ಅದಾನಿ ಗ್ರೂಪ್ ವಿರುದ್ಧ ಜೆಪಿಸಿ ತನಿಖೆಗೆ ಆಗ್ರಹಿಸಿ ಫೆ.6ಕ್ಕೆ ಕಾಂಗ್ರೆಸ್ ದೇಶವ್ಯಾಪಿ ಪ್ರತಿಭಟನೆ!
ಹಿಂಡೆನ್‌ಬರ್ಗ್ ವರದಿಯ ಬಳಿಕ ಷೇರು ಮಾರುಕಟ್ಟೆಯಲ್ಲಿ ಅದಾನಿ ಕಂಪನಿಯ ಷೇರುಗಳು ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿವೆ. ಈ ಕಂಪನಿಯ ಮೇಲೆ ಎಲ್‌ಐಸಿ ಹಾಗೂ ಸರ್ಕಾರಿ ವಲಯದ ಬ್ಯಾಂಕ್‌ಗಳಾದ ಎಸ್‌ಬಿಐ ದೊಡ್ಡ ಮಟ್ಟದ ಹೂಡಿಕೆ ಮಾಡಿದೆ. ಇದರಿಂದಾಗಿ ಜನಸಾಮಾನ್ಯರ ಉಳಿತಾಯದ ಮೇಲೆ ಪರಿಣಾಮ ಬೀರಿದೆ ಎಂದಿರುವ ಕಾಂಗ್ರೆಸ್ ಫೆ. 6 ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲಿದೆ.
ನವದೆಹಲಿ (ಫೆ.4): ಹಿಂಡೆನ್‌ಬರ್ಗ್ ವರದಿಯ ಬೆನ್ನಲ್ಲಿಯೇ ಷೇರು ಮಾರುಕಟ್ಟೆಯ ಅದಾನಿ ಗ್ರೂಪ್‌ನ ಎಲ್ಲಾ 10 ಷೇರುಗಳು ಪಾತಾಳಕ್ಕೆ ಕುಸಿದಿದೆ. ಒಟ್ಟಾರೆ ಕಂಪನಿಗೆ ಆಗಿರುವ ನಷ್ಟ ಮೇಲ್ನೋಟಕ್ಕೆ 10 ಲಕ್ಷ ಕೋಟಿ ಎಂದು ಹೇಳಲಾಗುತ್ತದೆ. ಈ ಕಂಪನಿಯ ಮೇಲೆ ದೊಡ್ಡ ದೊಡ್ಡ ಕಂಪನಿಗಳು ಹೂಡಿಕೆ ಮಾಡಿವೆ. ಕೇಂದ್ರ ಸರ್ಕಾರದ ದೊಡ್ಡ ಕಂಪನಿಗಳಾದ ಭಾರತೀಯ ಜೀವವಿಮಾ ನಿಗಮ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಅದಾನಿ ಗ್ರೂಪ್ ಮೇಲೆ ಹೂಡಿಕೆ ಮಾಡಿದೆ. ಜನರ ಸಣ್ಣ ಸಣ್ಣ ಉಳಿತಾಯದ ಹಣವನ್ನು ಎಲ್‌ಐಸಿ ಹಾಗೂ ಎಸ್‌ಬಿಐ, ಅದಾನಿ ಕಂಪನಿಗಳ ಮೇಲೆ ಹೂಡಿಕೆ ಮಾಡಿದೆ. ಇದರಿಂದ ಜನರ ಹಣ ಲೂಟಿಯಾಗಿದೆ ಎಂದು ಆರೋಪ ಮಾಡಿರುವ ಕಾಂಗ್ರೆಸ್ ಫೆಬ್ರವರಿ 6 ರಂದು ದೇಶದ ಎಲ್ಲಾ ಎಲ್‌ಐಸಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿಗಳ ಎದುರು ಪ್ರತಿಭಟನೆ ಮಾಡುವುದಾಗಿ ಘೋಷಣೆ ಮಾಡಿದೆ. "ಕೇಂದ್ರ ಸರ್ಕಾರವು ತಮ್ಮ ಆತ್ಮೀಯ ಸ್ನೇಹಿತನಿಗೆ ಬೆಂಬಲ ನೀಡಲು ಜನಸಾಮಾನ್ಯ ಜನರ ಹಣವನ್ನು ಬಳಕೆ ಮಾಡಿದೆ. ಕಾಂಗ್ರೆಸ್ ಪಕ್ಷವು ಸೋಮವಾರ ದೇಶದಾದ್ಯಂತ ಎಲ್ಐಸಿ ಮತ್ತು ಎಸ್‌ಬಿಐ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಕಾರ, ಅದಾನಿ ಗ್ರೂಪ್‌ನ ಮೇಲೆ ಎಸ್‌ಬಿಐ ಹಾಗೂ ಎಲ್‌ಐಸಿ ಕಂಪನಿಗಳು ಹೂಡಿಕೆ ಮಾಡಲು ಜನಸಾಮಾನ್ಯರ ಉಳಿತಾಯದ ಹಣವನ್ನು