Asianet Suvarna News Asianet Suvarna News

15 ವರ್ಷಗಳಲ್ಲಿ ನಮ್ಮ ದೇಶದಲ್ಲಾದ ಬದಲಾವಣೆ ಹಿಂದೆಂದೂ ಕೇಳರಿಯದಂಥದ್ದು!

ಹತ್ತಾರು ಏರ್ ಪೋರ್ಟ್‌ಗಳು, ನೂರಾರು ಹೊಸಾ ಬ್ರಿಡ್ಜ್‌ಗಳು, ಟನಲ್‌ಗಳು, ಬಿಸಿನೆಸ್‌ಗಳು ಒಂದೆ, ಎರಡೆ? ಇಷ್ಟಾದರೂ ಮೋದಿ ಹಸಿವು ತಣಿದಿಲ್ಲ, ಮೂರನೆ ಟರ್ಮಿಗೆ ಭಾರತ ಸಾವಿರಾರು ವರ್ಷ ನೆನಪಲ್ಲಿರಿಸಿಕೊಳ್ಳುವಂಥದ್ದನ್ನು ಮಾಡುವ ಹುಮ್ಮಸ್ಸು.

PM Modi built a strong India in the last 15 years written by MH Geervani rav
Author
First Published May 27, 2024, 12:26 PM IST

- ಗೀರ್ವಾಣಿ, ಬೆಂಗಳೂರು

ಹತ್ತಾರು ಏರ್ ಪೋರ್ಟ್‌ಗಳು, ನೂರಾರು ಹೊಸಾ ಬ್ರಿಡ್ಜ್‌ಗಳು, ಟನಲ್‌ಗಳು, ಬಿಸಿನೆಸ್‌ಗಳು ಒಂದೆ, ಎರಡೆ? ಇಷ್ಟಾದರೂ ಮೋದಿ ಹಸಿವು ತಣಿದಿಲ್ಲ, ಮೂರನೆ ಟರ್ಮಿಗೆ ಭಾರತ ಸಾವಿರಾರು ವರ್ಷ ನೆನಪಲ್ಲಿರಿಸಿಕೊಳ್ಳುವಂಥದ್ದನ್ನು ಮಾಡುವ ಹುಮ್ಮಸ್ಸು.

ಪಾಕಿಸ್ತಾನದ ಕಾನೂನು ತಜ್ಞರೊಬ್ಬರು ಅಲ್ಲಿನ ಸಂಸತ್ತಿನಲ್ಲಿ ಭಾರತವನ್ನು ಮನಸಾರೆ ಹೊಗಳಿದ್ದಾರೆ. ಭಾರತೀಯರು ಮಲ್ಟಿ ನ್ಯಾಶನಲ್ ಕಂಪನಿಗಳಲ್ಲಿ ಒಳ್ಳೊಳ್ಳೆ ಹುದ್ದೆಯಲ್ಲಿದ್ದಾರೆ. ಆದರೆ ನಮ್ಮಲ್ಲಿ ಮಾತ್ರ ಇನ್ನೂ ಅನಕ್ಷರತೆ ತುಂಬಿ ತುಳಕ್ತಾ ಇದೆ ಅಂತ. ಉಳಿದ ಜಗತ್ತಿನವರೆಲ್ಲ ಚಂದ್ರನ ಮೇಲೆ ಹೋಗಿ ಬರುತ್ತಿದ್ದಾರೆ‌, ಆದರೆ ನಮ್ಮ‌ಮಕ್ಕಳು ಇನ್ನೂ ತೆರೆದ ಚರಂಡಿಗೆ ಬಿದ್ದು ಸಾವನ್ನಪ್ಪುತ್ತಿವೆ... ಹೀಗಂತ ಹೇಳಿ ಭಾರತದ ಇಂದಿನ ಪ್ರಗತಿಯನ್ನು ಪ್ರಶಂಸಿಸಿದ್ದಾರೆ.

ಕಳೆದ ಹದಿನೈದು ವರ್ಷಗಳಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲೂ ಸುಸ್ಥಿರ ಅಭಿವೃದ್ಧಿ ಸಾಧಿಸಿರುವುದನ್ನು ನಾವೇ ನೋಡುತ್ತಿದ್ದೇವೆ. ವಿಮಾನಯಾನ, ಬಾಹ್ಯಾಕಾಶ, ಮೂಲಭೂತ ಸೌಕರ್ಯ, ಪುಣ್ಯ ಕ್ಷೇತ್ರಗಳು, ವಿದೇಶಾಂಗ ನೀತಿ, ಕೃಷಿ ನೀತಿ, ಎಲ್ಲಿಲ್ಲ ಅಭಿವೃದ್ಧಿ?

