ಸಮೃದ್ಧ, ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಪಣ; 43 ನೂತನ ಸಚಿವರಿಗೆ ಪ್ರಧಾನಿ ಮೋದಿ ಕಿವಿಮಾತು!
- ಕೇಂದ್ರ ಸಂಪುಟ ಸೇರಿಕೊಂಡ 43 ಸಚಿವರು
- ನೂತನ ಸಚಿವರ ಜೊತೆ ಮೋದಿ ಮಾತುಕತೆ
- ಸಮೃದ್ಧ ಹಾಗೂ ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಪಣ
ನವದೆಹಲಿ(ಜು.07): ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ 43 ನೂತನ ಸಚಿವರು ಸೇರ್ಪಡೆಯಾಗಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ 43 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದು ಮೋದಿ 2ನೇ ಅವಧಿಯ ಮೊದಲ ಸಂಪುಟ ಪುನಾರಚನೆಯಾಗಿದೆ. ಹೊಸದಾಗಿ ಸಂಪುಟ ಸೇರಿಕೊಂಡ 43 ಸಚಿವರ ಜೊತೆ ಮೋದಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಮೃದ್ಧ ಹಾಗೂ ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಪಣತೊಟ್ಟಿದ್ದಾರೆ.
ಮೋದಿ ಸಂಪುಟ : ಕರ್ನಾಟಕದ ನಾಲ್ವರು ಸೇರಿ 43 ಸಚಿವರಿಂದ ಪ್ರಮಾಣ ವಚನ ಸ್ವೀಕಾರ!
ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ಸಹೋದ್ಯೋಗಿಗಳನ್ನು ನಾನು ಅಭಿನಂದಿಸುತ್ತೇನೆ. ಅವರ ಮಂತ್ರಿ ಅಧಿಕಾರವಧಿಗೆ ಶುಭ ಹಾರೈಸುತ್ತೇನೆ. ಜನರ ಆಕಾಂಕ್ಷೆಗಳನ್ನು ಈಡೇರಿಸಲು ಮತ್ತು ಬಲವಾದ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಲು ನಾವು ಕೆಲಸ ಮಾಡುತ್ತೇವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಮೋದಿ ಸಂಪುಟಕ್ಕೆ ಕೇಂದ್ರ ಸಚಿವರಾಗಿ ಜ್ಯೋತಿರಾದಿತ್ಯ ಸಿಂಧಿಯಾ, ಅನುಪ್ರಿಯಾ ಪಟೇಲ್ ಹಾಗೂ ಅಜಯ್ ಭಟ್ ಅವರನ್ನು ಸೇರಿಸಲಾಗಿದೆ. MoS ಹಣಕಾಸು ಸಚಿವ ಅನುರಾಗ್ ಠಾಕೂರ್ ಅವರಿಗೆ ಉನ್ನತ ಸ್ಥಾನ ನೀಡುವ ಸಾಧ್ಯತೆ ಇದೆ. ಇನ್ನು ಕ್ಯಾಬಿನೆಟ್ ಪುನಾರಚನೆಯಲ್ಲಿ 13 ವಕೀಲರು, 6 ವೈದ್ಯರು, 7 ಮಾಜಿ ಐಎಎಸ್ ಅಧಿಕಾರಿಗಳು, 5 ಎಂಜಿನಿಯರ್ ಸಂಪುಟ ಸೇರಿಕೊಂಡಿದ್ದಾರೆ.