ಅದಾನಿ ಶ್ರೀಮಂತಿಕೆ 609ರಿಂದ 2ನೇ ಸ್ಥಾನಕ್ಕೇರಿದ್ದು ಹೇಗೆ? ಸಂಸತ್ತಿನಲ್ಲಿ ರಾಹುಲ್ ಗಾಂಧಿ ಪ್ರಶ್ನೆ!
ಅದಾನಿ ಪ್ರಕರಣ ಸಂಸತ್ತಿನಲ್ಲಿ ಗದ್ದಲಕ್ಕೆ ಕಾರಣವಾಗಿದೆ. ಕಳೆದ 3 ದಿನ ಕಾಂಗ್ರೆಸ್ ಕೇಂದ್ರ ಹಾಗೂ ಅದಾನಿ ಗ್ರೂಪ್ ವಿರುದ್ದ ಪ್ರತಿಭಟನೆ ನಡೆಸಿದರೆ, ಇಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ನವದೆಹಲಿ(ಫೆ.07): ಅದಾನಿ ಪ್ರಕರಣ ಇದೀಗ ದೇಶದಲ್ಲೇ ಭಾರಿ ಸದ್ದು ಮಾಡುತ್ತಿದೆ. ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಕಳೆದ ಕೆಲ ದಿನಗಳಿಂದ ಸಂಸತ್ತಿನಲ್ಲಿ ಕಾಂಗ್ರೆಸ್ ಗದ್ದಲ ಸೃಷ್ಟಿಸುತ್ತಿದೆ. ಇಂದು ರಾಹುಲ್ ಗಾಂಧಿ ಅಧಿವೇಶನದಲ್ಲಿ ಅದಾನಿ ಪ್ರಕರಣ ಹಿಡಿದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಗೌತಮ್ ಅದಾನಿಗಿರುವ ಲಿಂಕ್ ಏನು? ಎಂದು ರಾಹುಲ್ ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ 2014ರಲ್ಲಿ ಶ್ರೀಮಂತರ ಪಟ್ಟಿಯಲ್ಲಿ ಅದಾನಿ 609ನೇ ಸ್ಥಾನದಲ್ಲಿದ್ದರು. ಮೋದಿ ಸರ್ಕಾರದಲ್ಲಿ ಅದಾನಿ 2ನೇ ಸ್ಥಾನಕ್ಕೇರಿದ್ದಾರೆ. ಇದು ಹೇಗೆ ಸಾಧ್ಯ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಅದಾನಿ ಹಾಗೂ ಮೋದಿ ನಡುವಿನ ಸಂಬಂಧ ಹಲವು ದಶಕಗಳಿಂದ ಇದೆ. ಮೋದಿ ಗುಜರಾತ್ ಮುಖ್ಯಮಂತ್ರಿ ಆದ ಸಂದರ್ಭದಿಂದ ಅದಾನಿ ಗ್ರೂಪ್ ತ್ವರಿತಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಇದೀಗ ಅದಾನಿ ಪ್ರಕರಣವನ್ನು ಬಿಜೆಪಿ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ. ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ರಾಹುಲ್ ಗಾಂಧಿ ಕೇಂದ್ರದ ವಿರುದ್ದ ಹರಿಹಾಯ್ದಿದ್ದಾರೆ.
ಮುಳುಗಿಯೇ ಬಿಡುತ್ತಾ ಅದಾನಿ ಸಾಮ್ರಾಜ್ಯ..? ಅದಾನಿ ಷೇರಿನಲ್ಲಿರೋ ಎಲ್ಐಸಿ ಹಣ ಎಷ್ಟು ಸೇಫ್?
