ಪ್ರಧಾನಿ ಮೋದಿ ಒಬಿಸಿ ಜಾತಿಯಲ್ಲಿ ಹುಟ್ಟಿಲ್ಲ. ಮೋದಿ ನಮಗೆಲ್ಲಾ ಸುಳ್ಳು ಹೇಳಿದ್ದಾರೆ. ಸಾಮಾನ್ಯ ಕೆಟಗರಿಯಲ್ಲಿ ಹುಟ್ಟಿದ ಮೋದಿ ತಮೆಗೆ ತಾವೇ ಹಿಂದುಳಿದ ವರ್ಗದ ಜಾತಿ ಪ್ರಮಾಣಪತ್ರ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಹೊಸ ಬಾಂಬ್ ಸಿಡಿಸಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟ್ರೋಲ್ ಎದುರಾಗಿದೆ. ಪಾರ್ಸಿ ತಂದೆ, ಕ್ಯಾಥೋಲಿಕ್ ತಾಯಿಯಿಂದ ದತ್ತಾತ್ರೆಯ ಕೌಲ್ ಬ್ರಾಹ್ಮಣ ರಾಹುಲ್ ಹೇಗಾದ ಎಂದು ಪ್ರಶ್ನಿಸಿದ್ದಾರೆ.
ಜಾರ್ಸುಗುಡ(ಫೆ.08) ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಒಬಿಸಿ ಜಾತಿ ವಿಚಾರವನ್ನು ಕೆದಕಿದ್ದಾರೆ. ಸರ್ಕಾರದಲ್ಲಿ ಒಬಿಸಿ ಅಧಿಕಾರಿಗಳ ಕುರಿತು ಪ್ರಶ್ನಿಸಿ ಕೋಲಾಹಲ ಸೃಷ್ಟಿಸಿದ್ದ ರಾಹುಲ್ ಗಾಂಧಿ, ಇದೀಗ ಪ್ರಧಾನಿ ಮೋದಿ ಜಾತಿ ಕೆದಕಿ ಟ್ರೋಲ್ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಒಬಿಸಿ(ಹಿಂದುಳಿದ ವರ್ಗ) ಜಾತಿಯಲ್ಲಿ ಹುಟ್ಟಿಲ್ಲ. ಮೋದಿ ತಮ್ಮ ಜಾತಿ ಬಗ್ಗೆ ಸುಳ್ಳು ಹೇಳಿದ್ದಾರೆ. ಪ್ರಧಾನಿ ಮೋದಿ ಸಾಮಾನ್ಯ ಕೆಟಗರಿ ಜಾತಿಯಲ್ಲಿ ಹುಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ಹೊಸ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಆರೋಪಗಳಿಗೆ ಅಷ್ಟೇ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾರ್ಸಿ ತಂದೆ ಹಾಗೂ ಕ್ಯಾಥೋಲಿಕ್ ತಾಯಿ ಪೋಷಕರಿಂದ ರಾಹುಲ್ ಗಾಂಧಿ ದತ್ತಾತ್ರೆಯ ಕೌಲ್ ಬ್ರಾಹ್ಮಣ ಹೇಗಾಯ್ತು ಎಂದು ಹಲವರು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆ ಒಡಿಶಾದ ಜಾರ್ಸುಗುಡ ತಲುಪಿದೆ. ಈ ವೇಳೆ ಅಪಾರ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹಸಿ ಹಸಿ ಸುಳ್ಳು ಹೇಳಿ ಜಾತಿ ಮರೆ ಮಾಚಿದ್ದಾರೆ ಎಂದಿದ್ದಾರೆ. ಮೋದಿ ಗುಜರಾತ್‌ನಲ್ಲಿರುವ ತೆಲಿ ಜಾತಿಯಲ್ಲಿ ಹುಟ್ಟಿದ್ದಾರೆ. ಅವರು ಒಬಿಸಿ ಜಾತಿಯಲ್ಲಿ ಹುಟ್ಟಿಲ್ಲ. 2000ನೇ ಇಸವಿಯಲ್ಲಿ ಗುಜರಾತ್‌ನ ಬಿಜೆಪಿ ಸರ್ಕಾರ ತೆಲಿ ಸಮುದಾಯಕ್ಕೆ ಒಬಿಸಿ ಜಾತಿ ಪ್ರಮಾಣ ಪತ್ರ ನೀಡಿತು. ಹೀಗಾಗಿ ಖುದ್ದು ಮೋದಿಯೇ ತಮಗೆ ಒಬಿಸಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ ವಯನಾಡು ಕ್ಷೇತ್ರ ಕೇಳಿದ ಮುಸ್ಲಿಂ ಲೀಗ್, ಮೈತ್ರಿಯಲ್ಲಿ ಸೀಟು ಹಂಚಿಕೆ ಕಸರತ್ತು!