ಪಾಕಿಸ್ತಾನದ ತಾಕತ್ತನ್ನು ನಾನೇ ನೋಡ್ಕೊಂಡು ಬಂದಿದ್ದೇನೆ: ಕಾಂಗ್ರೆಸ್‌ಗೆ ತಿವಿದ ಪ್ರಧಾನಿ ನರೇಂದ್ರ ಮೋದಿ

ಒಂದು ಕಾಲವಿತ್ತು, ಭಾರತದ ವಿದೇಶಾಂಗ ನೀತಿ ಹೇಗಿತ್ತು ಅಂದ್ರೆ ಪಾಕಿಸ್ತಾನದವರು ಗಡಿಯೊಳಗೆ ಬಂದು ನಮ್ಮವರ ಕಗ್ಗೊಲೆ ಮಾಡಿ ಹೋದ್ರೂ ವಿಶ್ವಸಂಸ್ಥೆ ಎದುರು ಮಂಡಿ ಊರುತ್ತಿತ್ತು ಭಾರತ. ತನ್ನ ದೇಶದ ಆಂತರಿಕ ವಿಚಾರವನ್ನು ತಾನು ಮ್ಯಾನೇಜ್ ಮಾಡಿಕೊಳ್ಳುವೆ ಎನ್ನುವ ಛಾತಿ ಇರಲಿಲ್ಲ. ಅಮೆರಿಕ ನಮಗೆ ಬುದ್ಧಿ ಹೇಳಲು ಬರುತ್ತಿತ್ತು. ಯುರೋಪ್ ದೇಶಗಳು ನಮ್ಮ ಕಂಡರೆ ಗುರ್ ಎನ್ನುತ್ತಿದ್ದವು. ಎಲ್ಲರಿಗೂ ಹೆದರಿಕೊಂಡು ಅಲಿಪ್ತ ನೀತಿ ಎಂದು ಬಾಲಮುದುರಿ ಕುಳಿತಿತ್ತು ಭಾರ ಆದರೆ ಇವತ್ತು ಪಾಶ್ಚಾತ್ಯ ದೇಶಗಳು ಛಾನ್ಸ್ ಸಿಕ್ಕಿದಾಗೆಲ್ಲ ಭಾರತವನ್ನು ಹೊಗಳುತ್ತಿವೆ. ಭಾರತವೇ ಮುಂದಿನ ಸೂಪರ್ ಪವರ್ ಅನ್ನುತ್ತಿವೆ, ಅಮೆರಿಕ ಪಾಕಿಸ್ತಾನವನ್ನು ಮೂಲೆಗುಂಪು ಮಾಡಿ ಭಾರತವನ್ನು ಆಲಂಗಿಸಿಕೊಂಡಿದೆ. ಕಾರಣ ಅವರಿಗೆಲ್ಲ ಭಾರತವನ್ನು ಈಗ ಮೊದಲಿನಂತೆ ಅಲಕ್ಷಿಸುವಂತಿಲ್ಲ ಎಂಬುದು ಗೊತ್ತಾಗಿದೆ. ಏಕೆಂದರೆ ಭಾರತಕ್ಕೆ ಈಗ ಮೋದಿ ನಾಯಕತ್ವ ಇದೆ.

ಕಣ್ಮುಂದೆಯೇ ಇದೆ ಬದಲಾವಣೆ

ಹೆಚ್ಚಲ್ಲ ೨೦ ವರ್ಷಗಳ ಹಿಂದೆ ದೇಶದ ರೈಲ್ವೆ ಸ್ಷೇಷನ್‌ಗಳನ್ನು ನೀವು ನೋಡಿರಬಹುದು. ಹಳೆ ಕಾಲದ ತುಕ್ಕು ಹಿಡಿದ ಸರಳುಗಳು, ಗಬ್ಬು ನಾರುತಿದ್ದ ಪ್ಲಾಟ್ ಫಾರ್ಮ್‌ಗಳು, ಟೈಮಿಗೆ ಬಾರದ ರೈಲುಗಳು, ದರೋಡೆಗಳು, ಅಪಘಾತಗಳು, ಪ್ರಯಾಣಿಕರಿಗೆ ಸ್ಪಂದಿಸದ ಸಿಬ್ಬಂದಿಗಳು, ಒಟ್ಟಿನಲ್ಲಿ ಇಡೀ ವ್ಯವಸ್ಥೆಯೇ ಜಿಡ್ಡು ಹಿಡಿದು ಹೋಗಿತ್ತು.

