ಜಾತ್ಯತೀತ ನಾಗರಿಕ ಸಂಹಿತೆ ಬಗ್ಗೆ ಮತ್ತೆ ಪ್ರಧಾನಿ ಪ್ರಸ್ತಾಪ : ಏಕರೂಪ ನಾಗರಿಕ ಸಂಹಿತೆ ಜಾರಿಗೆ ಪರೋಕ್ಷ ಆಗ್ರಹ
‘ದಶಕದಿಂದಲೇ ನ್ಯಾಯಾಲಯಗಳು ಜಾತ್ಯತೀತ ನಾಗರಿಕ ಸಂಹಿತೆಯನ್ನು ಪ್ರತಿಪಾದನೆ ಮಾಡಿಕೊಂಡು ಬಂದಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಹಾಲಿ ಇರುವ ವಿವಿಧ ಧರ್ಮಗಳ ನಾಗರಿಕ ಸಂಹಿತೆ ಬದಲು ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬೇಕೆಂದು ಪರೋಕ್ಷ ಆಗ್ರಹ ಮಾಡಿದ್ದಾರೆ.
ಜೈಪುರ (ಆ.26) : ‘ದಶಕದಿಂದಲೇ ನ್ಯಾಯಾಲಯಗಳು ಜಾತ್ಯತೀತ ನಾಗರಿಕ ಸಂಹಿತೆಯನ್ನು ಪ್ರತಿಪಾದನೆ ಮಾಡಿಕೊಂಡು ಬಂದಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಹಾಲಿ ಇರುವ ವಿವಿಧ ಧರ್ಮಗಳ ನಾಗರಿಕ ಸಂಹಿತೆ ಬದಲು ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬೇಕೆಂದು ಪರೋಕ್ಷ ಆಗ್ರಹ ಮಾಡಿದ್ದಾರೆ.
ಜೋಧಪುರದಲ್ಲಿ ಭಾನುವಾರ ಸಂಜೆ ರಾಜಸ್ಥಾನ ಹೈಕೋರ್ಟ್‌ನ ಪ್ಲಾಟಿನಂ ಜುಬಿಲಿ ಆಚರಣೆಯಲ್ಲಿ ಮಾತನಾಡಿದ ಮೋದಿ, ‘ಜಾತ್ಯತೀತ ನಾಗರಿಕ ಸಂಹಿತೆ’ ಕುರಿತು ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಹೇಳಿಕೆಯನ್ನು ಉಲ್ಲೇಖಿಸಿದರು ಮತ್ತು ನ್ಯಾಯಾಂಗವು ದಶಕಗಳಿಂದ ಇದನ್ನು ಪ್ರತಿಪಾದಿಸುತ್ತಿದೆ ಎಂದು ಹೇಳಿದರು.
ಇನ್ನು ನ್ಯಾಯಾಂಗದ ಬಗ್ಗೆ ಮಾತನಾಡಿದ ಮೋದಿ, ‘ದೇಶವು ಅಭಿವೃದ್ಧಿ ಹೊಂದಿದ ಭಾರತದ ಕನಸಿನತ್ತ ಸಾಗುತ್ತಿರುವಾಗ ಎಲ್ಲರಿಗೂ ಸರಳ, ಸುಲಭ ಮತ್ತು ಕೈಗೆಟಕಬಹುದಾದ ನ್ಯಾಯದ ಖಾತರಿ ಸಿಗಬೇಕು. ಇಂದು ಜನರ ಕನಸುಗಳು, ಅವರ ಆಕಾಂಕ್ಷೆಗಳು ದೊಡ್ಡದಾಗಿವೆ. ಆದ್ದರಿಂದ ನಮ್ಮ ವ್ಯವಸ್ಥೆಗಳನ್ನು ಆಧುನೀಕರಿಸುವುದು ಮುಖ್ಯ. ಎಲ್ಲರಿಗೂ ನ್ಯಾಯ ದೊರಕುವಂತಾಗಲು ವ್ಯವಸ್ಥೆಯ ನಾವೀನ್ಯತೆ ಮತ್ತು ಆಧುನೀಕರಣವು ಸಮಾನವಾಗಿ ಮುಖ್ಯವಾಗಿದೆ’ ಎಂದು ಪ್ರತಿಪಾದಿಸಿದರು.
ಇತ್ತೀಚೆಗೆ ಸ್ವಾತಂತ್ರ್ಯ ದಿನದ ವೇಳೆ ಮೋದಿ, ಹಾಲಿ ಇರುವ ‘ಕೋಮುವಾದಿ ನಾಗರಿಕ ಸಂಹಿತೆ’ ಬದಲು ‘ಜಾತ್ಯತೀತ ನಾಗರಿಕ ಸಂಹಿತೆ’ ಜಾರಿಗೆ ಬರಬೇಕು. ಇದರಿಂದ ಸಮಾನತೆ ಸಾಧ್ಯವಾಗಲಿದೆ ಎಂದು ಕರೆ ನೀಡಿದ್ದರು. ಅವರ ಹೇಳಿಕೆಯು ಪರ-ವಿರೋಧ ಚರ್ಚೆಗೆ ಗ್ರಾಸವಾಗಿತ್ತು.