ಕೇಂದ್ರದ ವಿರುದ್ಧ ಪ್ಯಾರಾಮಿಲಿಟರಿ ಆಕಾಂಕ್ಷಿಗಳ ಭಾರಿ ಪ್ರತಿಭಟನೆ,  ನೇಮಕಾತಿ ಮಾಡಿ, ಇಲ್ಲ ಸಾವೊಂದೇ ಮುಂದಿರುವ ಆಯ್ಕೆ ಎಂದ ಪ್ರತಿಭಟನಾಕಾರರು. ಮಹಾರಾಷ್ಟ್ರದಿಂದ ದೆಹಲಿ ತಲುಪಿದ ಪ್ರತಿಭಟನೆ, ಕೇಂದ್ರದ ವಿರುದ್ದ ಆಕ್ರೋಶ.

ದೆಹಲಿ(ಜು.16): ಅಗ್ನಿಪಥ ಪ್ರತಿಭಟನೆ ಕಾವು ತಣ್ಣಗಾಗುತ್ತಿದ್ದಂತೆ ಇದೀಗ ಪ್ಯಾರಾಮಿಲಿಟರಿ ಆಕಾಂಕ್ಷಿಗಳ ಪ್ರತಿಭಟನೆ ಆರಂಭಗೊಂಡಿದೆ. ತಮ್ಮನ್ನು ನೇಮಕಾತಿ ಮಾಡಿ, ಇಲ್ಲದಿದ್ದರೆ ಸಾವೊಂದೆ ನಮ್ಮ ಮುಂದಿರುವ ಆಯ್ಕೆ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ಆರಂಭಗೊಂಡಿದೆ. ಮಹಾರಾಷ್ಟ್ರದ ನಾಗ್ಪುರದಿಂದ ದೆಹಲಿ ತಲುಪಿದ ಪ್ರತಿಭಟನಾಕಾರರು ಇದೀಗ ಆಗ್ರಾದಿಂದ ಪ್ರತಿಭಟನಾ ಮೆರವಣಿ ಆರಂಭಿಸಿದ್ದಾರೆ. ಜುಲೈ 25 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಭಾರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ಯಾರಾಮಿಲಿಟರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಾಗ್ಪುರದಿಂದ ಆಗ್ರಾಗೆ ಆಗಮಿಸಿದ ಪ್ಯಾರಾಮಿಲಿಟರಿ ಅಕಾಂಕ್ಷಿಗಳನ್ನು ಆಗ್ರಾ ಕಾಂಗ್ರೆಸ್ ಪುಷ್ಪಗುಚ್ಚ ನೀಡುವ ಮೂಲಕ ಸ್ವಾಗತಿಸಿದೆ. ಪ್ಯಾರಾಮಿಲಿಟರಿ ಆಕಾಂಕ್ಷಿಗಳ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ನೀಡಿದೆ.

170 ಪುರಷ ಅಭ್ಯರ್ಥಿಗಳು ಹಾಗೂ 30 ಮಹಿಳಾ ಅಭ್ಯರ್ಥಿಗಳು ದೆಹಲಿ ಚಲೋ ಪ್ರತಿಭಟನಾ(Paramilitary aspirants protest ) ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಕೇಂದ್ರ ಸರ್ಕಾರ ನೇಮಕ ಮಾಡುವವರೆಗೂ ಹೋರಾಟ ಮಂದುವರಿಸುತ್ತೇವೆ ಎಂದು ಪ್ಯಾರಾಮಿಲಿಟರಿ ಅಕಾಂಕ್ಷಿ ರೂಪಾಲಿ ಹೇಳಿದ್ದಾರೆ. ಅಸಮಂಜಸ ಯೋಜನೆ ಜಾರಿ ಮಾಡಿರುವ ಕೇಂದ್ರ ಸರ್ಕಾರ(BJP Government) ಯುವಕರ ಉದ್ಯೋಗವನ್ನು ಕಿತ್ತುಕೊಂಡಿದೆ. ಇದೀಗ ಯುವಕರಲ್ಲಿ ಹಣವೂ ಇಲ್ಲ, ಕೆಲಸವೂ ಇಲ್ಲ. ಕೇಂದ್ರ ಸರ್ಕಾರದ ವಿರುದ್ಧ ಯುವ ಸಮೂಹ ಆಕ್ರೋಶ ಹೊರಹಾಕುತ್ತಿದೆ ಎಂದು ಆಗ್ರಾ ಕಾಂಗ್ರೆಸ್ ಕಾರ್ಯದರ್ಶಿ ಅಮಿತ್ ಸಿಂಗ್ ಹೇಳಿದ್ದಾರೆ.

