ಬಿಸಿಸಿಐ ಪ್ರವಾಸಗಳಲ್ಲಿ ವೇಶ್ಯೆಯರೊಂದಿಗೆ ಲೈಂಗಿಕ ಸಂಬಂಧ: ಮೊಹಮ್ಮದ್ ಶಮಿ ವಿರುದ್ಧ ಸುಪ್ರೀಂ ಮೊರೆ ಹೋದ ಪತ್ನಿ
ಕಲ್ಕತ್ತಾ ಹೈಕೋರ್ಟ್ ಸ್ಥಳೀಯ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ತಿರಸ್ಕರಿಸಿತ್ತು. ಈ ಹಿನ್ನೆಲೆ ಮೊಹಮ್ಮದ್ ಶಮಿ ಪತ್ನಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ನವದೆಹಲಿ (ಮೇ 3, 2023): ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿಗೆ ಮತ್ತೊಂದು ಸಂಕಷ್ಟ ಕಾದಿದೆ. ಪತಿ ವಿರುದ್ಧ ಮತ್ತೆ ಆರೋಪ ಮಾಡಿದ ಮೊಹಮ್ಮದ್ ಶಮಿ ಪತ್ನಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಅವರ ಪತ್ನಿ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಕಲ್ಕತ್ತಾ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.
ಸ್ಥಳೀಯ ನ್ಯಾಯಾಲಯವು ಮೊಹಮ್ಮದ್ ಶಮಿ ವಿರುದ್ಧದ ಬಂಧನ ವಾರಂಟ್‌ಗೆ ತಡೆಯಾಜ್ಞೆ ಹಿಂತೆಗೆದುಕೊಳ್ಳುವಂತೆ ಕೋರಿದ್ದ ಪತ್ನಿಯ ಮನವಿಯನ್ನು ವಜಾಗೊಳಿಸಿತ್ತು. ಈ ಬೆನ್ನಲ್ಲೇ ಸ್ಥಳೀಯ ಕೋರ್ಟ್ ಆದೇಶದ ವಿರುದ್ಧ ಪತ್ನಿ ಕಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್ ಸಹ ಸ್ಥಳೀಯ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ತಿರಸ್ಕರಿಸಿತ್ತು. ಈ ಹಿನ್ನೆಲೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಇದನ್ನು ಓದಿ: ಹಸೀನಾಗೆ ಹಿನ್ನಡೆ, ಶಮಿಗೆ ಸಮಧಾನ, ಬಂಧನ ಭೀತಿಯಿಂದ ಪಾರಾದ ಟೀಂ ಇಂಡಿಯಾ ವೇಗಿ..!
ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಅವರ ಪತ್ನಿ ಮಾರ್ಚ್ 28, 2023 ರ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮತ್ತು ಸೆಷನ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆಯೂ ಅರ್ಜಿ ಸಲ್ಲಿಸಿದ್ದಾರೆ. ಶಮಿ ವಿರುದ್ಧ ಹೊರಡಿಸಿದ್ದ ಬಂಧನ ವಾರಂಟ್‌ಗೆ ಪಶ್ಚಿಮ ಬಂಗಾಳದ ಸೆಷನ್ಸ್ ಕೋರ್ಟ್ ತಡೆ ನೀಡಿತ್ತು.
ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಅವರ ಪತ್ನಿ ತಮ್ಮ ವಕೀಲರಾದ ದೀಪಕ್ ಪ್ರಕಾಶ್, ಅಡ್ವೊಕೇಟ್ ಆನ್ ರೆಕಾರ್ಡ್, ನಚಿಕೇತ ವಾಜಪೇಯಿ ಮತ್ತು ವಕೀಲರಾದ ದಿವ್ಯಾಂಗ್ನಾ ಮಲಿಕ್ ವಾಜಪೇಯಿ ಅವರ ಮೂಲಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಶಮಿ ತನ್ನಿಂದ ವರದಕ್ಷಿಣೆಗೆ ಬೇಡಿಕೆಯಿಡುತ್ತಿದ್ದರು ಮತ್ತು ಅವರು ವೇಶ್ಯೆಯರೊಂದಿಗೆ ಅಕ್ರಮ ವಿವಾಹೇತರ ಲೈಂಗಿಕ ಸಂಬಂಧಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ. ವಿಶೇಷವಾಗಿ ತನ್ನ ಬಿಸಿಸಿಐ ಪ್ರವಾಸಗಳಲ್ಲಿ ಹಾಗೂ ಬಿಸಿಸಿಐ ಒದಗಿಸಿದ ಹೋಟೆಲ್ ಕೊಠಡಿಗಳಲ್ಲಿ ಇಂದಿನವರೆಗೂ ಅದನ್ನೇ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಪತ್ನಿಗೆ ಜೀವನಾಂಶ ನೀಡುವಂತೆ ಮೊಹಮದ್ ಶಮಿಗೆ ಕೋರ್ಟ್ ಆದೇಶ!
ಅರ್ಜಿಯ ಪ್ರಕಾರ, ಆಗಸ್ಟ್ 29, 2019 ರಂದು ಅಲಿಪುರದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರು ಮೊಹಮ್ಮದ್ ಶಮಿ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದಾರೆ. ಮೊಹಮ್ಮದ್ ಶಮಿ ಈ ಆದೇಶವನ್ನು ಸೆಷನ್ಸ್ ನ್ಯಾಯಾಲಯದ ಮುಂದೆ ಪ್ರಶ್ನಿಸಿದ್ದರು. ಇದು ಸೆಪ್ಟೆಂಬರ್ 9, 2019 ರಂದು ಬಂಧನ ವಾರಂಟ್ ಮತ್ತು ಕ್ರಿಮಿನಲ್ ವಿಚಾರಣೆಯ ಸಂಪೂರ್ಣ ಪ್ರಕ್ರಿಯೆಗಳಿಗೆ ತಡೆ ನೀಡಿತ್ತು. ಪರಿಣಾಮವಾಗಿ, ಶಮಿ ಅವರ ಪತ್ನಿ ಕಲ್ಕತ್ತಾದ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಅವರ ಪರವಾಗಿ ಯಾವುದೇ ಆದೇಶವನ್ನು ಪಡೆಯಲು ವಿಫಲರಾಗಿದ್ದರು.
ಮಾರ್ಚ್ 28, 2023 ರ ಕಲ್ಕತ್ತಾ ಹೈಕೋರ್ಟ್ ಆದೇಶದ ವಿರುದ್ಧ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಆಕ್ಷೇಪಾರ್ಹ ಆದೇಶವು ಕಾನೂನಿನಲ್ಲಿ ಸ್ಪಷ್ಟವಾಗಿ ತಪ್ಪಾಗಿದೆ, ಇದು ತ್ವರಿತ ವಿಚಾರಣೆಯ ಹಕ್ಕನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ ಎಂದು ಅವರು ಹೇಳಿದೆ. ಕಾನೂನಿನಡಿಯಲ್ಲಿ ಸೆಲೆಬ್ರಿಟಿಗಳಿಗೆ ಯಾವುದೇ ವಿಶೇಷ ಔದಾರ್ಯ ನೀಡಬಾರದು ಎಂದೂ ಮೊಹಮ್ಮದ್ ಶಮಿ ಪತ್ನಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 'ಇದಕ್ಕೆ ಕರ್ಮ ಅಂತಾರೆ..' ಪಾಕ್ ಸೋಲಿನ ಬಳಿಕ ಅಖ್ತರ್‌ಗೆ ಮೊಹಮದ್ ಶಮಿ ಸೂಪರ್ ಚಾಟಿಯೇಟು!