Asianet Suvarna News Asianet Suvarna News

ಬಜೆಟ್‌ ಅನ್ಯಾಯ ಪ್ರಶ್ನಿಸದ ಬಿಜೆಪಿಯಿಂದ ಮುಡಾ ಪ್ರತಿಭಟನೆ: ಸಿಎಂ ಸಿದ್ದರಾಮಯ್ಯ ಕಿಡಿ

‘ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಕರ್ನಾಟಕದ ಹೆಸರಿನ ಪ್ರಸ್ತಾಪವೇ ಇಲ್ಲ. ಹಲವು ವರ್ಷಗಳಿಂದ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಹೀಗಿದ್ದರೂ ಬಾಯಿಬಿಡದ ನಾಡದ್ರೋಹಿ ಬಿಜೆಪಿ ಸಂಸದರು ಇದೀಗ ಮುಡಾ ವಿಚಾರದ ಬಗ್ಗೆ ಪ್ರತಿಭಟಿಸಲು ನಾಚಿಕೆಯಾಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. 

Muda protests from BJP for not questioning budget injustice Says CM Siddaramaiah gvd
Author
First Published Jul 27, 2024, 4:29 AM IST | Last Updated Jul 27, 2024, 9:18 AM IST

ಬೆಂಗಳೂರು (ಜು.27): ‘ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಕರ್ನಾಟಕದ ಹೆಸರಿನ ಪ್ರಸ್ತಾಪವೇ ಇಲ್ಲ. ಹಲವು ವರ್ಷಗಳಿಂದ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಹೀಗಿದ್ದರೂ ಬಾಯಿಬಿಡದ ನಾಡದ್ರೋಹಿ ಬಿಜೆಪಿ ಸಂಸದರು ಇದೀಗ ಮುಡಾ ವಿಚಾರದ ಬಗ್ಗೆ ಪ್ರತಿಭಟಿಸಲು ನಾಚಿಕೆಯಾಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಮುಡಾ ವಿಚಾರವಾಗಿ ಬಿಜೆಪಿ ಸಂಸದರು ಸಂಸತ್‌ ಬಳಿ ಪ್ರತಿಭಟನೆ ನಡೆಸಿರುವ ಬಗ್ಗೆ ಮಾತನಾಡಿದ ಅವರು, ‘ಕರ್ನಾಟಕಕ್ಕೆ ಕೇಂದ್ರದಿಂದ ಸಾಲು-ಸಾಲು ಅನ್ಯಾಯ ಆಗಿದೆ. ಬಜೆಟ್‌ನಲ್ಲೂ ಏನೂ ಕೊಟ್ಟಿಲ್ಲ. 

ಈ ಬಗ್ಗೆ ಯಾವತ್ತಾದರೂ ಪ್ರತಿಭಟನೆ ನಡೆಸಿದ್ದಾರಾ? ಕಳೆದ 5 ವರ್ಷ 25 ಸಂಸದರು ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದರು. ಈಗಲೂ 19 ಸಂಸದರು ಆಯ್ಕೆಯಾದರೂ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಒಂದು ಯೋಜನೆ ತರಲು ಯೋಗ್ಯತೆ ಇಲ್ಲ. ಇವರಿಗೆ ಮಾನ ಮರ್ಯಾದೆ ಇದೆಯೇ?’ ಎಂದು ಪ್ರಶ್ನಿಸಿದರು. ಮುಡಾ ನಿವೇಶನ ಹಂಚಿಕೆ ಮಾಡಿರುವುದೇ ಬಿಜೆಪಿ ಸರ್ಕಾರ. ನಾನು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ. ಹೀಗಿದ್ದರೂ ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ನಡೆಸಿದ್ದಾರೆ. ಅವರಿಗೆ ಸಂವಿಧಾನ, ಸಾಮಾಜಿಕ ನ್ಯಾಯ, ರಾಜ್ಯದ ಹಿತಗಳ ಬಗ್ಗೆ ಕಾಳಜಿಯೇ ಇಲ್ಲ ಎಂದು ಕಿಡಿ ಕಾರಿದರು.

