ದೇಶವು ಸೂಕ್ಷ್ಮ ಪರಿಸ್ಥಿತಿಯಲ್ಲಿರುವ ಈ ಸಮಯದಲ್ಲಿ ಜಾಗರೂಕತೆ, ಸಂಸ್ಥೆಗಳ ನಡುವಿನ ಸಮನ್ವಯ ಮತ್ತು ಸ್ಪಷ್ಟ ಸಂವಹನಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ನವದೆಹಲಿ (ಮೇ.09): ಆಪರೇಷನ್‌ ಸಿಂದೂರದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸಚಿವಾಲಯ ಮತ್ತು ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ‘ಸದಾ ಎಚ್ಚರದಿಂದಿದ್ದು, ಸ್ಪಷ್ಟ ಸಂವಹನವನ್ನು ಮುಂದುವರೆಸಿ’ ಎಂದು ಸೂಚಿಸಿದ್ದಾರೆ. ಈ ಮೂಲಕ, ‘ಪಾಕ್‌ ವಿರುದ್ಧದ ಪ್ರತೀಕಾರ ಇನ್ನೂ ಮುಗಿದಿಲ್ಲ’ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ರಕ್ಷಣೆ, ಗೃಹ ವ್ಯವಹಾರ, ವಿದೇಶಾಂಗ ವ್ಯವಹಾರ, ಮಾಹಿತಿ ಮತ್ತು ಪ್ರಸಾರ, ವಿದ್ಯುತ್, ಆರೋಗ್ಯ ಮತ್ತು ದೂರಸಂಪರ್ಕ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದ ಸಭೆಯಲ್ಲಿ, ‘ದೇಶವು ಸೂಕ್ಷ್ಮ ಪರಿಸ್ಥಿತಿಯಲ್ಲಿರುವ ಈ ಸಮಯದಲ್ಲಿ ಜಾಗರೂಕತೆ, ಸಂಸ್ಥೆಗಳ ನಡುವಿನ ಸಮನ್ವಯ ಮತ್ತು ಸ್ಪಷ್ಟ ಸಂವಹನಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ರಾಷ್ಟ್ರೀಯ ಭದ್ರತೆ, ಕಾರ್ಯಾಚರಣೆಯ ಸನ್ನದ್ಧತೆ ಮತ್ತು ನಾಗರಿಕ ಸುರಕ್ಷತೆಗೆ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಅಂತೆಯೇ, ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ಸಚಿವಾಲಯಗಳ ಯೋಜನೆ ಮತ್ತು ಸಿದ್ಧತೆಗಳನ್ನು ಪರಿಶೀಲಿಸಿದರು’ ಎಂದು ಪ್ರಧಾನಿ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಂತೆಯೇ, ‘ಕಾರ್ಯದರ್ಶಿಗಳಿಗೆ ತಮ್ಮ ಸಚಿವಾಲಯದ ಕಾರ್ಯಾಚರಣೆಗಳ ಸಮಗ್ರ ಪರಿಶೀಲನೆ ಕೈಗೊಂಡು ಅಗತ್ಯ ವ್ಯವಸ್ಥೆಗಳ ಪರಿಪೂರ್ಣ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ. ಜತೆಗೆ, ಸಿದ್ಧತೆ, ತುರ್ತು ಪ್ರತಿಕ್ರಿಯೆ ಮತ್ತು ಆಂತರಿಕ ಸಂವಹನ ಶಿಷ್ಟಾಚಾರಗಳ ಮೇಲೆಯೂ ವಿಶೇಷ ಗಮನ ಹರಿಸಲು ನಿರ್ದೇಶಿಸಲಾಗಿದೆ. ಇದಕ್ಕೆ ಕಾರ್ಯದರ್ಶಿಗಳೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದೂ ತಿಳಿಸಲಾಗಿದೆ.

ಆಪರೇಷನ್‌ ಸಿಂದೂರ ಹೆಮ್ಮೆಯ ಕ್ಷಣ: ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ಬಣ್ಣನೆ

ಸಂಭ್ರಮಿಸಿದ ಭಾರತೀಯರು: ಪಹಲ್ಗಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಭಾರತೀಯರು ಸಂಭ್ರಮಿಸಿದ್ದು, ಜಾಲತಾಣಗಳಲ್ಲಿ ದೇಶ ಭಕ್ತಿಯ ಸಂದೇಶಗಳು ತುಂಬಿ ಹೋಗಿದ್ದು, ನೆಟ್ಟಿಗರು ‘ಜೈ ಹಿಂದ್‌’, ‘ನಾರಿ ಶಕ್ತಿ’ ಎನ್ನುತ್ತಾ ಸೇನೆಯನ್ನು ಕೊಂಡಾಡುತ್ತಿದ್ದಾರೆ. ಎಕ್ಸ್‌ನಲ್ಲಿ ‘ಆಪರೇಷನ್ ಸಿಂಧೂರ’, ‘ಭಯೋತ್ಪಾದಕತೆ’, ‘ಕರ್ನಲ್ ಸೋಫಿಯಾ ಖುರೇಷಿ’, ‘ನಾರಿ ಶಕ್ತಿ’ ಹೆಸರಿನಲ್ಲಿ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್‌ ಸೃಷ್ಟಿಸಿವೆ. ‘ ಆಪರೇಷನ್ ಸಿಂಧೂರ ಎಂಬ ಹೆಸರು, ಇಬ್ಬರು ಮಹಿಳಾ ಅಧಿಕಾರಿಗಳ ಸುದ್ದಿಗೋಷ್ಠಿ ಉತ್ತಮ ವಿಷಯ’ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ‘ ನ್ಯಾಯ ನೆರವೇರಿದೆ ಜೈ ಹಿಂದ್‌’ ಎಂದು ಸಂಭ್ರಮಿಸಿದ್ದಾರೆ.