ನವದೆಹಲಿ(ಫೆ.21): ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಅರೆಸೇನಾ ಪಡೆಗಳಿಗೂ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದೆ. 

ಈ ಕುರಿತು ಇಂದು ಗೃಹ ವ್ಯವಹಾರಗಳ ಸಚಿವಾಲಯ ಆದೇಶದ ಹೊರಿಡಿಸಿದ್ದು, ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿರುವ ಸಿಆರ್​ಪಿಎಫ್ ಸೇರಿದಂತೆ ಎಲ್ಲಾ ಅರೆಸೇನಾ ಪಡೆಗಳ ಸೈನಿಕರೂ ಕೂಡ ಕಮರ್ಷಿಯಲ್ ಫ್ಲೈಟ್ ಬಳಸಬಹುದಾಗಿದೆ ಎಂದು ತಿಳಿಸಿದೆ.

ರಜೆಯ ಮೇಲೆ ಹೋಗುವಾಗ ಹಾಗೂ ರಜೆ ಮುಗಿಸಿ ಕರ್ತವ್ಯಕ್ಕೆ ಮರಳುವಾಗ ಈ ಯೋಧರು ದೆಹಲಿ-ಶ್ರೀನಗರ, ಜಮ್ಮು-ಶ್ರೀನಗರದ ಮಾರ್ಗಗಳಲ್ಲಿ ತಮ್ಮಿಷ್ಟದ ವಿಮಾನಗಳನ್ನು ಬಳಕೆ ಮಾಡಬಹುದಾಗಿದೆ.

ಪುಲ್ವಾಮ ಘಟನೆ ನಡೆದ ನಂತರ ಸೈನಿಕರನ್ನು ರಸ್ತೆಯ ಮೇಲೆ ಸಾಗಿಸುವ ಬದಲು ವಿಮಾನದಲ್ಲಿ ಕರೆದೊಯ್ಯಬಹುದಿತ್ತೆಂಬ ಸಲಹೆಗಳು ಮತ್ತು ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಹೊಸ ಆದೇಶ ಹೊರಡಿಸಿದೆ.