ಆದರೆ ಇವತ್ತು ಇದು ನಮ್ ದೇಶದ ರೈಲೇನಾ ಎಂಬಷ್ಟು ಬದಲಾವಣೆ. ವರ್ಲ್ಡ್‌ ಕ್ಲಾಸ್ ಲೆವೆಲ್‌ನ ವಂದೇ ಭಾರತ್ ರೈಲುಗಳು, ಏರ್ ಪೋರ್ಟ್‌ಗೆ ಸಡ್ಡು ಹೊಡೆಯುವ ರೈಲು ನಿಲ್ದಾಣಗಳು, ಇಲ್ವೇ ಇಲ್ಲ ಎಂಬಷ್ಟು ಕಡಿಮೆಯಾದ ಅಪಘಾತಗಳು, ಸಮಯಪಾಲನೆ, ಸ್ವಚ್ಛತೆ, ಒಂದೇ ಒಂದು ಟ್ವೀಟ್‌ಗೆ ಸ್ಪಂದಿಸುವ ರೈಲ್ವೆ ಮಿನಿಸ್ಟರ್, ಇನ್ನೆರಡೇ ವರ್ಷದಲ್ಲಿ ಮುಂಬೈ ಟು ಅಹಮದಾಬಾದ್ ಓಡಲಿರುವ ಬುಲೆಟ್ ಟ್ರೇನ ಮೋದಿ ಏನ್ ಮಾಡಿದ್ದಾರೆ ಎಂದು ಕೊಂಕು ತೆಗೆಯುವವರು ಒಮ್ಮೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿ ಬರಲಿ. ಮತ್ತೆ ಮಾತಾಡಲ್ಲ.

ಕಾಂಗ್ರೆಸ್‌ ಆಡಳಿತದಲ್ಲಿ...

ಅರವತ್ತು ವರ್ಷ ದೇಶವನ್ನಾಳಿದ ಕಾಂಗ್ರೆಸ್ ಈ ದೇಶದ ಬಹುಸಂಖ್ಯಾತ ಹಿಂದೂಗಳನ್ನು ಮನಸಿಗೆ ಕಂಡಂತೆ ನಡೆಸಿಕೊಂಡಿತ್ತು. ಹಿಂದೂ ಪುಣ್ಯಕ್ಷೇತ್ರಗಳು, ಧಾರ್ಮಿಕ ಸ್ಥಳಗಳನ್ನು ಇನ್ನಿಲ್ಲದಂತೆ ಕಡೆಗಣಿಸಿತ್ತು. ಎಷ್ಟರಮಟ್ಟಿಗೆ ಎಂದರೆ, ಹಿಂದುಗಳೇ ತಮ್ಮ ಇತಿಹಾಸ, ಅಸ್ತಿತ್ವ, ಅಸ್ಮಿತೆಯನ್ನು ಮರೆಯುವಷ್ಟು. ಅವರ ಪಾಲಿಗೆ ರಾಮಮಂದಿರ ಎಂದರೆ ವಿವಾದಿತ ಸ್ಥಳ. ಕಾಶಿ ಎಂದರೆ ಕೊಳಕು ತುಂಬಿದ ಕಿಷ್ಕಿಂದೆ. ಕೇದರನಾಥ ಅಭಿವೃದ್ಧಿಯನ್ನೇ ಕಾಣದ ದೂರದ ಜಾಗ.

ಆದರೆ ಇವತ್ತು ಅವೆಲ್ಲ ನಿರ್ಮಾಣವಾಗಿ, ಅಭಿವೃದ್ಧಿ ಹೊಂದಿ, ಕೊನೆಗೆ ಅರಬ್ಬರ ನೆಲದಲ್ಲೂ ಹಿಂದೂ ದೇಗುಲ ತಲೆಯೆತ್ತಿದೆ. ಮೋದಿ ಅವರೇ ಸ್ವತಃ ಹೋಗಿ ಉದ್ಘಾಟಿಸಿ ಬಂದಿದ್ದಾರೆ. ಕೇವಲ ಫ್ರೀ ಕೊಡುವುದೊಂದೇ ವಿಕಾಸವೆಂದು ನಂಬಿಸುವ ಕಾಂಗ್ರೆಸ್‌ಗೆ ದೇಶದ ಈ ಬಗೆಯ ಬೆಳವಣಿಗೆ ಕಂಡು ಸಹಿಸಲಾಗುತ್ತಿಲ್ಲ.

