2019ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸೂಚಿಸಿದ ನಿಖರವಾದ ಸ್ಥಳದಲ್ಲೇ ಅಯೋಧ್ಯೆ ರಾಮಮಂದಿರ ನಿರ್ಮಾಣವಾಗಿದೆಯೇ ಎಂದು ಪರಿಶೀಲಿಸಲು ಸುಪ್ರೀಂ ಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಕೆಯಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಲು ಸಮಿತಿ ಅಥವಾ ಆಯೋಗವನ್ನು ರಚಿಸುವಂತೆ ಶ್ರೀ ರಾಮ ಜನ್ಮಭೂಮಿ ಕೇಸ್ ಟ್ರಸ್ಟ್ ಮನವಿ ಮಾಡಿದೆ.

ನವದೆಹಲಿ: ಅಯೋಧ್ಯೆಯ ರಾಮ ಮಂದಿರವು (Ayodhya Ram Mandir), ಸುಪ್ರೀಂ ಕೋರ್ಟ್ (Supreme Court) ತನ್ನ 2019ರ ತೀರ್ಪಿನಲ್ಲಿ ನಿರ್ಧರಿಸಿದ ನಿಖರವಾದ ಸ್ಥಳದಲ್ಲೇ ನಿರ್ಮಾಣವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು, ಒಂದು ಸಮಿತಿ ಅಥವಾ ಆಯೋಗವನ್ನು ರಚಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ.

ಅಯೋಧ್ಯೆ ಕೇಸ್‌ ಮತ್ತೆ ಸುಪ್ರೀಂಗೆ

2019ರ ನ.9ರಂದು ಸುಪ್ರೀಂ ತನ್ನ ಐತಿಹಾಸಿಕ ತೀರ್ಪಿನಲ್ಲಿ, ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತ್ತು. ಬೇರೆ ಪ್ರದೇಶದಲ್ಲಿ ಮಸೀದಿಯನ್ನು ನಿರ್ಮಿಸಲು, ಸುನ್ನಿ ವಕ್ಫ್ ಬೋರ್ಡ್‌ಗೆ 5 ಎಕರೆಗಳ ಪರ್ಯಾಯ ನಿವೇಶನವನ್ನು ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಈ ತೀರ್ಪಿನಲ್ಲಿ ಉಲ್ಲೇಖಿಸಿದ ಜಾಗದಲ್ಲಿಯೇ ರಾಮ ಮಂದಿರವನ್ನು ನಿರ್ಮಿಸಲಾಗಿದೆಯೇ ಎಂಬುದನ್ನು ಸಮೀಕ್ಷೆ ಮಾಡಲು ಸಮಿತಿ ಅಥವಾ ಆಯೋಗವನ್ನು ರಚಿಸುವಂತೆ ಕೋರಿ ಶ್ರೀ ರಾಮ ಜನ್ಮಭೂಮಿ ಕೇಸ್‌ ಟ್ರಸ್ಟ್‌ ಅರ್ಜಿ ಸಲ್ಲಿಸಿದೆ.

ಅಯೋಧ್ಯೆಯಲ್ಲಿ 150ರ ಪೈಕಿ 148 ನಿರ್ಮಾಣ ಕಾಮಗಾರಿ ಮುಕ್ತಾಯ

ಅಯೋಧ್ಯೆ ರಾಮ ಮಂದಿರ ಸಂಕೀರ್ಣದಲ್ಲಿನ 150 ನಿರ್ಮಾಣ ಕಾಮಗಾರಿಗಳ ಪೈಕಿ ಈಗಾಗಲೇ 148 ಕಾಮಗಾರಿಗಳು ಪೂರ್ಣಗೊಂಡಿದ್ದು ಅದನ್ನು ದೇಗುಲದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದೆ ಎಂದು ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ. ಸಮಿತಿಯ ಸಭೆ ಬಳಿಕ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ‘ಪ್ರಮುಖವಾಗಿ ದೇವಾಲಯದ ಹೊರ ಆವರಣ ಅಥವಾ ಪಾರ್ಕೋಟಾ ನಿರ್ಮಾಣವು ಬಾಕಿ ಉಳಿದಿದ್ದು, ಎಲ್ಲ ಕಾಮಗಾರಿಗಳನ್ನು ನ.15ರೊಳಗೆ ಪೂರ್ಣಗೊಳಿಸುವ ಗುರಿ ಹಾಕಿಕೊಂಡಿದ್ದೇವೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: Politics: ಸ್ವಚ್ಛ ಭಾರತ್, ರಾಮಮಂದಿರ ಆದ್ಮೇಲೆ ನೆಕ್ಸ್ಟ್ ಏನು? 'ಕೈ' ಪಡೆಯ ನಿದ್ದೆಗೆಡಿಸಿದ ಆ 'ಬ್ರಹ್ಮಾಸ್ತ್ರ' ಯಾವುದು?