎಲ್‌ಪಿಜಿಗೆ ಕಾಯುವ ಸಮಯ ಇಳಿದಿದೆ. ಎಲ್ಲರಿಗೂ ವಿದ್ಯುತ್ ಲಭಿಸುತ್ತಿದೆ’ ಅವರು ಹೇಳಿದರು.
‘ನಿರ್ಧಾರ ತೆಗೆದುಕೊಳ್ಳುವಲ್ಲಿ ಮಹಿಳೆಯರ ಕೊಡುಗೆ ಹೆಚ್ಚಾಗಬೇಕು’ ಎಂದು ಹೇಳಿದ ಪ್ರಧಾನಿ, ‘ಬಿಜೆಪಿ ಸರ್ಕಾರ ಅವರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
ನವಣೆ, ಸಾಮೆ, ಸಜ್ಜು; ಕರ್ನಾಟಕ ಸಿರಿ ಧಾನ್ಯ ಹೆಸರು ಸಾಲಾಗಿ ಹೇಳಿದ ಪ್ರಧಾನಿ ಮೋದಿ!
ನಮ್ಮ ಲಸಿಕೆಯಿಂದ 150 ದೇಶಗಳಿಗೆ ಲಾಭ
ನವದೆಹಲಿ: ಭಾರತದ ಲಸಿಕೆಗಳ ಕುರಿತು ಕೆಲವು ವಿಪಕ್ಷಗಳು ಟೀಕೆ ಮಾಡಿದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಮೋದಿ, ‘ಕೋವಿಡ್ ಕಾಲದಲ್ಲಿ ಸ್ಥಳೀಯ ಲಸಿಕೆಗಳನ್ನು ತಯಾರಿಸಿದ ಭಾರತೀಯ ವಿಜ್ಞಾನಿಗಳನ್ನು ಕೆಟ್ಟಬೆಳಕಿನಲ್ಲಿ ತೋರಿಸಲು ಪ್ರಯತ್ನಿಸಲಾಗಿತ್ತು. ಆದರೆ ನಮ್ಮ ವಿಜ್ಞಾನಿಗಳು ಅನುಮೋದಿಸಿದ ಲಸಿಕೆ 150 ದೇಶಗಳಿಗೆ ಲಾಭ ತಂದಿತು’ ಎಂದು ಹರ್ಷಿಸಿದರು.