ಆರ್ಥಿಕತೆಯಲ್ಲಿ ಭಾರಿ ಪ್ರಗತಿ

90 ರ ದಶಕದಲ್ಲಿ ಗುಜರಾತ್‌ನ ಭೂಕಂಪ ಸಮಯದಲ್ಲಿ ಕಚ್ ಹಾಗೂ ಬುಜ್ ಪ್ರದೇಶಗಳು ಸಂಪೂರ್ಣ ನೆಲಸಮವಾಗಿದ್ದವು. ಆಗ ಗುಜರಾತಿನ ಮುಖ್ಯಮಂತ್ರಿ ಆಗಿದ್ದವರು ಮೋದಿಜಿ. ಅವೆರಡೂ ಪ್ರದೇಶವನ್ನು ಪುನರ್ ನಿರ್ಮಾಣ ಮಾಡಿ ಮತ್ತೆ ಪುಟಿದೆದ್ದು ನಿಂತ ರೀತಿ ಅನನ್ಯ. ಆಗಲೇ ಈ ವಿಚಾರ ಸುದ್ದಿಯಾಗಿತ್ತು.

ಸವಾಲುಗಳನ್ನು ಎದುರಿಸುವುದು ಹಾಗೂ ನಿಭಾಯಿಸುವುದು ಮೋದಿ ಅವರಿಗೆ ಈಗಂತೂ ಕರತಲಾಮಲಕ. ದೇಶಕ್ಕೆ ಕೊರೋನಾ ಲಗ್ಗೆ ಇಡುತ್ತಿದ್ದಂತೆ ಇನ್ನು ಮೋದಿ ಕತೆ ಮುಗಿಯಿತು ಅಂದುಕೊಂಡವರು ಹಲವರು. ಅಮೆರಿಕದಂತಹ ಅಮೆರಿಕವೇ ಪತರುಗುಟ್ಟಿ ಹೋಗಿರುವಾಗ ಮೋದಿ ಏನೂ ಮಾಡೋಕಾಗಲ್ಲ ಎಂದು ಕೇಕೇ ಹಾಕಿದ್ದರು ಅನೇಕ ಮಂದಿ.

ಕೊರೋನಾ ಮಾರಿಯ ಅಟಾಟೋಪದ ನಡುವೆಯೂ ಜಗ್ಗಲಿಲ್ಲ ಭಾರತ. ಲಾಕ್ ಡೌನ್, ಜನರ ಬಳಿ ಕಾಸು ಓಡಾಡುತ್ತಿಲ್ಲ, ಒಂದು ಕಡೆ ಸಾಲು ಸಾಲು ಮರಣಗಳು, ಇದೆಲ್ಲದರ ನಡುವೆ 80 ಕೋಟಿ ಜನರಿಗೆ ಉಚಿತ ಪಡಿತರ ಕೊಡಲು ನಿಂತು ಬಿಟ್ಟಿತು ಮೋದಿ ಟೀಮ್. ಸಾಲದೆಂಬಂತೆ ದೇಶದ ಎಲ್ಲರಿಗೂ ಉಚಿತ ವ್ಯಾಕ್ಸಿನ್ ಬೇರೆ ಕೊಟ್ಟು ಕೊರೋನಾದಿಂದ ಮನೋಬಲ ಕುಗ್ಗದಂತೆ ನೋಡಿಕೊಳ್ಳಲಾಯಿತು.

ನೋಡ ನೋಡುತ್ತಿದ್ದಂತೆ ಕೊರೋನಾ ನಂತರ ಭಾರತ ಹೇಗೆ ಪುಟಿದು ನಿಂತಿತು ಎಂದರೆ ಜಗತ್ತಿನ ಐದನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿತು.

ಹತ್ತಾರು ಏರ್ ಪೋರ್ಟ್‌ಗಳು, ನೂರಾರು ಹೊಸಾ ಬ್ರಿಡ್ಜ್‌ಗಳು, ಟನಲ್‌ಗಳು, ಬಿಸಿನೆಸ್‌ಗಳು ಒಂದೆ, ಎರಡೆ? ಇಷ್ಟಾದರೂ ನಮ್ಮ ಪಿಎಂ ಹಸಿವು ತಣಿದಿಲ್ಲ, ಮೂರನೆ ಟರ್ಮಿಗೆ ಭಾರತ ಸಾವಿರಾರು ವರ್ಷ ನೆನಪಲ್ಲಿರಿಸಿಕೊಳ್ಳುವಂಥದ್ದನ್ನು ಮಾಡುವ ಹುಮ್ಮಸ್ಸು.

