ಹಸೀನಾಗೆ ಹಿನ್ನಡೆ, ಶಮಿಗೆ ಸಮಧಾನ, ಬಂಧನ ಭೀತಿಯಿಂದ ಪಾರಾದ ಟೀಂ ಇಂಡಿಯಾ ವೇಗಿ..!
ಮೊಹಮ್ಮದ್ ಶಮಿಗೆ ರಿಲೀಫ್ ನೀಡಿದ ಕೋಲ್ಕತಾ ಹೈಕೋರ್ಟ್
ಸೆಷನ್ ನ್ಯಾಯಾಲಯ ನೀಡಿದ್ದ ತೀರ್ಪು ಎತ್ತಿಹಿಡಿದ ಹೈಕೋರ್ಟ್
ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದ ಶಮಿ ಪತ್ನಿ ಹಸೀನ್ ಜಹಾನ್
ಕೋಲ್ಕತಾ(ಮಾ.30): ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿಯನ್ನು ಬಂಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಿಪೂರ್ ಸೆಷನ್ ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು. ಇದೀಗ ಕೋಲ್ಕತಾ ಉಚ್ಛ ನ್ಯಾಯಾಲಯವು ಕೂಡಾ ಸೆಷನ್ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದ್ದು, ಅನುಭವಿ ವೇಗಿ ಮೊಹಮ್ಮದ್ ಶಮಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್, 2018ರಲ್ಲಿ ತಮ್ಮ ಪತಿ ಶಮಿ ತಮ್ಮ ಮೇಲೆ ಕ್ರೂರವಾಗಿ ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದರು. ವಿವಾಹೇತರ ಸಂಬಂಧ ಹೊಂದಿದ್ದನ್ನು ಪ್ರತಿಭಟಿಸಿದ್ದಕ್ಕೆ ಮೊಹಮ್ಮದ್ ಶಮಿ, ಫೆಬ್ರವರಿ 23, 2018ರಲ್ಲಿ ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು.
ಈ ಸಂಬಂಧ ಮಾರ್ಚ್ 2018ರಲ್ಲಿ ಹಸೀನ್ ಜಹಾನ್, ಜಡ್ವಾಪುರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 498ಎ ಹಾಗೂ ಐಪಿಸಿ ಸೆಕ್ಷನ್ 354ನ ಅಡಿಯಲ್ಲ ಪತಿ ಮೊಹಮ್ಮದ್ ಶಮಿ ವಿರುದ್ದ ಲಿಖಿತ ದೂರು ದಾಖಲಿಸಿದ್ದರು. ಹೀಗಾಗಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ದ ಚಾರ್ಜ್‌ಶೀಟ್ ದಾಖಲಾಗಿತ್ತು. ಇನ್ನು ವಿಚಾರಣೆಯನ್ನು ಆಲಿಸಿದ ಅಲಿಪೂರ್ ಸೆಷನ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಚೀಫ್ ಜುಡಿಶೀಯಲ್ ಮ್ಯಾಜಿಸ್ಟ್ರೇಟ್, ಮೊಹಮ್ಮದ್ ಶಮಿ ಹಾಗೂ ಅವರ ಸಂಬಂಧಿಕರನ್ನು ಬಂಧಿಸುವಂತೆ ಆಗಸ್ಟ್ 29, 2019ರಲ್ಲಿ ಆರೆಸ್ಟ್ ವಾರೆಂಟ್ ಹೊರಡಿಸಿದ್ದರು.
ಮೊದಲಿಗೆ ಮೊಹಮ್ಮದ್ ಶಮಿಗೆ ಸಮನ್ಸ್ ಕಳಿಸುವ ಬದಲಿಗೆ ಆರೆಸ್ಟ್ ವಾರೆಂಟ್ ಕಳಿಸಲು ಮುಖ್ಯ ಕಾರಣವೇನೆಂದರೆ, ಭಾರತ ಕ್ರಿಕೆಟ್ ತಂಡದ ಆಟಗಾರನಾಗಿರುವ ಮೊಹಮ್ಮದ್ ಶಮಿಯ ಈ ರೀತಿಯ ನಡವಳಿಕೆಯಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಅದರಲ್ಲೂ ಮುಖ್ಯವಾಗಿ ದೂರುದಾರಳು, ಆರೋಪಿಯು ಸಾಕಷ್ಟು ಹೈ ಪ್ರೊಫೈಲ್ ಆಗಿರುವುದರಿಂದ ತಮಗೆ ನ್ಯಾಯ ಸಿಗುವುದಿಲ್ಲ ಎಂದು ಪೂರ್ವಗ್ರಹ ಪೀಡಿತರಾಗಬಾರದು ಎನ್ನುವ ಉದ್ದೇಶದಿಂದ ಈ ರೀತಿಯ ತೀರ್ಪನ್ನು ಮಾಡಲಾಗಿತ್ತು.
