Asianet Suvarna News Asianet Suvarna News

2000 ರೂ. ನೋಟು ಶೀಘ್ರ ಮಾಯ..? ಸಂಸತ್ತಲ್ಲಿ ಬಿಜೆಪಿ ಸಂಸದ ಆಗ್ರಹ

2000 ನೋಟು ರೂ. ರದ್ದು ಮಾಡಿ ಎಂದು ಸಂಸತ್ತಲ್ಲಿ ಬಿಜೆಪಿ ಸಂಸದ ಆಗ್ರಹಿಸಿದ್ದಾರೆ. ಬಹುತೇಕ ಎಟಿಎಂಗಳಿಂದ ಈ ನೋಟು ಕಣ್ಮರೆಯಾಗಿವೆ. ಚಲಾವಣೆ ಕಳೆದುಕೊಳ್ಳುತ್ತೆ ಎಂಬ ವದಂತಿ ಇದೆ ಎಂದೂ ಸುಶೀಲ್‌ ಕುಮಾರ್‌ ಮೋದಿ ಹೇಳಿದ್ದಾರೆ. 

phase out rs 2000 notes bjp mp sushil kumar modi demands in rajya sabha ash
Author
First Published Dec 13, 2022, 11:59 AM IST

ನವದೆಹಲಿ: 6 ವರ್ಷಗಳ ಹಿಂದೆ ಅಪನಗದೀಕರಣದ (Demonetisation) ಸಂದರ್ಭದಲ್ಲಿ ಬಿಡುಗಡೆ ಮಾಡಲಾದ 2000 ರೂ. ಮುಖಬೆಲೆಯ ನೋಟುಗಳನ್ನು (2000 rs. Notes) ಹಂತಹಂತವಾಗಿ ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸ್ವತಃ ಬಿಜೆಪಿ ಸಂಸದರೊಬ್ಬರು (BJP MP) ಸಂಸತ್ತಿನಲ್ಲಿ (Parliament) ಆಗ್ರಹಿಸಿದ ಘಟನೆ ನಡೆದಿದೆ. ರಾಜ್ಯಸಭೆಯ (Rajya Sabha) ಶೂನ್ಯವೇಳೆಯಲ್ಲಿ (Zero Hour) ಈ ವಿಷಯ ಪ್ರಸ್ತಾಪಿಸಿದ ಸಂಸದ ಹಾಗೂ ಬಿಹಾರದ ಮಾಜಿ ಡಿಸಿಎಂ ಸುಶೀಲ್‌ ಕುಮಾರ್‌ ಮೋದಿ (Sushil Kumar Modi), 2000 ರೂ. ಮುಖಬೆಲೆಯ ನೋಟುಗಳು ದೇಶದ ಬಹುತೇಕ ಎಟಿಎಂಗಳಿಂದ (ATM) ಕಣ್ಮರೆಯಾಗಿವೆ. ಸದ್ಯದಲ್ಲೇ ಅವು ಚಲಾವಣೆ ಕಳೆದುಕೊಳ್ಳಲಿವೆ ಎಂಬ ವದಂತಿಯೂ ಇದೆ. ರಿಸರ್ವ್‌ ಬ್ಯಾಂಕ್‌ (Reserve Bank of India) ಕಳೆದ 3 ವರ್ಷಗಳಿಂದ 2000 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿಲ್ಲ. ಈ ಎಲ್ಲ ವಿಷಯಗಳ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

1000 ರೂ. ಮುಖಬೆಲೆಯ ನೋಟು ಸ್ಥಗಿತಗೊಳಿಸಿ 2000 ರೂ. ಮುಖಬೆಲೆಯ ನೋಟು ಬಿಡುಗಡೆ ಮಾಡಿದ್ದರ ಹಿಂದೆ ಯಾವುದೇ ತರ್ಕ ಇಲ್ಲ. 2000 ರೂ. ನೋಟುಗಳನ್ನು ಹಣ ಸಂಗ್ರಹಿಸಿಡಲು ಬಳಸಲಾಗುತ್ತಿದೆ. ಹೀಗಾಗಿ 2000 ರೂ. ನೋಟುಗಳನ್ನು ಹಂತಹಂತವಾಗಿ ವಾಪಸ್‌ ಪಡೆಯಬೇಕು. ನೋಟು ವಿನಿಮಯ ಮಾಡಿಕೊಳ್ಳಲು ಜನರಿಗೆ 2 ವರ್ಷ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ: ಮೋದಿ ಸರ್ಕಾರದಿಂದ 1.25 ಲಕ್ಷ ಕೋಟಿ ರೂ. ಕಪ್ಪುಹಣ ವಶಕ್ಕೆ: ಕೇಂದ್ರ ಸಚಿವ