ಟೀಕಾಕಾರರಿಗೂ ಸೌಕರ್ಯಗಳು

ಯಾವತ್ತೂ ಬಗೆಹರಿಯದ ಸಮಸ್ಯೆಯಾಗಿದ್ದ ಕಾಶ್ಮೀರವನ್ನು ದೇಶದ ಮುಖ್ಯವಾಹಿನಿಗೆ ತಂದರು. ಇದಂತೂ ತಲೆ ತಲೆಮಾರುಗಳು ನೆನೆಸಿಕೊಳ್ಳುವಂಥದ್ದು. ರಕ್ತ ಚರಿತ್ರೆ ಬರೆದ ನೆಲದಲ್ಲೀಗ ತಣ್ಣನೆ ಹಿಮ ಹಾಗೂ ಹೂಗಳು ಅರಳುತ್ತಿವೆ. ಲಕ್ಷಣ ನೋಡಿದರೆ ಕೆಲವೇ ದಿನಗಳಲ್ಲಿ ಪಿಒಕೆ ತಾನಾಗೇ ಬಂದು ಭಾರತವನ್ನು ಸೇರಿಕೊಳ್ಳಲಿದೆ. ಇದು ಭಾರತಕ್ಕೆ ಮೋದಿ ಅವರು ಕೊಟ್ಟ ಪವರ್!

 

ಬಿಜೆಪಿಗೆ 305 ಸ್ಥಾನ: ಅಮೆರಿಕ ರಾಜಕೀಯ ತಜ್ಞ ಬ್ರೆಮ್ಮರ್ ಭವಿಷ್ಯ !

ಮೂರನೆ ಟರ್ಮಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಮೊದಲ 100 ದಿನಗಳಲ್ಲಿ ಮಹತ್ತರ ತೀರ್ಮಾನಗಳು ಹೊರಬೀಳಲಿವೆ. ಈಗಾಗಲೆ ಅದರ ಪ್ಲಾನ್ ಕೂಡ ಸಿದ್ಧವಾಗಿದೆ. ನಿಜಕ್ಕೂ ಈಗ ಭಾರತೀಯರು ಒಳ್ಳೆ ದಿನಗಳನ್ನು ಕಾಣುತ್ತಿದ್ದಾರೆ. ಸದಾ ಅಚ್ಛೇ ದಿನ್ ಬಗ್ಗೆ ಪ್ರಶ್ನಿಸುವವರು ಉತ್ತಮವಾದ ಹೈವೆಗಳಲ್ಲಿ ಓಡಾಡುತ್ತಿದ್ದಾರೆ. ಏರ್ ಪೋರ್ಟುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಸ್ಪೀಡಾದ ಇಂಟರ್ ನೆಟ್ ಎಂಜಾಯ್ ಮಾಡುತ್ತಿದ್ದಾರೆ. ವಿದೇಶಗಳಲ್ಲಿ ಗೌರವ ಪಡೆಯುತ್ತಿದ್ದಾರೆ. ಇಷ್ಟೆಲ್ಲ ಆದರೂ ದೇಶದ್ರೋಹಿ ಬುದ್ಧಿಯನ್ನು ಮಾತ್ರ ಬಿಡುತ್ತಿಲ್ಲ.

ಅದೇನೇ ಇದ್ದರೂ ಇಂತವರ ಮರೆಮಾಚುವಷ್ಟು ದೇಶಾಭಿಮಾನಿಗಳು ಈಗ ಹುಟ್ಟಿಕೊಂಡಿದ್ದಾರೆ. ದೇಶ ಕಟ್ಟುವ ಕೆಲಸದಲ್ಲಿ ಮೋದಿ ಅವರೊಂದಿಗೆ ನಿಂತಿದ್ದಾರೆ. ಅಂತಹವರ ಇಚ್ಛಾಶಕ್ತಿ ಎದುರು ದೇಶದ್ರೋಹಿಗಳ ಕುತಂತ್ರಗಳು ನಿಲ್ಲಲಾರವು. ಇಷ್ಟು ವರ್ಷದಲ್ಲಿ ಗಂಗೆಯಲ್ಲಿ ಸಾಕಷ್ಟು ನೀರು ಹರಿದಿದೆ. ಕಾಶ್ಮೀರದಲ್ಲಿ ಎಣೆಯಿಲ್ಲದಷ್ಟು ರಕ್ತ ಬಸಿದಿದೆ. ಲೆಕ್ಕವಿಲ್ಲದಷ್ಟು ಸೈನಿಕರ ಬಲಿದಾನವಾಗಿದೆ.

Latest Videos
Follow Us:
Download App:
  • android
  • ios