ಭಾರತೀಯ ಸೇನೆಯಿಂದ ರಿಜೆಕ್ಟ್ ಆಗಿದ್ದ ಯುವಕ ಉಕ್ರೇನ್‌ ಸೇನೆ ಸೇರಿದ

ಖಾಲಿ ಇರುವ ಪ್ಯಾರಾಮಿಲಿಟರಿ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಬರೆದು, ವೈದ್ಯಕೀಯ ತಪಾಸಣೆ, ವೈದ್ಯಕೀಯ ಪರೀಕ್ಷೆಗಳು ಮುಗಿದಿದೆ. ಇದರ ನಡುವೆ ಅಗ್ನಿಪಥ ಯೋಜನೆ ಜಾರಿಗೊಳಿಸಿದ ಕಾರಣ ಈಗಾಗಲೇ ಎಲ್ಲಾ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡಿರುವ ಅಕಾಂಕ್ಷಿಗಳ ಭವಿಷ್ಯ ಅಯೋಮಯವಾಗಿದೆ. ಕೇಂದ್ರ ಸರ್ಕಾರ ಅಗ್ನಿವೀರರ(Agnipath Recruitment) ಬೆನ್ನುಬಿದ್ದಿದೆ. ಹೀಗಾಗಿ ನಮ್ಮ ಭವಿಷ್ಯ ಹಾಳುಗುತ್ತಿದೆ. ನೇಮಕಾತಿ ಮಾಡಿಕೊಳ್ಳದೇ, ಯಾವುದೇ ಸೂಚನೆ ನೀಡದೆ ಸುಮ್ಮನಾಗಿದೆ ಎಂದು ಪ್ಯಾರಾಮಿಲಿಟಿ ಆಕಾಂಕ್ಷಿ ವಿಶಾಲ್ ಮಹ್ತೋ ಆಕ್ರೋಶ ಹೊರಹಾಕಿದ್ದಾರೆ.

2018ರಲ್ಲಿ ಪ್ಯಾರಾಮಿಲಿಟರಿಯಲ್ಲಿ ಖಾಲಿ ಇರುವು ಪೇದೆಗಳ ಹುದ್ದೆಗೆ ನೇಮಕಾತಿ ಆರಂಭಿಸಲಾಗಿತ್ತು. 60,120 ಖಾಲಿ ಹುದ್ದೆಗಳ ಪೈಕಿ ಈಗಾಗಲೇ 55,912 ಹುದ್ದೆಗಳ ನೇಮಕಾತಿ ಪೂರ್ಣಗೊಳಿಸಲಾಗಿದೆ. ಇನ್ನು 4,000 ಅಭ್ಯರ್ಥಿಗಳ ನೇಮಕಾತಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಆಯ್ಕೆಯಾಗಿರುವ 4,000 ಪ್ಯಾರಾಮಿಲಿಟರಿ ಅಕಾಂಕ್ಷಿಗಳು ಕಳೆದ 16 ತಿಂಗಳಿನಿಂದ ಪ್ರತಿಭಟನೆ ಮಾಡುತ್ತಲೇ ಇದ್ದಾರೆ. 

ಅರೆಸೇನಾ ಪಡೆಗಳ ಸಾಮಾನ್ಯ ಸೈನಿಕನಿಗೂ ವಿಮಾನ ಪ್ರಯಾಣ: ಕೇಂದ್ರ!

ಪ್ರತಿಭಟನಕಾರರು ಸತತ ಪ್ರತಿಭಟನೆಯಿಂದ ಬಳಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಭಟನಾಕಾರರ ಬೇಡಿಕೆ ಆಲಿಸಬೇಕು. ತಕ್ಷಣವೇ ನೇಮಕಾತಿಗೆ ಆದೇಶಿಸಬೇಕು ಎಂದು ಪ್ಯಾರಾಮಿಲಿಟರಿ ಆಕಾಂಕ್ಷಿಗಳು ಆಗ್ರಹಿಸಿದ್ದಾರೆ.