ಮುಡಾ ಹಗರಣ ಸಿಬಿಐ ತನಿಖೆ, ಸಿಎಂ ರಾಜೀನಾಮೆಗೆ ಪಟ್ಟು: ಮೈಸೂರಿಗೆ ಬಿಜೆಪಿ ನಡಿಗೆ ಪಕ್ಕಾ

ಬಿಜೆಪಿಯನ್ನು ಜನ ತಿರಸ್ಕರಿಸುತ್ತಿದ್ದಾರೆ: ಜನ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಮನುವಾದವನ್ನು ತಿರಸ್ಕರಿಸಲು ಪ್ರಾರಂಭಿಸಿದ್ದಾರೆ. ಇದು ಅವರಿಗೂ (ಬಿಜೆಪಿ) ಅರ್ಥವಾಗುತ್ತಿದೆ. ದಿನದಿಂದ ದಿನಕ್ಕೆ ಇವರ ಮತಗಳಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಹಾಗಾಗಿಯೇ ನನ್ನನ್ನು ಮುಂದಿಟ್ಟುಕೊಂಡು ಕೇಂದ್ರ ಮಟ್ಟದಲ್ಲಿ ವೈಯಕ್ತಿಕ ದಾಳಿ ಪ್ರಾರಂಭಿಸಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

3.24 ಲಕ್ಷ ರು.ಗೆ ಅಧಿಕಾರ ದುರುಪಯೋಗ ಅಂದ್ರೆ ಜನ ನಂಬ್ತಾರಾ?: ಒಬ್ಬ ಉಪಮುಖ್ಯಮಂತ್ರಿ ಆಗಿದ್ದವರು 3.24 ಲಕ್ಷ ರು. ಮೌಲ್ಯದ ಜಮೀನಿಗೆ ಅಧಿಕಾರ ದುರುಪಯೋಗ ಮಾಡಿಕೊಂಡರು ಎಂದರೆ ಜನ ನಂಬುತ್ತಾರಾ? ನಾಚಿಕೆ-ಸೂಕ್ಷ್ಮತೆ ಇದ್ದರೆ ಬಿಜೆಪಿಯವರು ಈ ರೀತಿ ವರ್ತಿಸಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಬಿಜೆಪಿಯ ಕೆಲವರು ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಯಾಗಿದ್ದರು. ಆಗ ಇದನ್ನೆಲ್ಲ ಮಾಡಿಸಿಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಮುಡಾದವರು ಜಮೀನು ಸ್ವಾಧೀನಪಡಿಸಿಕೊಳ್ಳುವಾಗ 1998ರಲ್ಲಿ ಅದಕ್ಕೆ 3.24 ಲಕ್ಷ ರು. ಬೆಲೆ ಕಟ್ಟಿದ್ದರು. ಒಂದು 3.24 ಲಕ್ಷ ರು. ಮೌಲ್ಯದ ಜಮೀನಿಗೆ ಉಪ ಮುಖ್ಯಮಂತ್ರಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಾರಾ? ಬಿಜೆಪಿಯವರಿಗೆ ಅಷ್ಟೂ ಸೂಕ್ಷ್ಮತೆ ಬೇಡವೇ ಎಂದು ಪ್ರಶ್ನಿಸಿದರು.

ಬಿಜೆಪಿ, ಜೆಡಿಎಸ್‌ನ ಕೀವು-ಕೆಟ್ಟ ರಕ್ತ ಹೊರಬರಲಿ: ಬಿಜೆಪಿ ಹಾಗೂ ಜೆಡಿಎಸ್‌ನ ನಿಜಬಣ್ಣ ಬಯಲಾಗುತ್ತಿದೆ. ಯಾವುದೂ ಗಾಯದ ರೂಪದಲ್ಲೇ ಉಳಿಯದೆ ಗಾಯದ ಒಳಗಿರುವ ಕೆಟ್ಟ ರಕ್ತ ಒಡೆದು ಹೊರ ಬರಬೇಕು. ಹಾಗೆಯೆ ಬಿಜೆಪಿ-ಜೆಡಿಎಸ್‌ನವರ ಕೋಮುವಾದಿ-ಫ್ಯೂಡಲ್ ತಲೆಯೊಳಗೂ ದ್ವೇಷ, ಅಸಹನೆ ಎಂಬ ಕೀವು-ಕೆಟ್ಟ ರಕ್ತ ತುಂಬಿದೆ. ಅದು ಒಡೆದು ಹೊರ ಬರಬೇಕು ಎಂದು ಸಿದ್ದರಾಮಯ್ಯ ಹೇಳಿದರು.