ಪ್ರಧಾನಿ ಮೋದಿ ಯಾವತ್ತೂ ಜಾತಿಗಣತಿಯನ್ನು ಒಪ್ಪಿಕೊಳ್ಳುವುದಿಲ್ಲ. ಕಾರಣ ಮೋದಿ ಹಿಂದುಳಿದ ವರ್ಗದಲ್ಲಿ ಹುಟ್ಟಿಲ್ಲ. ಇದೇ ಕಾರಣದಿಂದ ಮೋದಿ ಜಾತಿಗಣತಿಯನ್ನು ವಿರೋಧಿಸುತ್ತಲೇ ಬಂದಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿ ಜಾತಿ ವಿಚಾರ ಮತ್ತೆ ಕೆದಕಿ ಆಂದೋಲನ ಸೃಷ್ಟಿಸಲು ಯತ್ನಿಸಿರುವುದು ಟೀಕೆಗೆ ಗುರಿಯಾಗಿದೆ.
ರಾಹುಲ್ ಗಾಂಧಿ ಒಬಿಸಿ ಹೇಳಿಕೆ ನೀಡುತ್ತಿದ್ದಂತೆ, ಸ್ವತಃ ಕಾಶ್ಮೀರಿ ಬ್ರಾಹ್ಮಣ(ದತ್ತಾತ್ರೆಯ ಕೌಲ್ ಬ್ರಾಹ್ಮಣ) ಎಂದು ಘೋಷಿಸಿರುವ ರಾಹುಲ್ ಗಾಂಧಿ ಬ್ರಾಹ್ಮಣ ಬಿಡಿ ಹಿಂದು ಆಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಪಾರ್ಸಿ ತಂದೆ ಹಾಗೂ ಕ್ಯಾಥೋಲಿಕ್ ತಾಯಿ ಪೋಷಕರಿಂದ ರಾಹುಲ್ ಗಾಂಧಿ ದತ್ತಾತ್ರೆಯ ಕೌಲ್ ಬ್ರಾಹಣ ಆಗಿದ್ದು ಹೇಗೆ? ರಾಹುಲ್ ಗಾಂಧಿ ಹಿಂದೂವೇ ಅಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಹೋದಲ್ಲೆಲ್ಲಾ ಸೋಲು, ರಾಹುಲ್ ಗಾಂಧಿ ಬಿಜೆಪಿಯ ಸ್ಟಾರ್ ಪ್ರಚಾರಕ ಎಂದ ಸಿಎಂ ಹಿಮಂತ ಬಿಸ್ವಾ!
ಕಾಂಗ್ರೆಸ್ ಜಾತಿ ಒಡೆಯುವ, ಜಾತಿ ಪ್ರಸ್ತಾಪಿಸಿ ರಾಜಕೀಯ ಮಾಡುವ ಹಳೇ ಪರಿಪಾಠ ಬಿಟ್ಟು ಬೇರೆ ಏನಾದರು ವಿಷಯ ಎತ್ತಿಕೊಳ್ಳಲಿ. ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲಿ. ಜನರೇ ಜಾತಿಯಿಂದ ದೂರವಾಗುತ್ತಿದ್ದಾರೆ. ಆದರೆ ಕಾಂಗ್ರೆಸ್ ಜಾತಿಯಲ್ಲೇ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಕಿವಿಮಾತು ಹೇಳಿದ್ದಾರೆ.