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಶಾಕ್ ನೀಡಲು ಪಾಕ್ ನಿರ್ಧಾರ..!
ಇನ್ನು ಮೊಹಮ್ಮದ್ ಶಮಿ ಅವರ ಪರ ವಕೀಲರು, ಅಲಿಪೂರ್ ಸೆಷನ್ ಮ್ಯಾಜಿಸ್ಟ್ರೇಟ್ ತೀರ್ಪಿಗೆ ತಡೆ ನೀಡುವಂತೆ ಮನವಿ ಸಲ್ಲಿಸಿದ್ದರು. ಇದಾದ ನಂತರ ಸೆಪ್ಟೆಂಬರ್ 09, 2019ರಂದು ಸೆಷನ್ ನ್ಯಾಯಾಲವು ಶಮಿ ವಿರುದ್ದ ಬಂಧಿಸಲು ನೀಡಲಾಗಿದ್ದ ಆರೆಸ್ಟ್ ವಾರೆಂಟ್‌ಗೆ ತಡೆ ನೀಡಲಾಗಿತ್ತು.
ಕ್ರಿಕೆಟಿಗ ಬಂಧನಕ್ಕೆ ತಡೆ ನೀಡಿ ಹೊರಡಿಸಲಾಗಿದ್ದ ತೀರ್ಪನ್ನು ಪ್ರಶ್ನಿಸಿ ಕೋಲ್ಕತಾ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಮೂರ್ತಿ ಸಂಪತ್ ದತ್ ಅವರ ಏಕಸದಸ್ಯ ನ್ಯಾಯಪೀಠ ಎದುರು, ಹಸೀನ್ ಜಹಾನ್, ತಮ್ಮ ಪತಿ ನಂಬಿಗಸ್ಥ ವ್ಯಕ್ತಿಯಲ್ಲ ಹಾಗೂ ಸಾಕಷ್ಟು ಮಹಿಳೆಯರ ಜತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ದೂರು ಸಲ್ಲಿಸಿದ್ದರು.
ಇನ್ನು ನ್ಯಾಯಾಲಯಕ್ಕೆ ಸಲ್ಲಿಸಲಾದ ಸಾಕ್ಷ್ಯಾಧಾರಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ ನ್ಯಾಯಾಲಯವು, ಮೊಹಮ್ಮದ್ ಶಮಿ ಅವರಿಗೆ ಸಮನ್ಸ್ ಕೊಡುವ ಬದಲು ಆರೆಸ್ಟ್ ವಾರೆಂಟ್ ನೀಡಿದ್ದು, ಕಾನೂನಿಗೆ ವಿರುದ್ದವಾದ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದೆ.
"ಪ್ರಸ್ತುತ ಕೇಸ್‌ನಲ್ಲಿ ಈಗಾಗಲೇ ಸೆಷನ್ ನ್ಯಾಯಾಲಯವು ಈಗಾಗಲೇ ಹೊರಡಿಸಲಾಗಿದ್ದ ಆರೆಸ್ಟ್ ವಾರೆಂಟ್‌ಗೆ ಸ್ಟೇ ನೀಡಿದೆ. ಇನ್ನು ದೂರು ಪುನರ್‌ಪರಿಶೀಲಿಸುವ ಪ್ರಕ್ರಿಯೆ ಸೆಷನ್ ಕೋರ್ಟ್‌ನಲ್ಲಿ ಇನ್ನೂ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಸೆಷನ್ ಜಡ್ಜ್ ಅವರು ಹೊರಡಿಸಿರುವ ತಡೆಯಾಜ್ಞೆಯ ಕುರಿತಂತೆ ಯಾರೂ ಮಧ್ಯಪ್ರವೇಶಿಸುವಂತಿಲ್ಲ. ಇನ್ನು ಮ್ಯಾಜಿಸ್ಟ್ರೇಟ್ ಅವರು ನೀಡಿರುವ ತೀರ್ಪು ಸಂಪೂರ್ಣವಾಗಿ ಕಾನೂನಿಗೆ ವಿರುದ್ದವಾಗಿದೆ ಎಂದು ಕೋಲ್ಕತಾ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.