ಪ್ರಧಾನಿ ಮೋದಿ ಆತ್ಮೀಯ ಅದಾನಿ ನವ ಗುಜರಾತ್ ನಿರ್ಮಾಣದಲ್ಲಿ ಅಂದಿನ ಬಿಜೆಪಿ ಸರ್ಕಾರಕ್ಕೆ ಸಹಾಯ ಮಾಡಿದ್ದಾರೆ. ಅದಾನಿ ಅಸಲಿ ಆಟ ಶುರುವಾಗಿದ್ದು, 2014ರ ಬಳಿಕ. ಮೋದಿ ಪ್ರಧಾನಿಯಾದ ಬಳಿಕ ಅದಾನಿ ಗ್ರೂಪ್ ಒಂದೇ ಸಮನೆ ಏರಿಕೆಯಾಗಿದೆ. ಸರ್ಕಾರದ ಖಾಸಗೀಕರಣ ನೀತಿಯಲ್ಲಿ ಬಹುತೇಕ ಪಾಲು ಅದಾನಿ ಗ್ರೂಪ್ ಕೈವಶವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಳೆದ ಮೂರು ದಿನ ಕಲಾಪದಲ್ಲಿ ಅದಾನಿ ಗದ್ದಲ, 4ನೇ ದಿನ ರಾಹುಲ್ ಪ್ರಶ್ನೆಗಳ ಸುರಿಮಳೆ
ಗೌತಮ್ ಅದಾನಿ ಅವರ ಸಮೂಹ ನಡೆಸಿದೆ ಎನ್ನಲಾದ ಅಕ್ರಮದ ವಿರುದ್ಧ ವಿಪಕ್ಷಗಳು ಕಳೆದ ಮೂರು ದಿನ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತಿಭಟನೆ ಹೆಚ್ಚಾಗಿತ್ತು. ಇದರಿಂದ ಸೋಮವಾರವೂ ಕಲಾಪ ಮುಂದೂಡಲಾಗಿತ್ತು. ವಾರಾಂತ್ಯದ 2 ದಿನದ ವಿರಾಮ ಬಳಿಕ ಸದನಗಳು ಸೇರುತ್ತಿದ್ದಂತೆಯೇ ಕಾಂಗ್ರೆಸ್ ಹಾಗೂ ವಿಪಕ್ಷ ಸದಸ್ಯರು, ‘ಅದಾನಿ ಸರ್ಕಾರ್ ಶೇಮ್ ಶೇಮ್ ’ ಎಂದು ಘೋಷಣೆ ಕೂಗಿದರು ಮತ್ತು ಜಂಟಿ ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದವು. ಅಲ್ಲದೆ, ಚರ್ಚೆಗೆ ಪಟ್ಟು ಹಿಡಿದವು. ಸ್ಪೀಕರ್ ಅವರು ಶಾಂತರಾಗಿ ಎಂದು ಹೇಳಿದರೂ ವಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಕೊನೆಗೆ ಚರ್ಚೆಯ ಬೇಡಿಕೆ ತಿರಸ್ಕರಿಸಿದ ಸಭಾಪತಿಗಳು ಮಂಗಳವಾರಕ್ಕೆ ಕಲಾಪ ಮುಂದೂಡಿದರು.
ಅದಾನಿ ಗ್ರೂಪ್ ವಿರುದ್ಧ ಜೆಪಿಸಿ ತನಿಖೆಗೆ ಆಗ್ರಹಿಸಿ ಫೆ.6ಕ್ಕೆ ಕಾಂಗ್ರೆಸ್ ದೇಶವ್ಯಾಪಿ ಪ್ರತಿಭಟನೆ!
ಇತ್ತ ಅದಾನಿ ಹಾಗೂ ಅದಾನಿ ಸಮೂಹ ನಡೆಸಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರಸ್ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ದಿಲ್ಲಿ, ಬೆಂಗಳೂರು, ಗುವಾಹಟಿ, ಪಣಜಿ, ಹೈದರಾಬಾದ್, ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ನಗರಗಳು ಸೇರಿದಂತೆ ದೇಶದ ಅನೇಕ ಕಡೆ ಬೀದಿಗಿಳಿದ ಕಾಂಗ್ರೆಸ್ಸಿಗರು, ಅದಾನಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅದಾನಿ ಅವರ ಪ್ರತಿಕೃತಿ ದಹಿಸಿದರು. ಕೆಲವೆಡೆ ರಸ್ತೆ ತಡೆಯನ್ನೂ ನಡೆಸಿದರು. ಪೊಲೀಸರೊಂದಿಗೆ ಕಾರ್ಯಕರ್ತರು ಜಟಾಪಟಿಗೆ ಇಳಿದ ಘಟನೆಗಳೂ ಕೆಲವು ಕಡೆ ನಡೆದಿದೆ.
‘ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), ಅದಾನಿ ಕಂಪನಿಯಲ್ಲಿ ಬಂಡವಾಳ ತೊಡಗಿಸಿವೆ. ಎಲ್‌ಐಸಿ ಹಾಗೂ ಎಸ್‌ಬಿಐನಲ್ಲಿ ಇರುವ ಹಣ ದೇಶದ ಜನರಿಗೆ ಸೇರಿದು. ಆದರೆ ಹೂಡಿಕೆ ನೆಪದಲ್ಲಿ ಈ ಹಣವನ್ನು ಕೇಂದ್ರ ಸರ್ಕಾರವು ತನ್ನ ಆಪ್ತ ಗೆಳೆಯರಿಗೆ ನೀಡಿ ಅವರ ಉದ್ಧಾರದಲ್ಲಿ ತೊಡಗಿದೆ’ ಎಂಬದು ಕಾಂಗ್ರೆಸ್ ಆರೋಪ.