ಮಾರ್ಚ್‌ವರೆಗೆ ಆಯೋಧ್ಯೆ ಭೇಟಿ ಮಾಡದಂತೆ ಸಂಪುಟ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ!
ಶ್ರೀರಾಮ ಮಂದಿರ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ಸಚಿವರು ತೆರಳಿದರೆ ಭದ್ರತೆ ಕಾರಣಗಳಿಂದ ಜನಸಾಮಾನ್ಯರಿಗೆ ಅನಾನುಕೂಲಗಳಾಗಲಿದೆ. ಹೀಗಾಗಿ ಮಾರ್ಚ್ ವರಗೆ ಸಚಿವ ಸಂಪುಟದ ಸದಸ್ಯರು ಆಯೋಧ್ಯೆಗೆ ಭೇಟಿ ನೀಡದಂತೆ ಮೋದಿ ಸೂಚಿಸಿದ್ದಾರೆ.
ನವದೆಹಲಿ(ಜ.24) ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ನೀಡಿದ ಮೊದಲ ದಿನ 5 ಲಕ್ಷ ಭಕ್ತರು ದರ್ಶನ ಮಾಡಿದ್ದಾರೆ. ಎರಡನೇ ದಿನ ದುಪ್ಪಟ್ಟ ಸಂಖ್ಯೆ ಭಕ್ತರು ಆಯೋಧ್ಯೆಗೆ ಧಾವಿಸಿದ್ದಾರೆ. ಹೀಗಾಗಿ ನೂಕು ನುಗ್ಗಲು ಸೃಷ್ಟಿಯಾಗಿದೆ. ಇತ್ತ ಯುಪಿ ಸರ್ಕಾರ ನಿಯಂತ್ರಕ್ಕಾಗಿ ಕೆಲ ಕ್ರಮಗಳನ್ನು ಕೈಗೊಂಡಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಆಯೋಧ್ಯೆಗೆ ಆಗಮಿಸುತ್ತಿರುವ ಕಾರಣ ಮಾರ್ಚ್ ವರೆಗೆ ಸಚಿವ ಸಂಪುಟದ ಸದಸ್ಯರು ಆಯೋಧ್ಯೆಗೆ ಭೇಟಿ ನೀಡದಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ. ಸಚಿವರ ಭೇಟಿಯಿಂದ ಭಕ್ತರಿಗೆ ಅನಾನುಕೂಲಗಳಾಗಲಿವೆ. ಹೀಗಾಗಿ ಮಾರ್ಚ್ ತಿಂಗಳ ಬಳಿಕ ಭೇಟಿ ನೀಡಿ ದರ್ಶನ ಪಡೆಯಲು ಮೋದಿ ಸೂಚಿಸಿದ್ದಾರೆ.
ದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ. ಈ ವೇಳೆ ಪ್ರಧಾನಿ ಮೋದಿ ಸಚಿವ ಸಂಪುಟ ಸದಸ್ಯರಿಗೆ ಈ ಸೂಚನೆ ನೀಡಿದ್ದಾರೆ. ಆಯೋಧ್ಯೆಯಲ್ಲಿ ಸದ್ಯ ವಿಪರೀತ ಜನದಟ್ಟಣೆ ಇದೆ. ಇದೇ ಸಂದರ್ಭದಲ್ಲಿ ಸಚಿವರು ಆಯೋಧ್ಯೆಗೆ ಭೇಟಿ ನೀಡಿದರೆ ಗಣ್ಯರ ಪ್ರೊಟೋಕಾಲ್ ಅಡಿಯಲ್ಲಿ ಭೇಟಿಗೆ ಅವಕಾಶ ನೀಡಲಾಗುತ್ತದೆ. ಇದರಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿರುವ ಭಕ್ತರಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಮಾರ್ಚ್ ವರೆಗೆ ಸಚಿವರು ಆಯೋಧ್ಯೆ ಭೇಟಿ ಮಾಡದಂತೆ ಮೋದಿ ಸೂಚಿಸಿದ್ದಾರೆ.
ಆಯೋಧ್ಯೆಗೆ ಹರಿದು ಬಂದ ಭಕ್ತ ಸಾಗರ, ನಿಯಂತ್ರಣಕ್ಕಾಗಿ ಬಸ್ ರದ್ದುಗೊಳಿಸಿದ ಯುಪಿ ಸರ್ಕಾರ!
ಜನವರಿ ಹಾಗೂ ಫೆಬ್ರವರಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಿರಲಿದೆ. ಮಾರ್ಚ್ ತಿಂಗಳಲ್ಲಿ ಸಚಿವರು ಆಯೋಧ್ಯೆ ಭೇಟಿಗೆ ಪ್ಲಾನ್ ಮಾಡಿಕೊಳ್ಳಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಜನಸಾಮಾನ್ಯ ಭಕ್ತರ ದರ್ಶನಕ್ಕೆ ಅಡ್ಡಿಯಾಗುವುದನ್ನು ತಪ್ಪಿಸಲು ಮೋದಿ ಸಲಹೆಯನ್ನು ಸಚಿವರು ಒಪ್ಪಿಕೊಂಡಿದ್ದಾರೆ.
ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಅಮೃತ ಹಸ್ತದಿಂದ ಪ್ರಾಣಪ್ರತಿಷ್ಠೆ ನೆರವೇರಿಸಿದ್ದರು. ಜನವರಿ 23ರಿಂದ ರಾಮ ಮಂದಿರ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿತ್ತು. ಮೊದಲ ದಿನವೇ 5 ಲಕ್ಷ ಭಕ್ತರು ರಾಮ ಲಲ್ಲಾ ದರ್ಶನ ಪಡೆದು ದಾಖಲೆ ಬರೆದಿದ್ದಾರೆ. ಎರಡನೇ ದಿನ ದುಪ್ಟಟ್ಟು ಭಕ್ತರು ದರ್ಶನಕ್ಕೆ ಆಗಮಿಸಿದ್ದಾರೆ. ಇತ್ತ ದರ್ಶನ ಪಡೆದವರು, ದರ್ಶನ ಪಡೆಯಲು ಆಗಮಿಸಿದವರೂ ಸೇರಿ ಆಯೋಧ್ಯೆಯಲ್ಲಿ ಸರಿಸುಮಾರು 10 ಲಕ್ಷ ಭಕ್ತರು ಜಮಾಯಿಸಿದ್ದಾರೆ ಎಂದು ವರದಿಗಳು ಹೇಳುತ್ತಿದೆ.
ಅಯೋಧ್ಯೆ ಗರ್ಭಗುಡಿ ಪ್ರವೇಶಿಸಿ ರಾಮಲಲ್ಲಾನ ದರ್ಶನ ಪಡೆದು ತೆರಳಿದ ವಾನರ
ಭಾರಿ ಜನಸಂದಣಿಯಿಂದ ಭಕ್ತರ ನಿಯಂತ್ರಣ ಸವಾಲಾಗುತ್ತಿದೆ. ರಾಮಜನ್ಮಭೂಮಿಯಲ್ಲಿ ನೂಕು ನುಗ್ಗಲು ಸೃಷ್ಟಿಯಾಗಿದೆ. ಹೀಗಾಗಿ ಉತ್ತರ ಪ್ರದೇಶ ಸರ್ಕಾರ ಆಯೋಧ್ಯೆಗೆ ತೆರಳುವ ಬಸ್ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿದೆ. 900ಕ್ಕೂ ಹೆಚ್ಚು ಬಸ್ ಸಂಚಾರ ಸ್ಥಗಿತಗೊಂಡಿದೆ.