ಬಳಸಿಕೊಂಡಿದೆ ಎಂದು ಆರೋಪ ಮಾಡಿದೆ. ಈ ನಡುವೆ ವಿರೋಧ ಪಕ್ಷಗಳ ನಾಯಕರು ಸರ್ಕಾರವು ತಮ್ಮ ಪ್ರತಿಭಟನೆಯನ್ನು ನಿರ್ಲಕ್ಷ್ಯ ಮಾಡುತ್ತದೆ ಹಾಗೂ ಬೇಡಿಕೆಯನ್ನು ಒಪ್ಪಿಕೊಳ್ಳೋದಿಲ್ಲ ಎಂದು ನಿರೀಕ್ಷೆ ಮಾಡಿದ. ಆ ಕಾರಣದಿಂದಾಗಿ ಸಂಸತ್ತಿನಲ್ಲಿಯೇ ಮೋದಿ ಹಾಗೂ ಮೋದಿ ಸರ್ಕಾರದ ವಿರುದ್ಧ ಈಗಾಗಲೇ ಟೀಕಾ ಪ್ರಹಾರ ಮಾಡಲು ಆರಂಭಿಸಲಾಗಿದೆ.
ಈ ನಡುವೆ ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷಗಳ ನಾಯಕರು ಅದಾನಿ ಗ್ರೂಪ್‌ನ ಮೇಲೆ ಕೇಳಿ ಬಂದಿರುವ ಆರೋಪಗಳ ವಿರುದ್ಧ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದರು. ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಮಧ್ಯಾಹ್ನದ ನಂತರದ ಕಲಾಪಕ್ಕೆ ಇದರಿಂದ ಅಡ್ಡಿಯಾಗಿದ್ದರಿಂದ ಸಭಾಪತಿ ಅಧಿವೇಶವನ್ನು ಮುಂದೂಡಿಕೆ ಮಾಡಿದ್ದರು.
ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಎಂಟರ್‌ಪ್ರೈಸಸ್ ಕುರಿತಾಗಿ ನೀಡಿರುವ ವರದಿ ಹಾಗೂ ಅದರ ಬೆನ್ನಲ್ಲಿಯೇ ಅದಾನಿ ಗ್ರೂಪ್‌ನ ಷೇರುಗಳ ಕುಸಿತ, ಅಮೃತಕಾಲದ ಮಹಾ ಹಗರಣ ಎಂದು ಜಂಟಿ ವಿರೋಧ ಪಕ್ಷಗಳು ಟೀಕಿಸಿವೆ. ಅದಲ್ಲದೆ, ಈ ಪ್ರಕರಣದಲ್ಲಿ ಬಗ್ಗರ ಸರ್ಕಾರದ ಮೌನವನ್ನೂ ಕೂಡ ವಿರೋಧ ಪಕ್ಷಗಳು ಪ್ರಶ್ನೆ ಮಾಡಿವೆ. ಸಮಸ್ಯೆಯನ್ನು ಚರ್ಚಿಸಲು ಸದನದಲ್ಲಿ ಮಂಡಿಸಲಾದ ಬ್ಯುಸಿನೆಸ್ ನೋಟಿಸ್‌ಗಳನ್ನೂ ರದ್ದು ಮಾಡಿದ ವಿಚಾರವಾಗಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಅದಾನಿ ಕುಸಿತದಿಂದ ಎಲ್ಐಸಿ, ಎಸ್ಬಿಐಗೆ 78000 ಕೋಟಿ ನಷ್ಟ
ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಸಿಜಿಎಐ ನೇತೃತ್ವದ ತನಿಖಾ ಸಮಿತಿ ಅಥವಾ ಜಂಟಿ ಸಂಸದೀಯ ಸಮಿತಿಯಿಂದ ಈ ವಿಚಾರವನ್ನು ತನಿಖೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಜಂಟಿ ಸಂಸದೀಯ ಸಮಿತಿ ಅಥವಾ ಸುಪ್ರೀಂ ಕೋರ್ಟ್‌ನ ಸಿಜೆಐ ಮೇಲ್ವಿಚಾರಣೆಯ ತಂಡವು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಖರ್ಗೆ ಸ್ಪಷ್ಟವಾಗಿ ಸದನದ ಮುಂದೆ ಹೇಳಿದ್ದಾರೆ.