ಮೋದಿ ಸರ್ಕಾರ ಹಳೆಯ 500 ರೂ. ಹಾಗೂ 1,000 ರೂ. ನೋಟುಗಳನ್ನು ಬ್ಯಾನ್‌ ಮಾಡಿದ ಬಳಿಕ 2016 ರಲ್ಲಿ ಹೊಸ 500 ರೂ. ನೋಟುಗಳ ಜತೆಗೆ 2 ಸಾವಿರ ರೂ. ನೋಟುಗಳನ್ನು ದೇಶದಲ್ಲಿ ಪರಿಚಯಿಸಲಾಯ್ತು. ಕಪ್ಪು ಹಣ, ಭಯೋತ್ಪಾದನೆ ಹಾಗೂ ಇತರೆ ಗುರಿಗಳನ್ನು ಈಡೇರಿಸಲು ಈ ರೀತಿ ಮಾಡಲಾಗಿತ್ತು ಎಂದೂ ವರದಿಯಾಗಿತ್ತು.   

ಇನ್ನು, ತಮ್ಮ ಮನವಿಗೆ ಅಭಿವೃದ್ಧಿ ಹೊಂದಿದ ದೇಶಗಳನ್ನು ಉದಾಹರಿಸಿದ ಸುಶೀಲ್‌ ಕುಮಾರ್‌ ಮೋದಿ, ಅಮೆರಿಕದಲ್ಲಿ 100 ಡಾಲರ್‌ ನೋಟು ಹೆಚ್ಚು ಮೌಲ್ಯಯುತ ನೋಟಾಗಿದೆ, ಹಾಗೆ ಚೀನಾದಲ್ಲಿ 100 ಯುವಾನ್, ಕೆನಡಾದಲ್ಲಿ 100 ಕೆನಡಾ ಡಾಲರ್‌ ಹಾಗೂ ಯುರೋಪ್‌ ಒಕ್ಕೂಟದಲ್ಲಿ 200 ಯೂರೋ ಅತಿ ಹೆಚ್ಚಿನ ಮೌಲ್ಯಯುತ ನೋಟುಗಳಾಗಿದೆ ಎಂಬ ಉದಾಹರಣೆಯನ್ನು ನೀಡಿದ್ದಾರೆ. 

ಇದನ್ನೂ ಓದಿ: ಚಲಾವಣೆಯಿಂದ 2 ಸಾವಿರ ಮುಖ ಬೆಲೆಯ ನೋಟು ಹಿಂದೆ ಪಡೆಯುವ ಬಗ್ಗೆ ಮತ್ತಷ್ಟು ಸುಳಿವು?

ಅಲ್ಲದೆ, 2018ರಲ್ಲಿ 5,000 ಯೂರೋ ನೋಟುಗಳ ಬಳಕೆಯನ್ನು ಯುರೋಪಿಯನ್‌ ಒಕ್ಕೂಟ ನಿಲ್ಲಿಸಿದೆ. ಹಾಗೆ, ಮಾದಕವಸ್ತು ಕಳ್ಳಸಾಗಣೆ, ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನೆಗೆ ಹಣ ಫಂಡಿಂಗ್‌ ಹಾಗೂ ತೆರಿಗೆ ವಂಚನೆ ತಡೆಯಲು ಸಿಂಗಾಪುರ 2010ರಲ್ಲಿ 10 ಸಾವಿರ ಡಾಲರ್‌ ಮೌಲ್ಯದ ನೋಟುಗಳನ್ನು ನಿಲ್ಲಿಸಿತು. ಅದೇ ರೀತಿ, ಭಾರತ ಸಹ 2 ಸಾವಿರ ರೂ. ನೋಟನ್ನು ರದ್ದು ಮಾಡಬೇಕು ಎಂದೂ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಸುಶೀಲ್‌ ಕುಮಾರ್‌ ಮೋದಿ ಆಗ್ರಹಿಸಿದರು. ಅಲ್ಲದೆ, ಭಾರತದಲ್ಲಿ ಡಿಜಿಟಲ್‌ ಹಣ ವರ್ಗಾವಣೆ ಹೆಚ್ಚಾಗುತ್ತಿರುವುದರಿಂದ 2 ಸಾವಿರ ರೂ. ಮೌಲ್ಯದ ನೋಟಿನ ಅಗತ್ಯ ಇಲ್ಲ ಎಂದೂ ಬಿಜೆಪಿ ಸಂಸದ ಹೇಳಿದ್ದಾರೆ. 

ಇದನ್ನೂ ಓದಿ: ಕಳೆದ 2 ವರ್ಷ​ಗ​ಳಿಂದ ಒಂದೇ ಒಂದು 2000 ಮುಖ​ಬೆ​ಲೆ​ಯ ನೋಟು ಮುದ್ರಿ​ಸಿ​ಲ್ಲ: ಕೇಂದ್ರ!

Follow Us:
Download App:
  • android
  • ios