‘ನನ್ನ ರಾಜಕೀಯ ಜೀವನ ತೆರೆದ ಪುಸ್ತಕ’: ನಾನು ಸಮಾಜವಾದದ ಹಿನ್ನೆಲೆಯಿಂದ ಬಂದವನು. ನನಗೆ ತಿಳುವಳಿಕೆ ನೀಡಿದವರು ಜನರು ಹಾಗೂ ನಂಜುಂಡಸ್ವಾಮಿ ಅಂತಹವರು. ಜನರೇ ನನ್ನ ವಿಶ್ವವಿದ್ಯಾಲಯ, ನನ್ನ ರಾಜಕೀಯ ಜೀವನವೇ ತೆರೆದ ಪುಸ್ತಕ ಎಂದು ಸಿದ್ದರಾಮಯ್ಯ ಹೇಳಿದರು. ನಾವು ಏನೇ ಆಗಿದ್ದರೂ ಮನೆಯಲ್ಲಿ ಎಲ್ಲರ ಭಾವನೆಗಳಿಗೆ ಬೆಲೆ ಕೊಡಬೇಕು. ಕೆಲವರು ನಿಮ್ಮ ಪತ್ನಿಗೆ ಅವರ ಅಣ್ಣ ನೀಡಿದ ದಾನವನ್ನು ತಿರಸ್ಕರಿಸಬೇಕಿತ್ತು ಎನ್ನುತ್ತಾರೆ. ನಾವೆಷ್ಟೇ ಪ್ರಗತಿಪರವಾಗಿ ಯೋಚನೆ ಮಾಡಿದರೂ, ಊಟ ಬಟ್ಟೆಗೆ ಯಾವ ಸಮಸ್ಯೆ ಇಲ್ಲದಿದ್ದರೂ ಸಹ ತವರುಮನೆ ಎನ್ನುವುದು ಎಂದೂ ತೀರದ ಮೋಹವಾಗಿರುತ್ತದೆ. ಇದನ್ನು ಹೊರತುಪಡಿಸಿ ನಾನು ಏನು? ನನ್ನ ಹಿನ್ನೆಲೆ ಏನು? ನಾನು ನಡೆದು ಬಂದ ದಾರಿ ಏನು? ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದರು.

ಭೋವಿ ನಿಗಮದ್ದು ಬರೋಬ್ಬರಿ 60 ಕೋಟಿ ಗೋಲ್‌ಮಾಲ್‌: ಬಿಜೆಪಿ ಅಕ್ರಮಗಳ ಸಿದ್ದು ಬೇಟೆ ಬಿರುಸು

ಬಿಜೆಪಿಯವರು ಸಂಸ್ಕೃತಿ ವಿರೋಧಿಗಳು: ಪ್ರತಿ ವರ್ಷ ತವರು ಮನೆಯವರು ಕೊಡುವ ಅರಿಶಿನ ಕುಂಕುಮ ಹೆಣ್ಣುಮಕ್ಕಳಿಗೆ ಅತಿ ದೊಡ್ಡ ಭಾವನಾತ್ಮಕ ಸಂಗತಿ ಹಾಗೂ ನಮ್ಮ ಸಂಸ್ಕೃತಿ. ಇದನ್ನು ಬಿಜೆಪಿಯವರು ವಿರೋಧಿಸುವುದು ದುರಂತ ಎಂದು ಸಿದ್ದರಾಮಯ್ಯ ಹೇಳಿದರು. ಹೆಣ್ಣು ಮಕ್ಕಳಿಗೆ ತವರು ಮನೆಯ ಅರಿಶಿನ ಕುಂಕುಮ ಭಾವನಾತ್ಮಕ ಸಂಗತಿ. ಹೀಗಾಗಿ ತವರು ಮನೆಯವರು ಕೊಟ್ಟ ಉಡುಗೊರೆಯನ್ನು ತಿರಸ್ಕರಿಸು ಎಂದು ಜಬರ್ದಸ್ತು ಮಾಡುವ ಅಸೂಕ್ಷ್ಮತೆ ನಾನು ತೋರಲಿಲ್ಲ. ಅಣ್ಣ-ತಮ್ಮಂದಿರು, ತಂದೆ-ತಾಯಂದಿರು ತಮ್ಮ ಹೆಣ್ಣು ಮಕ್ಕಳಿಗೆ ದಾನಪತ್ರದ ಮೂಲಕ ಆಸ್ತಿ ಕೊಡುವುದು ತಪ್ಪು ಎಂದು ದೇಶದ ಯಾವ ಕಾನೂನು ಹೇಳಿದೆ? ಕರ್ನಾಟಕದ ಸಂಸ್ಕೃತಿಯಾದರೂ ಇದನ್ನು ತಪ್ಪು ಎಂದು ಭಾವಿಸಿದೆಯೆ? ಎಂದು ಪ್ರಶ್ನಿಸಿದರು.

Latest Videos
Follow Us:
Download App:
  • android
  • ios