ಅದಾನಿ ಗ್ರೂಪ್ ಮೇಲೆ ಆರೋಪ ಮಾಡಿದ ಹಿಂಡೆನ್‌ಬರ್ಗ್ ಶಾರ್ಟ್ ಸೆಲ್ಲರ್, ಏನಿದು ಶಾರ್ಟ್ ಸೆಲ್ಲಿಂಗ್?
ಈ ವಿಷಯದ ಕುರಿತು ಹಲವಾರು ವಿರೋಧ ಪಕ್ಷದ ಸಂಸದರು ಸಂಸತ್ತಿನ ಆಯಾ ಸದನಗಳಿಗೆ ವ್ಯವಹಾರದ ನೋಟಿಸ್‌ಗಳನ್ನು ಅಮಾನತುಗೊಳಿಸಿದ್ದರೂ, ಅಧಿವೇಶನವು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾದ ಕೂಡಲೇ ಎರಡೂ ಸದನಗಳನ್ನು ಮುಂದೂಡಲಾಯಿತು. ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯಲ್ಲಿ ಸಿಪಿಐ(ಎಂ) ನಾಯಕ ಎಂಪಿ ಎಳಮರಮ್ ಕರೀಂ, ಶಿವಸೇನಾ ಸಂಸದ (ಉದ್ಧವ್ ಠಾಕ್ರೆ ಬಣ) ಪ್ರಿಯಾಂಕಾ ಚತುರ್ವೇದಿ, ಸಿಪಿಐ ರಾಜ್ಯಸಭಾ ಸಂಸದ ಬಿನೋಯ್ ವಿಶ್ವಂ, ಭಾರತ ರಾಷ್ಟ್ರ ಸಮಿತಿ ಸೇರಿದಂತೆ ಸದನಗಳಲ್ಲಿ ನೋಟಿಸ್ ನೀಡಿದ ನಾಯಕರಿದ್ದಾರೆ. ಲೋಕಸಭೆ ಸಂಸದ ನಾಮ ನಾಗೇಶ್ವರ ರಾವ್, ಬಿಆರ್‌ಎಸ್ ರಾಜ್ಯಸಭಾ ಸಂಸದ ಕೆ.ಕೇಶವ ರಾವ್, ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಇತರರು ಇದ್ದರು. ಅಧಿವೇಶನದ ಮೊದಲ ಭಾಗ ಫೆಬ್ರವರಿ 13 ರಂದು ಮುಕ್ತಾಯಗೊಳ್ಳಲಿದೆ. ಬಜೆಟ್ ಅಧಿವೇಶನದ ಎರಡನೇ ಭಾಗಕ್ಕಾಗಿ ಮಾರ್ಚ್ 12 ರಂದು ಸಂಸತ್ತು ಮತ್ತೆ ಸೇರಲಿದ್ದು, ಏಪ್ರಿಲ್ 6 ರಂದು ಮುಕ್ತಾಯವಾಗಲಿದೆ.